ಬೆಂಗಳೂರು: ರಾಜ್ಯದಲ್ಲಿ ಬರ ಪರಿಹಾರ ಪಟ್ಟಿಯಿಂದ ಹೊರಗುಳಿದ ಮಳೆ ಆಧಾರಿತ ಬೆಳೆಗಳಿಗೂ ಪರಿಹಾರಧನ ನೀಡಲು ಸರ್ಕಾರ ನಿರ್ಧರಿಸಿದೆ.
ರಾಜ್ಯದ ಬರ ಪರಿಹಾರ ಪಟ್ಟಿಯಲ್ಲಿ ಸೇರದೆ ಅನೇಕ ರೈತರು ಹೊರಗುಳಿದಿದ್ದಾರೆ. ಅಂತಹ ಹಿಡುವಳಿದಾರರಿಗೂ ಪರಿಹಾರ ಸಿಗಲಿದೆ. ಪಟ್ಟಿಯಲ್ಲಿ ಸೇರದೆ ಇದ್ದ ಮಳೆ ಆಧಾರಿತ ಬೆಳೆಗಳಿಗೂ ಪರಿಹಾರ ವಿತರಿಸಲಾಗುವುದು. ಅಷ್ಟೇ ಅಲ್ಲ, 2 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶವನ್ನು ಒಳಗೊಳ್ಳುವ ಸುಮಾರು 1.63 ಲಕ್ಷ ಅರ್ಹ ರೈತರಿಗೂ ಪರಿಹಾರ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದಲ್ಲದೆ, ಸಣ್ಣ ಮತ್ತು ಅತಿ ಸಣ್ಣ ಒಣಬೇಸಾಯ ಮಾಡುವ ಸುಮಾರು 16 ಲಕ್ಷ ಕುಟುಂಬಗಳಿಗೆ ಬರಗಾಲದಿಂದ ಆಗಿರುವ ಜೀವನೋಪಾಯದ ನಷ್ಟಕ್ಕೆ ಪರಿಹಾರವಾಗಿ ತಲಾ 3000 ರೂ. ಪರಿಹಾರ ನೀಡಲೂ ಸರ್ಕಾರ ತೀರ್ಮಾನಿಸಿದೆ. ಈ ರೈತರಿಗೆ ಒಟ್ಟಾರೆ 460 ಕೋಟಿ ರೂ. ಪರಿಹಾರ ರೂಪದಲ್ಲಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ಇನ್ನು ಎನ್‌ಡಿಆರ್‌ಎಫ್ ಹಣ ಬಿಡುಗಡೆಯಾದ ತಕ್ಷಣ ರೈತರಿಗೆ ಅರ್ಹತೆ ಪ್ರಕಾರ ಪರಿಹಾರ ಪಾವತಿಸಲಾಗಿದೆ. ಇದುವರೆಗೆ ಮೊದಲ ಹಂತದಲ್ಲಿ 2000 ರೂ. ಮತ್ತು ಎರಡನೇ ಕಂತಿನ ಪರಿಹಾರವೂ ಸೇರಿದಂತೆ ಒಟ್ಟು 32.12 ಲಕ್ಷ ರೈತರ ಖಾತೆಗೆ ಸಂಪೂರ್ಣ ಬೆಳೆ ಪರಿಹಾರ ಜಮೆ ಮಾಡಲಾಗಿದೆ. ಅಲ್ಲದೆ, ಇನ್ನೂ ಸುಮಾರು ಎರಡು ಲಕ್ಷ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ನಡೆದಿದೆ. ಈ ಸಂಬಂಧದ ದಾಖಲೆಗಳ ಪರಿಶೀಲನೆ ಸಾಗಿದೆ ಎಂದು ಹೇಳಿದರು.
ನೀರು ಮತ್ತು ಮೇವಿನ ನಿರ್ವಹಣೆಗಾಗಿ ಇದುವರೆಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ 202 ಸಭೆಗಳನ್ನು ನಡೆಸಿದೆ ಹಾಗೂ 462 ತಾಲೂಕು ಮಟ್ಟದ ಟಾಸ್ಕ್ಫೋರ್ಸ್ ಸಭೆಗಳನ್ನು ಮಾಡಲಾಗಿದೆ. ನೀರಿನ ಸಮಸ್ಯೆಯಿಂದ 270 ಗ್ರಾಮಗಳಿಗೆ ಟ್ಯಾಂಕರ್ ಮುಖಾಂತರ ಮತ್ತು 594 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. 153 ನಗರ ಪ್ರದೇಶದ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ಮತ್ತು 35 ವಾರ್ಡ್‌ಗಳಿಗೆ ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ಅಗತ್ಯ ಇರುವ ವಿವಿಧ ಭಾಗಗಳಲ್ಲಿ 47 ಮೇವಿನ ಬ್ಯಾಂಕ್‌ಗಳನ್ನು ಮತ್ತು 28 ಕಡೆಗಳಲ್ಲಿ ಗೋಶಾಲೆಗಳನ್ನು ತೆರೆದು ಮೇವಿನ ಕೊರತೆ ನೀಗಿಸಲಾಗುತ್ತಿದೆ. ಈ ವೆಚ್ಚ ಭರಿಸಲು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳ ಖಾತೆಗಳಲ್ಲಿ ರೂ. 836 ಕೋಟಿ ಅನುದಾನ ಲಭ್ಯವಿದೆ ಎಂದು ಮಾಹಿತಿ ನೀಡಿದರು.