ರಾಮದುರ್ಗ: ಮೂರು ವರ್ಷದ ಹಿಂದಿನ ಪ್ರವಾಹದ ನೆನಪು ಮಾಸುವ ಮುನ್ನವೇ ಹಾಗೂ ಇನ್ನೂ ಪರಿಹಾರಕ್ಕಾಗಿ ಕಾಯುತ್ತಿರುವಾಗಲೇ ಮತ್ತೇ ಮಳೆರಾಯನ ಆಟ ನದಿ ಪಾತ್ರದ ಜನರ ನಿದ್ದೆಗೆಡುವಂತೆ ಮಾಡಿದ್ದು, ಎಲ್ಲಿ ಮತ್ತೆ ಪ್ರವಾಹ ಬಂದೀತೋ ಎಂಬ ಆತಂಕಕ್ಕೆ ಒಳಗಾಗುವಂತೆ ಮಾಡಿದೆ.
ಎಷ್ಟೋ ವರ್ಷಗಳಿಂದ ತಾಲೂಕಿನಲ್ಲಿ ಸಮರ್ಪಕ ಮಳೆಯಾಗದೆ ಸಾಕಷ್ಟು ರೈತರು ಸಂಕಷ್ಟ ಅನುಭವಿಸುತ್ತಿರುವ ಸಮಯದಲ್ಲಿಯೇ, 2019 ರಲ್ಲಿ ಅಲ್ಪಸ್ವಲ್ಪ ಮಳೆಯನ್ನು ನಂಬಿಕೊಂಡು ಬಿತ್ತನೆ ಮಾಡಿದ್ದ ನದಿ ಪಾತ್ರದ ರೈತರಿಗೆ ಮಳೆಯಾಗದೆ ಬಂದ ಪ್ರವಾಹ ಬದುಕನ್ನೇ ಬರಡಾಗುವಂತೆ ಮಾಡಿ ಇನ್ನೂ ಎಷ್ಟೋ ರೈತರಿಗೆ ಪರಿಹಾರ ಸಿಗದೆ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
2019 ರಲ್ಲಿ ತಾಲೂಕಿನಲ್ಲಿ ಉಂಟಾದ ಪ್ರವಾಹದಿಂದಾಗಿ 4973 ರೈತರ ಕೃಷಿಯ ಅಂದಾಜು 15,350 ಹೆಕ್ಟರ್ ಹಾಗೂ ತೋಟಗಾರಿಕೆಯ 383 ಹೆಕ್ಟರ್ ಒಳಗೊಂಡು 15,733 ಹೆಕ್ಟರ್ ಪ್ರದೇಶದ ಬೆಳೆ ಹಾನಿಯಾಗಿತ್ತು. ಇದರಲ್ಲಿ ಇನ್ನೂ 528 ಜನ ರೈತರಿಗೆ ಮೂರು ವರ್ಷಗಳಾದರೂ ಪರಿಹಾರ ದೊರೆಯದೆ ಇರುವುದು ಚಿಂತೆಗೀಡು ಮಾಡಿದೆ.
ಅಂದು ಅಲ್ಪಸ್ವಲ್ಪ ಮಳೆಯನ್ನು ನಂಬಿಕೊಂಡು ನದಿಯ ಪಕ್ಕದ ರೈತರು ಸಾಲಸೂಲ ಮಾಡಿ ಬೀಜ ಹಾಕಿ ಬೆಳೆದ ಬೆಳೆ ಮಲಪ್ರಭೆಯ ಪ್ರವಾಹಕ್ಕೆ ಕೊಚ್ಚಿಕೊಂಡು ಭೂಮಿಯೇ ಗುರುತು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ನದಿ ಪಾತ್ರಕ್ಕೆ ಹೊಂದಿಕೊಂಡ ಬಹುತೇಕ ರೈತರು ಕಬ್ಬು, ಬಾಳೆ ಬೆಳೆಯನ್ನು ಮೂಲ ಬೆಳೆಯನ್ನಾಗಿ ನಾಟಿ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಇನ್ನೂ ಕೆಲ ರೈತರು ತರಕಾರಿ ಸೇರಿದಂತೆ ಇತರ ಬೆಳೆಗಳನ್ನು ಬೆಳೆದು ಹಾಗೋ ಹೀಗೋ ಜೀವನ ಸಾಗಿಸಿಕೊಂಡು ಬರುತ್ತಿದ್ದರು. ಆದರೆ 2019 ರಲ್ಲಿ ಬಂದ ಪ್ರವಾಹ ರೈತರ ಜೀವನವನ್ನೆ ಹಿಂಡಿ ಹಿಪ್ಪೆ ಮಾಡಿದ್ದು, ಜಾನುವಾರಗಳು ಮೇವಿಗಾಗಿ ಪರಿತಪಿಸುವಂತೆ ಮಾಡಿತ್ತು.
ಸಾಲದ ಸುಳಿಗೆ ಸಿಲುಕಿದ ರೈತರು: ಇರುವ ಬರುವ ಹಣವನ್ನೆಲ್ಲ ಹೊಲಗಳಿಗೆ ಸುರಿದ ರೈತರು ಒಂದಿಷ್ಟಾದರೆ, ಸಾಲಸೂಲ ಮಾಡಿ ಬಿತ್ತನೆ ಮಾಡಿ ಮುಂದೆ ಬರುವ ಬೆಳೆಯನ್ನು ನಂಬಿಕೊಂಡಿದ್ದ ರೈತರಿಂದು ಸಾಲದ ಸುಳಿಗೆ ಸಿಲುಕಿ ಸರಕಾರದ ಪರಿಹಾರದ ನಿರೀಕ್ಷೆಯಲ್ಲಿ ಕಾಲಕಳೆಯುತ್ತಿದ್ದಾರೆ. ಆಗಲೇ ಮಾಡಿದ್ದ ಸಾಲ ತೀರಿಸಲಾಗದ ರೈತರು ಸಾಕಷ್ಟಿರುವಾಗ ಪ್ರವಾಹದಿಂದಾದ ಅನಾಹುತ ಮತ್ತಷ್ಟು ಸಾಲದ ಕೂಪಕ್ಕೆ ತಳ್ಳಿದೆ.
ಅಂದಾಜು ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿ: ಕಬ್ಬು-7,198 ಹೆಕ್ಟರ್, ಗೋವಿನ ಜೋಳ- 5,702 ಹೆಕ್ಟರ್, ಸಜ್ಜೆ-1200 ಹೆಕ್ಟರ್, ಹೆಸರು-785 ಹೆಕ್ಟರ್, ಸೂರ್ಯಕಾಂತಿ- 349 ಹೆಕ್ಟರ್, ಜೋಳ- 65 ಹೆಕ್ಟರ್, ಹತ್ತಿ- 30 ಹೆಕ್ಟರ್, ಶೇಂಗಾ- 18 ಹೆಕ್ಟರ್, ತೋಟಗಾರಿಕೆಯ ಬಾಳೆ, ಈರುಳ್ಳಿ, ಹೂವಿನ ಬೆಳೆ ಸೇರಿದಂತೆ- 383 ಹೆಕ್ಟರ್ ಹಾನಿ ಸಂಭವಿಸಿತ್ತು.
ಪ್ರವಾಹ ಬಂದು ತಾಲೂಕಿನಲ್ಲಿ ಸಾವಿರಾರು ರೈತರ ಬೆಳೆಯಲ್ಲ ಹಾಳಾಗಿ ಹೋಗಿದ್ದು, ಭೂಮಿಯಲ್ಲಿನ ಫಲವತ್ತಾದ ಮಣ್ಣೆಲ್ಲಾ ಕೊಚ್ಚಿಕೊಂಡು ಹೋಗಿದೆ. ಅದನ್ನು ಸರಿಪಡಿಸಿಕೊಂಡು ಉಳಿಮೆ ಮಾಡಬೇಕಾದರೆ ವರ್ಷಗಳೇ ಗತಿಸಿದವು. ಇನ್ನೂ ಎಷ್ಟೋ ರೈತರಿಗೆ ಪರಿಹಾರ ಸಿಕ್ಕಿಲ್ಲ. ಈ ಕುರಿತು ಸಾಕಷ್ಟು ಹೋರಾಟ ಮಾಡಲಾಗಿದ್ದರೂ ಸರಕಾರದಿಂದ ಇನ್ನೂ ಪರಿಹಾರ ಸಿಕ್ಕಿಲ್ಲ. –
ಯಲ್ಲಪ್ಪ ದೊಡಮನಿ, ರೈತ ಮುಖಂಡರು, ರಂಕಲಕೊಪ್ಪ
2019 ರಲ್ಲಿ ಉಂಟಾದ ಮಲಪ್ರಭಾ ನದಿಯ ಪ್ರವಾಹದಿಂದ ತಾಲೂಕಿನಲ್ಲಿ ಕೃಷಿ ಹಾಗೂ ತೋಟಗಾರಿಕೆ ಸೇರಿದಂತೆ ಒಟ್ಟು 4973 ರೈತರ 15,733 ಹೆಕ್ಟರ್ ಪ್ರದೇಶದ ಬೆಳೆ ಹಾನಿಯಾಗಿತ್ತು. ಈಗಾಗಲೇ 4445 ರೈತರಿಗೆ ಪರಿಹಾರ ನೀಡಲಾಗಿದ್ದು, 528 ರೈತರ ದಾಖಲೆಗಳು ಹೊಂದಾಣಿಕೆಯಾಗದ ಕಾರಣ ವಿಳಂಬವಾಗಿತ್ತು. ಈಗ ಸರಿ ಮಾಡಿ ಆ ಎಲ್ಲ ರೈತರಿಗೂ ಪರಿಹಾರಕ್ಕೆ ವರದಿ ಕಳಿಸಲಾಗಿದೆ. –
ಮಲ್ಲಿಕಾರ್ಜುನ ಹೆಗ್ಗನ್ನವರ, ತಹಶೀಲ್ದಾರರು, ರಾಮದುರ್ಗ
-ಈರನಗೌಡ ಪಾಟೀಲ