ಶಿವಮೊಗ್ಗ: ಪ್ರವಾಹ ಸಂತ್ರಸ್ತರು ದಾಖಲೆ ಕಳೆದುಕೊಂಡಿದ್ದು, ಅಂತಹ ಸಂತ್ರಸ್ತರಿಗೆ ದಾಖಲೆ ಕೇಳದೇ ಪರಿಶೀಲನೆ ನಡೆಸಿ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಶಿವಮೊಗ್ಗ ಪೀಸ್ ಆರ್ಗನೈಜೇಷನ್ ವತಿಯಿಂದ ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ನೆರೆಹಾನಿ ಸಂತ್ರಸ್ತ ಕುಟುಂಬಗಳು ದಾಖಲೆ ಇಲ್ಲದೆ ಪರದಾಡುತ್ತಿದ್ದಾರೆ. ಸಂತ್ರಸ್ತರ ದಾಖಲೆಗಳನ್ನು ಸದ್ಯದ ಪರಿಸ್ಥಿತಿಯಲ್ಲಿ ಪರಿಶೀಲಿಸದೆ ಪರಿಹಾರ ನೀಡಬೇಕು. ಈ ಮೂಲಕ ಪ್ರವಾಹ ಪೀಡಿತ ಕುಟುಂಬಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಅತೀ ಹೆಚ್ಚಿನ ಮಳೆ ಮತ್ತು ನೆರೆ ಹಾನಿಯಿಂದಾಗಿ ಜಿಲ್ಲೆಯ ವಿವಿಧ ಪ್ರದೇಶಗಳು ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಬಟ್ಟೆ, ಪಾತ್ರೆ, ಆಹಾರ, ಅಗತ್ಯ ವಸ್ತು, ದಾಖಲೆ ನೀರು ಪಾಲಾಗಿವೆ. ಮನೆಗಳು ಬಿದ್ದಿವೆ. ಇದರಿಂದಾಗಿ ನೆರೆ ಸಂತ್ರಸ್ತರು ಸಂಕಷ್ಟದಲ್ಲಿದ್ದಾರೆ ಎಂದು ಮನವಿದಾರರು ತಿಳಿಸಿದರು.
ಜಿಲ್ಲಾಡಳಿತ, ಪಾಲಿಕೆ, ಸಂಘ ಸಂಸ್ಥೆಗಳು, ಸಾರ್ವಜನಿಕರಿಂದ ನೆರವು ನೀಡಲಾಗಿದೆ. ಆದರೂ, ಪ್ರವಾಹ ಪೀಡಿತ ಕುಟುಂಬಗಳಿಗೆ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರದಿಂದ ಪ್ರತಿ ಕುಟುಂಬಕ್ಕೆ ಅಗತ್ಯ ವಸ್ತು ಖರೀದಿಗೆ 10 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. ಹಾನಿಗೊಳಗಾದ ಮನೆಗಳ ದುರಸ್ತಿಗೆ 1 ಲಕ್ಷ ರೂ., ಸಂಪೂರ್ಣ ನಾಶವಾದ ಮನೆಗಳ ಪುನರ್ ನಿರ್ಮಾಣಕ್ಕೆ 5 ಲಕ್ಷ ರೂ., ನೆರವು ನೀಡಲಾಗುತ್ತಿದೆ. ಆದರೆ ಅತಿ ಹೆಚ್ಚು ಸಂತ್ರಸ್ತರ ಬಳಿ ಸೂಕ್ತ ದಾಖಲೆಗಳಿಲ್ಲದೆ ಪರಿಹಾರದ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಮನೆಗೆ ನೀರು ನುಗ್ಗಿದ ಪರಿಣಾಮ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ಇನ್ನು ಬಾಡಿಗೆ ಮನೆಯಲ್ಲಿರುವವರಿಗೆ ಸರ್ಕಾರದ ಸಹಾಯಧನ ಸಿಗುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಅಧಿಕಾರಿಗಳು ಸಂತ್ರಸ್ತರ ಪರಿಶೀಲನೆ ಸಂದರ್ಭದಲ್ಲಿ ದಾಖಲೆ ಇಲ್ಲದಿದ್ದರೂ ನೆರವು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಸಂಘಟನೆಯ ಪ್ರಮುಖರಾದ ರಿಯಾಜ್ ಅಹ್ಮದ್, ಸಲಾಂ, ಸೈಯದ್ ಶಫಿವುಲ್ಲಾ, ಇರ್ಷಾದ್ ಮೊದಲಾದವರಿದ್ದರು.