ಕುಂದಾಪುರ: ಸಿಐಟಿಯು, ಕಟ್ಟಡ ಕಾರ್ಮಿಕ ಸಂಘಟನೆಗಳ ಒತ್ತಾಯದ ಮೇರೆಗೆ ಮುಖ್ಯಮಂತ್ರಿಗಳು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ರಾಜ್ಯದ ನೋಂದಾಯಿತ ಪ್ರತಿಯೊಬ್ಬ ಕಾರ್ಮಿಕನಿಗೂ ತಲಾ 5,000 ರೂ.ಗಳನ್ನು ಘೋಷಣೆ ಮಾಡಿದ್ದಾರೆ.
ಮಂಡಳಿಯು ಮೊದಲ ಕಂತುಗಳನ್ನು ದಾಖಲೆಗಳು ಲಭ್ಯವಿರುವ ಕೆಲವು ಕಾರ್ಮಿಕರ ಖಾತೆಗೆ ಮಾತ್ರ ಜಮೆ ಮಾಡಿತ್ತು. ವಿವರಗಳು ಲಭ್ಯಗಳಿಲ್ಲದ ಕಟ್ಟಡ ಕಾರ್ಮಿಕರಿಗೆ ರೂ. 5,000 ಜಮೆ ಆಗದಿರುವುದನ್ನು ಪ್ರಶ್ನಿಸಿ ಸಿಡಬ್ಲ್ಯೂಎಫ್ಐಯು ರಾಜ್ಯ ಸಮಿತಿ ಕರೆಯ ಮೇರೆಗೆ ಉಡುಪಿ ಕಾರ್ಮಿಕ ಅಧಿಕಾರಿಗಳನ್ನು ಭೇಟಿ ಮಾಡಿ ಕೂಡಲೇ ಉಳಿದ ಕಾರ್ಮಿಕರಿಗೂ ಜಮೆ ಮಾಡಿಸಲು ಆಗ್ರಹಿಸಿ ಜಿಲ್ಲೆಯ 3 ನೋಂದಾಯಿತ ಸಂಘಟನೆಗಳು ಸಮನ್ವಯ ಸಮಿತಿ ನೇತೃತ್ವದಲ್ಲಿ ಮನವಿ ನೀಡಲಾಯಿತು.
ಈ ವೇಳೆಯಲ್ಲಿ ಮನವಿಗೆ ಸ್ಪಂದಿಸಿ ಮಾತನಾಡಿದ ಕಾರ್ಮಿಕ ಅಧಿಕಾರಿ ಬಾಲಕೃಷ್ಣ, ಈಗಾಗಲೇ ಜಿಲ್ಲೆಯ ಸುಮಾರು 14,000ಕ್ಕಿಂತ ಅಧಿಕ ಕಾರ್ಮಿಕರಿಗೆ ಮಂಡಳಿಯೇ ಹಣ ಜಮೆ ಮಾಡಿದ್ದು ಉಳಿದ 7 ಸಾವಿರ ಆಸುಪಾಸು ಕಾರ್ಮಿಕರಿಗೆ ಜಮೆ ಮಾಡಲು ಇಲಾಖೆ ದಿನನಿತ್ಯ ಕೆಲಸ ಮಾಡುತ್ತಿದೆ. ಈಗಾಗಲೇ ಜಮೆ ಆಗಿರುವವರ ಪಟ್ಟಿಗಳು ಹಾಗೂ ಇಲಾಖೆಗೆ ಸಂಘಗಳು ಇತರರು ನೀಡಿದ ಪಟ್ಟಿಗಳು ಮಿಶ್ರಣ ಆಗಿರುವುದರಿಂದ ಸ್ವಲ್ಪ ಗೊಂದಲಗಳಾಗಿದ್ದು ವಿಂಗಡಿಸುವ ಕೆಲಸ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಉಳಿದ ಎಲ್ಲರ ಖಾತೆಗೂ ಕೋವಿಡ್ ಪರಿಹಾರ ಜಮೆಯಾಗಲಿದೆ. ಒಂದು ವೇಳೆ ಅದರ ಅನಂತರವೂ ಕಣ್ತಪ್ಪಿನಿಂದ ಅಥವಾ ಕೆಲವು ತಾಂತ್ರಿಕ ಕಾರಣಗಳಿಂದ ಹಣ ಖಾತೆಗೆ ಜಮೆಯಾಗದೇ ಇದ್ದರೆ ಜೂ.30 ಅನಂತರ ಅವರ ಪಾಸ್ ಪುಸ್ತಕ ವಿವರಗಳನ್ನು ಬ್ಯಾಂಕಿನಿಂದ ಎಂಟ್ರಿ ಮಾಡಿಸಿ ನೀಡಿದರೆ ಅವರಿಗೂ ನ್ಯಾಯ ಒದಗಿಸಲಾಗುವುದು ಎಂದರು.
ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ಸಂಚಾಲಕ ಸುರೇಶ್ ಕಲ್ಲಾಗರ, ಶೇಖರ ಬಂಗೇರ, ರೊನಾಲ್ಡ್, ರಾಜೇಶ್ ಕ್ವಾಡ್ರಸ್, ದಯಾನಂದ ಕೋಟ್ಯಾನ್, ಸಂತೋಷ್ ಹೆಮ್ಮಾಡಿ, ಸುಭಾಶ್ ನಾಯ್ಕ, ಗಣೇಶ್ ನಾಯ್ಕ , ವೆಂಕಟೇಶ್ ಕೋಣಿ ಇದ್ದರು.