ಕೊಪ್ಪಳ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-63ಕ್ಕೆ ಹೊಂದಿಕೊಂಡಿರುವ ಬೆವಿನಾಳ ಕಿರ್ಲೋಸ್ಕರ್ ಕಂಪನಿಯಿಂದ ನಿಯಮ ಉಲ್ಲಂಘಿಸಿದ ಪರಿಣಾಮ ಅರಣ್ಯದಲ್ಲಿನ ಗಿಡಮರಗಳು ನಾಶವಾಗಿದ್ದು, ಕೂಡಲೇ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರೈತ ಸಂಘದಿಂದ ಎಡಿಸಿಗೆ ಮನವಿ ಸಲ್ಲಿಸಲಾಯಿತು.
ವ್ಯಕ್ತಿಯೋರ್ವ ತಮ್ಮ ಖಾಸಗಿ ವಾಹನಗಳ ಬಳಕೆಗಾಗಿ ಅರಣ್ಯ ಭೂಮಿಯಲ್ಲಿ ರಸ್ತೆ ಮಾಡಿಕೊಂಡಿದ್ದಾರೆ. ಅರಣ್ಯ ಭೂಮಿಗೆ ಹಾಕಿದ ತಂತಿ ಬೆಲಿಯನ್ನು ಕಿತ್ತೆಸೆದು ಬೆಟ್ಟ ಅಗೆದು ಸಾವಿರಾರು ಮೆಟ್ರಿಕ್ ಟನ್ ಮೊರಂ ಸಾಗಿಸಲಾಗಿದೆ. ಅಕ್ರಮ ಮರಂ ಗಣಿಗಾರಿಕೆ ತಡೆಯುವ ಕಾರ್ಯವನ್ನು ಸಂಬಂಧಿಸಿದ ಯಾವ ಅಧಿಕಾರಿಗಳು ಮಾಡುತ್ತಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಕಂಪನಿ ಕಾರ್ಖಾನೆಗಳ ಮಾಲಿಕರೊಂದಿಗೆ ಮತ್ತು ಅಕ್ರಮವಾಗಿ ಮರಂ ಸಾಗಿಸುವವರೊಂದಿಗೆ ಅರಣ್ಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವ ಆಪಾದನೆ ಮಾಡಿದರು.
ಎಲ್ಲೆಂದರಲ್ಲಿ ಗಣಿ ತ್ಯಾಜ್ಯವನ್ನು ಗುಡ್ಡೆ ಹಾಕಿ ಪರಿಸರ ಮಾಲಿನ್ಯ ಮತ್ತು ಅರಣ್ಯದಲ್ಲಿರುವ ಗಿಡ ಮರಗಳ ನಾಶಕ್ಕೆ ಕಾರಣವಾಗಿರುವ ಕಿಲೊರ್ಸ್ಕರ್ ಕಂಪನಿ ಆಡಳಿತ ಮಂಡಳಿ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಸುರಕ್ಷಿತ ಕ್ರಮ ಅನುಸರಿಸದೆ ನಿಯಮಗಳನ್ನು ಉಲ್ಲಂಘನೆ ಮಾಡುವ ಗಣಿ ತ್ಯಾಜ್ಯವನ್ನು ಸಂಸ್ಕರಣೆ ಮಾಡುವ ಘಟಕದ ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಕೊಪ್ಪಳ ಜಿಲ್ಲಾ ಅರಣ್ಯ ಅಧಿಕಾರಿಗಳ ಮೇಲೆ ಕರ್ತವ್ಯ ಲೋಪದ ಬಗ್ಗೆ ಶಿಸ್ತು ಕ್ರಮ ಜರುಗಿಸಬೇಕು. ಅನೇಕ ಕಂಪನಿಗಳು, ಕಾರ್ಖಾನೆಗಳು, ರಾಜಕಾರಣಿಗಳು ಮತ್ತು ಸಂಸ್ಕರಣ ಘಟಕಗಳು ಅರಣ್ಯ ಭೂಮಿಯನ್ನು ಅತಿಕ್ರಣ ಮಾಡಿಕೊಂಡಿವೆ. ಈ ಹಿನ್ನೆಲೆಯಲ್ಲಿ ಸರ್ವೇ ಮಾಡಿ ಅತಿಕ್ರಮಣ ತೆರವುಗೊಳಿಸಿ ಭೂಮಿಯನ್ನು ಮರುಸ್ವಾಧಿಧೀನ ಪಡೆಸಿಕೊಳ್ಳಬೇಕು. ಎಡಿಸಿ ಬಾಲಚಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು. ಡಿ.ಎಚ್. ಪೂಜಾರ, ಮಲ್ಲೇಶಗೌಡ, ಬಸವರಾಜ ನರೆಗಲ್ಲ ಇದ್ದರು.
Advertisement
ಬೆವಿನಾಳ ಕಿರ್ಲೋಸ್ಕರ್ ಕಂಪನಿಯು ಯಾವುದೇ ಸುರಕ್ಷಿತ ಕ್ರಮಗಳನ್ನು ಪಾಲಿಸದೆ ಎಲ್ಲ ನಿಯಮ ಉಲ್ಲಂಘಿಸುತ್ತಿದೆ. ಎನ್‌ಎಚ್-63ಕ್ಕೆ ಹೊಂದಿಕೊಂಡಿರುವ ನೂರಾರು ಎಕರೆ ಬಯಲು ಭೂಮಿಯಲ್ಲಿ ಗಣಿತ್ಯಾಜ್ಯ ಬೂದಿಯ ಗುಡ್ಡೆ ಹಾಕಲಾಗಿದೆ. ಇದರಿಂದ ರಸ್ತೆಯಲ್ಲಿ ಪ್ರಯಾಣ ಮಾಡುವವರು ಮತ್ತು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಕಾರ್ಖಾನೆಯ ಗಣಿ ತ್ಯಾಜ್ಯವನ್ನು ಅರಣ್ಯ ಭೂಮಿಗೆ ಹೊಂದಿಕೊಂಡಿರುವ ಭೂಮಿಯಲ್ಲಿ ಹಾಕಿದ್ದರಿಂದ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಗಿಡ ಮರಗಳು ನಾಶಗೊಂಡಿವೆ. ಈ ಗಣಿ ತ್ಯಾಜ್ಯದ ಬೂದಿ ಸಂಸ್ಕರಿಸುವ ಸಣ್ಣ ಕಾರ್ಖಾನೆಗಳು ಯಾವುದೇ ಸುರಕ್ಷಿತ ಕ್ರಮಗಳನ್ನು ಪಾಲಿಸುತ್ತಿಲ್ಲ. ಸಂಸ್ಕರಣ ಘಟಕದ ಸುತ್ತಲೂ ತಡೆಗೊಡೆ ಅಥವಾ ಇನ್ನಿತರ ಸುರಕ್ಷಿತ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಸಂಸ್ಕರಣ ಘಟಕಗಳು ಹೊರ ಹಾಕುವ ಬೂದಿ ಮತ್ತು ಧೂಳಿನಿಂದಲೂ ಅರಣ್ಯದಲ್ಲಿನ ಗಿಡಮರಗಳು ಕಮರಿ ಹೋಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.