ಜಮಖಂಡಿ: ಕೋವಿಡ್-19 ಪರಿಹಾರ ಧನ ಜಮಾ ಆಗುವಲ್ಲಿ ವಿಳಂಬ, ತಾರತಮ್ಯ ನೀತಿ, ಕಟ್ಟಡ ಕಾರ್ಮಿಕರ ಮಕ್ಕಳ ಶಿಷ್ಯವೇತನ ಕಾಲಾವಕಾಶ ವಿಸ್ತರಿಸುವ ಹಿನ್ನೆಲೆಯಲ್ಲಿ ನಗರದ ಮಿನಿ ವಿಧಾನಸೌಧದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಜಮಖಂಡಿ ವೃತ್ತದ ಕಾರ್ಮಿಕ ನಿರೀಕ್ಷಕ ಮತ್ತು ಬೆಳಗಾವಿ ಸಹಾಯಕ ಕಾರ್ಮಿಕ ಆಯುಕ್ತರಿಗೆ ಉಪವಿಭಾಗಾಧಿಕಾರಿ ಡಾ| ಸಿದ್ದು ಹುಲ್ಲೊಳ್ಳಿ ಮೂಲಕ ಮನವಿ ಸಲ್ಲಿಸಿದರು.
ಉದ್ದೇಶಿತ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಅರ್ಜುನ ಬಂಡಿವಡ್ಡರ ಮಾತನಾಡಿ, ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಬಿಡುಗಡೆ ಮಾಡಿದ ಕೋವಿಡ್-19 ಪರಿಹಾರ ಧನ ಜಮಾ ಮಾಡುವಲ್ಲಿ ವಿಳಂಬ ಹಾಗೂ ತಾರತಮ್ಯ ನೀತಿ ಅನುಸರಿಸಲಾಗಿದೆ. ಕೆಲವು ಫಲಾನುಭವಿಗಳಿಗೆ ಕೇವಲ 1 ಸಾವಿರ ಜಮಾ ಆಗಿದ್ದರೆ ಮುಂದಿನ ಕಂತಿನ ಹಣ ಜಮಾ ಆಗಿಲ್ಲ. ಕೆಲವರಿಗೆ ಅರ್ಧ ಮಾತ್ರ ಜಮಾ ಆಗಿದೆ. ಇನ್ನೂ ಹಲವರಿಗೆ ಪೂರ್ಣ ಹಣ ಜಮಾ ಆಗಿಲ್ಲ. ಸರ್ಕಾರ ಹಂತಹಂತವಾಗಿ ಘೋಷಿಸಿದ ಪರಿಹಾರ ಧನ ಅನುಕ್ರಮವಾಗಿ 1 ಸಾವಿರ, 2 ಸಾವಿರದಂತೆ ಒಟ್ಟು 5 ಸಾವಿರ ಆಗುವವರೆಗೆ ಸಂಪೂರ್ಣ ಜಮಾ ಮಾಡಬೇಕು ಎಂದು ಆಗ್ರಹಿಸಿದರು.
ಬಿಡುಗಡೆಯಾದ ಮೀಸಲು ಹಣವನ್ನು ಅಧಿಕಾರಿಗಳು ಅಥವಾ ಮಂಡಳಿಯವರು ಕೂಲಂಕುಷವಾಗಿ ಪರಿಶೀಲಿಸಿ ಯಾರಿಗೂ ಅನ್ಯಾಯವಾಗದಂತೆ ಸಮಾನವಾಗಿ ಪರಿಹಾರ ಧನ ಜಮಾ ಆಗುವಂತೆ ಮಾಡಬೇಕು. ಅಧಿಕಾರಿಗಳ ಗೊಂದಲದಿಂದ ಫಲಾನುಭವಿಗಳು ಸಹಾಯಧನದಿಂದ ವಂಚಿತರಾಗುತ್ತಿದ್ದಾರೆ. ತಕ್ಷಣವೇ ಗೊಂದಲ ಸರಿಪಡಿಸುವ ಮೂಲಕ ಕಟ್ಟಡ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಂದರು.
ಕಟ್ಟಡ ಕಾರ್ಮಿಕರ ಮಕ್ಕಳ ಶಿಷ್ಯವೇತನಕ್ಕೆ ಅರ್ಜಿ ಕರೆಯಲಾಗಿದ್ದು, ಅರ್ಜಿ ಸ್ವಿಕರಿಸುವ ಕೊನೆ ದಿನಾಂಕ ಈಗಾಗಲೇ ಅಂತ್ಯಗೊಂಡಿದೆ. ಅರ್ಜಿ ಸಲ್ಲಿಸಲು ಕಾರ್ಮಿಕರ ಫಲಾನುಭವಿ ಗುರುತಿನ ಚೀಟಿ ಕಡ್ಡಾಯವಾಗಿದ್ದು, ಲೇಬರ್ ಕಾರ್ಡ್ ನವೀಕರಿಸದೇ ಫಲಾನುಭವಿ ಗುರುತಿನ ಚೀಟಿ ಸಿಗಲಾರದು. ಲಾಕ್ ಡೌನ್‌ನಿಂದ ಕಾರ್ಮಿಕ ಇಲಾಖೆ ಅಧಿಕಾರಿಗಳು ಕೋವಿಡ್ ಕರ್ತವ್ಯದಲ್ಲಿ ನಿರತರಾಗಿರುವುದರಿಂದ ಲೇಬರ್‌ಕಾರ್ಡ್ ನವೀಕರಿಸಲು ಸಾಧ್ಯ ವಾಗಲಿಲ್ಲ. ನಿಗದಿತ ಅವಧಿಯಲ್ಲಿ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಬಹತೇಕ ಫಲಾನುಭವಿಗಳ ಶಿಷ್ಯವೇತನ ಸೌಕರ್ಯದಿಂದ ವಂಚಿತರಾಗಿದ್ದಾರೆ. ಕಾರ್ಮಿಕ ಇಲಾಖೆ ಮಕ್ಕಳ ಶಿಷ್ಯವೇತನ ಅರ್ಜಿ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ವಿಸ್ತರಿಸಬೇಕು ಎಂದರು.
ಈ ಸಂದರ್ಭದಲ್ಲಿ ಶ್ರೀಶೈಲ ದೊಡಮನಿ, ಮಧು ಮಾವಿನಮರದ, ದಾನಪ್ಪ ಲಾಲಬುಡ್ಡಿ ಇತರರು ಇದ್ದರು.