ಹುಣಸೂರು: ತಾಲೂಕಿನಲ್ಲಿ ಅತಿಯಾದ ಮಳೆ ಹಾಗೂ ನೆರೆಯಿಂದ ಹನಗೋಡು ಹೋಬಳಿಯಲ್ಲಿ ತಂಬಾಕು ಬೆಳೆ ನಷ್ಟ ಹಾಗೂ ಹದ ಮಾಡುವ ಬ್ಯಾರನ್‌ಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ತಂಬಾಕು ಮಂಡಳಿ ನಿರ್ದೇಶಕ ಟಿ.ವಿ.ರವಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ತಾಲೂಕಿನ ಹನಗೋಡು, ತಟ್ಟೆಕೆರೆ, ನಿಲುವಾಗಿಲು ಸೇರಿದಂತೆ ಅನೇಕ ಗ್ರಾಮಗಳಿಗೆ ಭೇಟಿ ನೀಡಿ, ತಂಬಾಕು ಬೆಳೆ ನಷ್ಟ ಹಾಗೂ ನೂರಾರು ಬ್ಯಾರನ್‌ಗಳು ಕುಸಿದು ಬಿದ್ದಿರುವುದನ್ನು ಪರಿಶೀಲಿಸಿದರು.
ವರದಿಗೆ ಸೂಚನೆ: ತಾಲೂಕಿನಲ್ಲಿ ಪ್ರವಾಹದಿಂದ ಹಾನಿಗೊಳಗಾದ ಪ್ರತಿ ಬೆಳೆಗಾರರ ಮಾಹಿತಿಯನ್ನು ತಂಬಾಕು ಮಂಡಳಿ ಅಧಿಕಾರಿಗಳು ತಮಗೆ ನೀಡಲು ಸೂಚಿಸಿದ ಅವರು, ವರದಿ ಬಂದ ನಂತರ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರೋಪಾಯಗಳನ್ನು ನಿರ್ಧರಿಸಲಾಗುವುದು ಎಂದ ಹೇಳಿದರು.
ಬ್ಯಾರನ್‌ಗೆ ವಿಮೆ: ರೈತರಿಂದ ಮಾಹಿತಿ ಪಡೆದು ಮಾತನಾಡಿದ ಅವರು, ರೈತರ ಬ್ಯಾರನ್‌ಗಳಿಗೆ ತಂಬಾಕು ಮಂಡಳಿ ವಿಮೆ ಹಣ ಕಟ್ಟಿಸಿಕೊಂಡಿದೆ. ವಿಮಾ ಕಂಪನಿಯೊಂದಿಗೆ ಚರ್ಚಿಸಿ ಗರಿಷ್ಠ ಪರಿಹಾರ ಕಲ್ಪಿಸಲಾಗುವುದು. ಪ್ರತಿ ರೈತರು 2-3 ಬ್ಯಾರನ್ ಲೈಸೆನ್ಸ್ ಹೊಂದಿದ್ದು, ಮಳೆಯಿಂದ ಹಾನಿಗೊಳಗಾಗಿದ್ದರೆ ಅಂತಹವರಿಗೆ ಮೂರು ವರ್ಷಗಳ ಕಾಲಾವಕಾಶ ನೀಡಲಾಗುತ್ತಿದ್ದು, ಅಷ್ಟರೊಳಗೆ ಅವರು ಮೂರು ಬ್ಯಾರನ್ ಕಟ್ಟಿಕೊಳ್ಳಬೇಕು. ಅಲ್ಲಿಯವರೆಗೆ ಆ ರೈತರಿಗೆ ಪ್ರತಿವರ್ಷವೂ ಪರವಾನಗಿ ನವೀಕರಣ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಮಾರುಕಟ್ಟೆಯಲ್ಲಿ ಅರಸು ಜಯಂತಿ: ಇದೇ ವೇಳೆ, ಹುಣಸೂರಿನ ಕಟ್ಟೆಮಳಲವಾಡಿ ಮಾರುಕಟ್ಟೆಯಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜಯಂತಿ ಆಚರಿಸಲು ಅವಕಾಶ ಮಾಡಿಕೊಡಬೇಕೆಂಬ ತಂಬಾಕು ಬೆಳೆಗಾರರ ಸಂಘದ ಕಾರ್ಯದರ್ಶಿ ನಿಲುವಾಗಿಲು ಪ್ರಭಾಕರ್ ಮನವಿ ಮಾಡಿದರು.
ಮುಂದಿನ ವರ್ಷದಿಂದ ಆಚರಣೆಗೆ ಅವಕಾಶ ನೀಡಲಾಗುವುದೆಂದು ತಂಬಾಕು ಮಂಡಳಿ ನಿರ್ದೇಶಕ ಟಿ.ವಿ.ರವಿ ತಿಳಿಸಿದರು. ಈ ಸಂದರ್ಭದಲ್ಲಿ ಆರ್‌ಎಂಒ ಆರ್.ಆರ್.ಪಾಟೀಲ್, ಹರಾಜು ಅಧೀಕ್ಷಕ ವೀರಭದ್ರನಾಯಕ್, ಹಾಗೂ ರೈತ ಮುಖಂಡರು ಹಾಜರಿದ್ದರು.