Advertisement

ಚೀನಾದಿಂದ ಕಂಪನಿಗಳು ಹೊರಕ್ಕೆ: ಸಚಿವ ಶೆಟ್ಟರ್‌

08:28 AM May 10, 2020 | Sriram |

ಧಾರವಾಡ: ಕೋವಿಡ್‌19 ವಿಶ್ವವ್ಯಾಪಿಯಾಗಿ ಹರಡುತ್ತಿರುವ ಮಧ್ಯೆ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಚೀನಾ ದೇಶದಿಂದ ಹೊರಬರಲು ಮುಂದಾಗಿವೆ. ಮುಂಬರುವ ಒಂದು ವರ್ಷದಲ್ಲಿ ಕರ್ನಾಟಕವೂ ಸೇರಿದಂತೆ ಭಾರತದಲ್ಲಿ ಬೃಹತ್‌ ಕೈಗಾರಿಕೆಗಳ ಸ್ಥಾಪನೆಗೆ ಅಂತಾರಾಷ್ಟ್ರೀಯ ಬಂಡವಾಳ ಹೂಡಿಕೆದಾರರು ಉತ್ಸುಕರಾಗಿದ್ದಾರೆ. ಅವರನ್ನು ಸೆಳೆಯಲು ರಾಜ್ಯ ಸರ್ಕಾರದಿಂದ ಪ್ರತ್ಯೇಕ ಕಾರ್ಯಪಡೆ ರಚಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬೃಹತ್‌, ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಆಟೋಮೊಬೈಲ್‌ ಸೇರಿ ಹಲವು ಉದ್ಯಮಗಳಲ್ಲಿ ಕರ್ನಾಟಕವು ದೇಶದ ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿದೆ. ಕೋವಿಡ್‌19 ಹರಡುವಿಕೆ ನಂತರ ಜಪಾನ್‌, ಅಮೆರಿಕಾ ಸೇರಿ ಅನೇಕ ರಾಷ್ಟ್ರಗಳು ಚೀನಾ ಬಗ್ಗೆ ಅಸಮಾಧಾನ ಹೊಂದಿವೆ. ಚೀನಾದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳನ್ನು ಅಲ್ಲಿಂದ ಬೇರೆ ದೇಶಗಳಿಗೆ ಸ್ಥಳಾಂತರಿಸಲು ಚಿಂತನೆ ನಡೆಸಿವೆ. ಜಪಾನ್‌ ದೇಶವು ಚೀನಾದಿಂದ ಹೊರಬರುವ ಕಂಪೆನಿಗಳಿಗೆ ಆರ್ಥಿಕ ನೆರವನ್ನೂ ಘೋಷಣೆ ಮಾಡಿದೆ ಎಂದರು.

ನೂರಾರು ಅಂತಾರಾಷ್ಟ್ರೀಯ ಹೂಡಿಕೆದಾರರು ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಬಂಡವಾಳ ಹೂಡಲು ತಾತ್ವಿಕವಾಗಿ ಉತ್ಸುಕರಾಗಿದ್ದಾರೆ. ಅವರನ್ನು ಸೆಳೆಯಲು ರಾಜ್ಯದ ಪ್ರಮುಖ ಉದ್ಯಮಿಗಳಾದ ನಂದನ್‌ ನಿಲೇಕಣಿ, ಕಿರಣ್‌ ಮುಜುಂದಾರ್‌ ಷಾ ಸೇರಿದಂತೆ ಹಾಗೂ ವಿವಿಧ ಕೈಗಾರಿಕೋದ್ಯಮಿಗಳ ಸಂಘಟನೆಗಳ ಪದಾ ಧಿಕಾರಿಗಳನ್ನೊಳಗೊಂಡ ವಿಶೇಷ ಕಾರ್ಯಪಡೆ ರಚಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಪ್ರಸ್ತಾವನೆ ತಯಾರಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಿದ್ದಾರೆ. ಶೀಘ್ರದಲ್ಲಿಯೇ ಈ ಕಾರ್ಯಪಡೆ ಮೂಲಕ ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ಕಾರ್ಯಗಳು ಪ್ರಾರಂಭವಾಗಲಿವೆ ಎಂದರು.

ಎಲ್ಲಾ ಕೈಗಾರಿಕೆಗಳು ಉತ್ತೇಜನ
ಹಲವು ಕೈಗಾರಿಕೆಗಳು ಈ ಸಂಕಷ್ಟ ಎದುರಿಸಲು ಕಡಿಮೆ ಬಡ್ಡಿದರದಲ್ಲಿ ದುಡಿಯುವ ಬಂಡವಾಳ, ಕಾರ್ಮಿಕರಿಗೆ ಏಪ್ರಿಲ್‌ ತಿಂಗಳ ವೇತನ ನೀಡಲು ಶೂನ್ಯ ಬಡ್ಡಿ ದರದಲ್ಲಿ ಸಾಲ ಹಾಗೂ ಒಂದು ವರ್ಷದ ನಂತರ ಈ ಸಾಲಗಳ ಮರುಪಾವತಿ ಕೈಗೊಳ್ಳಲು ಮನವಿ ಮಾಡಿವೆ. ಈ ಬೇಡಿಕೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸಚಿವ ಶೆಟ್ಟರ ಹೇಳಿದರು.

ವಿಶೇಷ ಪ್ಯಾಕೇಜ್‌ ಅಭಿನಂದನೀಯ
ಕ್ಷೌರಿಕರು, ಮಡಿವಾಳರು, ಹೂವು, ತರಕಾರಿ, ಹಣ್ಣು ಬೆಳೆಗಾರರು, ಆಟೋರಿಕ್ಷಾ ಚಾಲಕರು, ಕಾರ್ಮಿಕರು ಸೇರಿದಂತೆ ಹಲವು ವರ್ಗಗಳ ಜನರಿಗೆ ಸರ್ಕಾರ ನೆರವಿನ ಪ್ಯಾಕೇಜ್‌ಗಳನ್ನು ಘೋಷಿಸಿರುವ ಕ್ರಮಕ್ಕೆ ವ್ಯಾಪಕ ಸ್ವಾಗತ ಮತ್ತು ಅಭಿನಂದನೆ ವ್ಯಕ್ತವಾಗಿದೆ. ಜನಪರ ಆಡಳಿತಕ್ಕೆ ಸಿಕ್ಕ ಮೆಚ್ಚುಗೆಯಾಗಿದೆ.
-ಜಗದೀಶ ಶೆಟ್ಟರ, ಜಿಲ್ಲಾ ಉಸ್ತುವಾರಿ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next