Advertisement

24 ಗಂಟೆಯಲ್ಲಿ ಪರಿಹಾರ ಹಣ ತಲುಪಿಸಿ

03:28 PM May 23, 2022 | Team Udayavani |

ಬ್ಯಾಡಗಿ: ಮಳೆಯಿಂದ ಹಾನಿಗೀಡಾದ ಮನೆಗಳನ್ನು ಪರಿಶೀಲಿಸಿ, ಕೇವಲ 24 ಗಂಟೆಗಳಲ್ಲಿ ಪರಿಹಾರ ಮೊತ್ತ ತಲಪುವಂತೆ ಮಾಡಬೇಕು. ಇದರಲ್ಲಿ ವಿಳಂಬ ಧೋರಣೆ ತೋರಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಹಾವೇರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್‌ ಖಡಕ್‌ ಎಚ್ಚರಿಕೆ ನೀಡಿದರು.

Advertisement

ಕಳೆದೊಂದು ವಾರದಿಂದ ನಿರಂತರ ಮಳೆಗೆ ಮೋಟೆಬೆನ್ನೂರ ಗ್ರಾಮದಲ್ಲಿ ಶಿಥಿಲಗೊಂಡ ಮನೆಯೊಂದಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಬಹುತೇಕ ಪ್ರಕರಣಗಳಲ್ಲಿ ಪರಿಹಾರಕ್ಕಾಗಿ ಸಂತ್ರಸ್ತರನ್ನು ಅಲೆದಾಡಿಸಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತಹ ಕೆಲಸಕ್ಕೆ ಯಾರೂ ಮುಂದಾಗಬಾರದು. ಮಳೆ ಹಾನಿ ಎಂಬುದೇ ದುರದೃಷ್ಟಕರ ಸಂಗತಿ. ಅಂತಹುದರಲ್ಲಿ ಪರಿಹಾರ ನೀಡುವ ವಿಚಾರದಲ್ಲಿ ಅನಗತ್ಯವಾಗಿ ವಿಳಂಬ ಮಾಡದಂತೆ ಎಚ್ಚರಿಕೆ ನೀಡಿದರು.

1 ಲಕ್ಷ ರೂ.ವರೆಗೆ ಪರಿಹಾರ ಕೊಡಿ: ಯಾವುದೇ ಒತ್ತಡಕ್ಕೆ ಒಳಗಾಗದೇ ಮನೆಯ ಹಾನಿಯನ್ನು ಅಂದಾಜು ಮಾಡಿಕೊಂಡು 1 ಲಕ್ಷ ರೂ.ವರೆಗೆ ಪರಿಹಾರದ ಹಣ ನೀಡಬೇಕು. ಇದರಲ್ಲಿ ಯಾವುದೇ ವ್ಯಕ್ತಿಯ ಪ್ರಭಾವದ ಬಳಕೆಗೆ ಅವಕಾಶ ಮಾಡಿಕೊಡದೇ, ಸಂತ್ರಸ್ತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು.

ಕೇಂದ್ರ ಸ್ಥಾನ ಬಿಡುವಂತಿಲ್ಲ: ಪಿಡಿಒ ಸೇರಿದಂತೆ ಹಿರಿಯ, ಕಿರಿಯ ಅಧಿ ಕಾರಿಗಳು ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನ ಬಿಡುವಂತಿಲ್ಲ. ದಿನವಿಡೀ ಎಚ್ಚರಿಕೆಯಿಂದ ಕೆಲಸ ಮಾಡುವ ಮೂಲಕ ಅಗತ್ಯವಿರುವ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕೆಂದರು.

ಮೊಬೈಲ್‌ ಸ್ವಿಚ್‌ ಆಫ್‌ ಮಾಡಬೇಡಿ: ಜಿಲ್ಲಾ ಪಂಚಾಯಿತ್‌ ಕಾರ್ಯನಿರ್ವಾಹಣಾಧಿಕಾರಿ ಮಹ್ಮದ್‌ ರೋಶನ್‌ ಮಾತನಾಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮೊಬೈಲ್‌ ಸ್ವಿಚ್‌ ಆಫ್‌ ಮಾಡುವುದೂ ಸೇರಿದಂತೆ ದಿನಕ್ಕೊಂದು ಸಿಮ್‌ ಕಾರ್ಡ್‌ ಬದಲಾಯಿಸುವ ಮೂಲಕ ಸಾರ್ವಜನಿಕರು ಪರದಾಡುವಂತೆ ಮಾಡುತ್ತಿರುವ ಉದಾಹರಣೆಗಳಿವೆ. ಇಂತಹ ಬೇಜವಾಬ್ದಾರಿ ವರ್ತನೆಗಳಿಂದ ಇಲಾಖೆ, ಸರ್ಕಾರ ಸೇರಿದಂತೆ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಯಾವುದೇ ಕಾರಣಕ್ಕೂ ಸಿಮ್‌ ಕಾರ್ಡ್‌ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.

Advertisement

ಸಂಕಷ್ಟಲ್ಲಿರುವ ಜನರ ಕೈಗೆ ಸಿಗಬೇಕು: ನಾವು ಸರ್ಕಾರದಲ್ಲಿ ನೇಮಕವಾದ ಮೇಲೆ ಸಾರ್ವಜನಿಕರಿಗೆ ಸೇವೆ ಸಲ್ಲಿಸಲೆಂದು ಬಂದಿದ್ದೇವೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿ ಕಾರಿಗಳು ಜನರ ಕೈಗೆ ಸಿಗುತ್ತಿಲ್ಲ ಎಂಬ ಆರೋಪಗಳು ನಮ್ಮ ಗಮನಕ್ಕೆ ಬಂದಿವೆ. ಸಂಕಷ್ಟದ ಸಂದರ್ಭದಲ್ಲಿ ಜನರೆದುರಿಗೆ ನಿಲ್ಲುವಂತಹ ಪ್ರಯತ್ನವನ್ನು ಅಧಿಕಾರಿಗಳು ಮಾಡಬೇಕು. ಅಂದಾಗ ಮಾತ್ರ ಜನರಿಗೆ ನಮ್ಮ ಮೇಲೆ ವಿಶ್ವಾಸ ಮೂಡಲು ಸಾಧ್ಯವಾಗುತ್ತದೆ. ಜನರ ನಂಬಿಕೆ ಕಳೆದುಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ ಎಂದರು.

ಇದೇ ಸಂರ್ಭದಲ್ಲಿ ಇತ್ತೀಚೆಗೆ ಮಳೆಯಿಂದ ಹಾನಿಗೊಳಗಾಗಿದ್ದ ಗ್ರಾಮದ ಸಂತ್ರಸ್ತೆ ಶೈಲಾ ಹಿತ್ತಲಮನಿ ಅವರ ಮನೆಗೆ ಭೇಟಿ ಸಾಂತ್ವನದ ಮಾತುಗಳನ್ನು ಹೇಳಿದರು. ಅಲ್ಲದೇ ಪರಿಹಾರದ ಹಣ ವಿತರಣೆಗೆ ಸ್ಥಳದಲ್ಲೇ ಸೂಚನೆ ನೀಡಿದರು. ಈ ವೇಳೆ ತಹಶೀಲ್ದಾರ್‌ ತಿಪ್ಪೇಸ್ವಾಮಿ, ಟಿಇಒ ಎನ್‌.ತಿಮ್ಮಾರೆಡ್ಡಿ, ಪಿಡಿಒ ಸತೀಶ ಮೂಡೇರ, ಗ್ರಾಮ ಲೆಕ್ಕಾಧಿಕಾರಿ ಎನ್‌.ಎಂ.ಮಳ್ಳಳ್ಳಿ, ನ್ಯಾಯವಾದಿ ವನಿತಾ ಗುತ್ತಲ, ನಿಂಗಪ್ಪ ಅಂಗಡಿ ಸೇರಿದಂತೆ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next