Advertisement

ಕಸ ಸಂಗ್ರಹಕ್ಕೆ ಕಾಂಪ್ಯಾಕ್ಟರ್‌ ಕಂಟೇನರ್‌ ಸ್ಟೇಷನ್‌

05:36 PM Sep 27, 2018 | Team Udayavani |

ಹುಬ್ಬಳ್ಳಿ: ತ್ಯಾಜ್ಯ ನಿರ್ವಹಣೆ ಸಮರ್ಪಕಗೊಳಿಸುವ ದಿಸೆಯಲ್ಲಿ ಮಹಾನಗರ ಪಾಲಿಕೆ ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದೆ. ಹಸಿ ಕಸ ಹಾಗೂ ಒಣ ಕಸ ಪ್ರತ್ಯೇಕಿಸುವ ದಿಸೆಯಲ್ಲಿ ಮೊದಲ ಬಾರಿ ಅವಳಿ ನಗರದ ವಿವಿಧೆಡೆ ಪೋರ್ಟೇಬಲ್‌ ಕಾಂಪ್ಯಾಕ್ಟರ್‌ ಕಂಟೇನರ್‌ಗಳನ್ನು ಅಳವಡಿಸುವ ಮೂಲಕ ತ್ವರಿತ ಕಸ ವಿಲೇವಾರಿ ದಿಸೆಯಲ್ಲಿ ಮಹತ್ವದ ಹೆಜ್ಜೆ ಇರಿಸಿದೆ.

Advertisement

ಹುಬ್ಬಳ್ಳಿಯಲ್ಲಿ ನಂದಿನಿ ಲೇಔಟ್‌, ಬೆಂಗೇರಿ, ಉಣಕಲ್ಲ ಹಾಗೂ ಇಂದಿರಾ ನಗರದಲ್ಲಿ; ಧಾರವಾಡದಲ್ಲಿ ಮೀನು ಮಾರುಕಟ್ಟೆ ಹಾಗೂ ಕಲ್ಯಾಣನಗರದಲ್ಲಿ ಕಾಂಪ್ಯಾಕ್ಟರ್‌ ಕಂಟೇನರ್‌ ಸ್ಟೇಷನ್‌ ನಿರ್ಮಿಸಲಾಗುತ್ತಿದೆ. ಈಗಾಗಲೇ ಕಸ ಸಂಗ್ರಹ ಕಂಟೇನರ್‌ ಸ್ಟೇಷನ್‌ಗೆ ಸಿದ್ಧತೆ ನಡೆದಿದ್ದು, ಇನ್ನೆರಡು ತಿಂಗಳಲ್ಲಿ ಸ್ಟೇಷನ್‌ ಕಾರ್ಯಾರಂಭ ಮಾಡಲಿದೆ. 5ರಿಂದ 10 ವಾರ್ಡ್‌ಗಳಿಗೊಂದರಂತೆ ಸ್ಟೇಷನ್‌ ಮಾಡಲು ನಿರ್ಧರಿಸಲಾಗಿದೆ.

ಪ್ರಸ್ತುತ ಮಹಾನಗರದ ಹಲವು ವಾರ್ಡ್‌ಗಳಲ್ಲಿ ಆಟೋ ಟಿಪ್ಪರ್‌ಗಳ ಮೂಲಕ ಮನೆ ಮನೆಗಳಿಂದ ಕಸ ಸಂಗ್ರಹಿಸಲಾಗುತ್ತಿದೆ. ಸಂಗ್ರಹಿಸಿದ ಕಸವನ್ನು ಹುಬ್ಬಳ್ಳಿಯಲ್ಲಿ ಕಾರವಾರ ರಸ್ತೆಯಲ್ಲಿನ ಕಸದಮಡ್ಡಿ ಹಾಗೂ ಧಾರವಾಡದ ಕೋಳಿಕೆರೆ ದಡದ ಕಸಮಡ್ಡಿಯಲ್ಲಿ ಸುರಿಯಲಾಗುತ್ತಿದೆ.

ಏನಿದು ಕಾಂಪ್ಯಾಕ್ಟರ್‌ ಕಂಟೇನರ್‌?: ಕಸವನ್ನು ಕಾಂಪ್ಯಾಕ್ಟ್ ಮಾಡುವುದಲ್ಲದೇ ದೊಡ್ಡ ಪ್ರಮಾಣದ ಕಸವನ್ನು ಸಂಗ್ರಹಿಸಿಕೊಳ್ಳುವುದೇ ಕಾಂಪ್ಯಾಕ್ಟರ್‌ ಕಂಟೇನರ್‌. ಕಾಂಪ್ಯಾಕ್ಟರ್‌ ಕಂಟೇನರ್‌ ಕಾರ್ಯ ಆರಂಭಗೊಂಡ ನಂತರ ಕಸವನ್ನು ಹಸಿ ಹಾಗೂ ಒಣ ಕಸವನ್ನಾಗಿ ಪ್ರತ್ಯೇಕಿಸಿಯೇ ಸಂಗ್ರಹಿಸಿ ಅದನ್ನು ಆಟೋ ಟಿಪ್ಪರ್‌ಗಳ ಮೂಲಕ ಕಾಂಪ್ಯಾಕ್ಟರ್‌ ಕಂಟೇನರ್‌ಗಳಿಗೆ ಸುರಿಯಲಾಗುತ್ತದೆ. ಕಂಟೇನರ್‌ಗಳು ತುಂಬಿದ ನಂತರ ಅವುಗಳನ್ನು ಸಾಗಿಸಲಾಗುತ್ತದೆ.

ಇದರಿಂದ ಸಮಯ ಹಾಗೂ ಇಂಧನ ಉಳಿತಾಯವಾಗುತ್ತದೆ. ಪ್ರತಿ 5ರಿಂದ 10 ವಾರ್ಡ್‌ಗಳಿಗೊಂದು ಕಾಂಪ್ಯಾಕ್ಟರ್‌ ಕಂಟೇನರ್‌ ಸ್ಟೇಷನ್‌ ಮಾಡಲಾಗುತ್ತದೆ. ಅಲ್ಲಿ ಒಣಕಸ ಹಾಗೂ ಹಸಿ ಕಸ ಸಂಗ್ರಹಿಸುವ ಪ್ರತ್ಯೇಕ ಕಂಟೇನರ್‌ಗಳನ್ನು ಅಳವಡಿಸಲಾಗುತ್ತದೆ. ಕಂಟೇನರ್‌ನಲ್ಲಿ ಹಾಕಿದ ಕಸವನ್ನು ಒತ್ತಿ ಕಾಂಪ್ಯಾಕ್ಟ್ ಮಾಡಲಾಗುತ್ತದೆ. ಇದನ್ನು ಕಂಟೇನರ್‌ ಹೊರುವ ಹುಕ್‌ ಲೋಡರ್‌ ವಾಹನದ ಮೂಲಕ ಸಾಗಿಸಲಾಗುತ್ತದೆ. ಸ್ಟೇಶನ್‌ಗಳ ನಿರ್ವಹಣೆಗೆ ಸಿಬ್ಬಂದಿ ನಿಯೋಜಿಸಲಾಗುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳು ಕಾಂಪ್ಯಾಕ್ಟರ್‌ ಕಂಟೇನರ್‌ ಸ್ಟೇಶನ್‌ಗಳಿಗೆ ಕಸ ಪ್ರತ್ಯೇಕಿಸಿ ತಂದು ಹಾಕಬಹುದಾಗಿದೆ.

Advertisement

ಪ್ರತ್ಯೇಕಿಸಿದ ಕಸವನ್ನು ಕಾರವಾರ ರಸ್ತೆಯ ಕಸ ಸಂಗ್ರಹ ಜಾಗದಲ್ಲಿ ಸುರಿಯಲಾಗುತ್ತದೆ. ಒಣ ಕಸವನ್ನು ಬೇಲ್‌ಗ‌ಳನ್ನಾಗಿ ಮಾಡಿ ಪುನರ್‌ಬಳಕೆ ಘಟಕಗಳಿಗೆ ಕಳಿಸಿದರೆ, ಹಸಿ ಕಸವನ್ನು ಸಾವಯವ ಗೊಬ್ಬರ ತಯಾರಿಕೆಗೆ ಬಳಸಲಾಗುತ್ತದೆ. ಕಾಂಪ್ಯಾಕ್ಟರ್‌ ಕಂಟೇನರ್‌ನಿಂದ ಸಮಯ ಹಾಗೂ ಇಂಧನ ಉಳಿತಾಯವಾಗುತ್ತದೆ. ಆಟೋ ಟಿಪ್ಪರ್‌ ಗಳು ಕೇವಲ ಅರ್ಧ ಗಂಟೆಯಲ್ಲಿ ಕಾಂಪ್ಯಾಕ್ಟರ್‌ ಕಂಟೇನರ್‌ಗಳಿಗೆ ಸುರಿದು ಮತ್ತೆ ಸೇವೆಗೆ ಸಜ್ಜಾಗಬಹುದಾಗಿದೆ.

ನಾಗರಿಕರು ಕಸವನ್ನು ಮನೆಯಲ್ಲಿಯೇ ಹಸಿ, ಒಣ ಕಸವನ್ನಾಗಿ ಬೇರ್ಪಡಿಸಿ ಕಸ ಸಂಗ್ರಹಕ್ಕೆ ಬರುವ ಆಟೋ ಟಿಪ್ಪರ್‌ಗಳಿಗೆ ಹಾಕಿದರೆ ಸುಲಭವಾಗಿ ಕಾಂಪ್ಯಾಕ್ಟರ್‌ಗೆ ಹಾಕಲು ಅನುಕೂಲವಾಗುತ್ತದೆ. ನಾಗರಿಕರು ಸಹಕಾರ ನೀಡಿದರೆ ಯೋಜನೆ ಯಶಸ್ವಿಗೊಳ್ಳಲು ಸಾಧ್ಯವಾಗುತ್ತದೆ.

ಸಮರ್ಪಕ ತ್ಯಾಜ್ಯ ನಿರ್ವಹಣೆ ಉದ್ದೇಶದಿಂದ ಕಾಂಪ್ಯಾಕ್ಟರ್‌ ಕಂಟೇನರ್‌ ಗಳನ್ನು ಅವಳಿ ನಗರದ 6 ಕಡೆ ಸ್ಟೇಷನ್‌ಗಳನ್ನು ಮಾಡಿ ಕಂಟೇನರ್‌ಗಳನ್ನು ಅಳವಡಿಸಲಾಗುತ್ತಿದೆ. ಪ್ರತಿ ಸ್ಟೇಷನ್‌ನಲ್ಲಿ 2 ಒಣ ಕಸ ಹಾಗೂ 2 ಹಸಿ ಕಸ ಸಂಗ್ರಹಿಸುವ ಕಾಂಪ್ಯಾಕ್ಟರ್‌ ಕಂಟೇನರ್‌ ಅಳವಡಿಸಲಾಗುತ್ತದೆ. ಅಕ್ಟೋಬರ್‌ ತಿಂಗಳಲ್ಲಿ ಎಲ್ಲ ವಾರ್ಡ್‌ಗಳಲ್ಲಿ ಕಸ ಸಂಗ್ರಹಿಸಲು ಟಿಪ್ಪರ್‌ಗಳು ಬರಲಿದ್ದು, ನವೆಂಬರ್‌ ತಿಂಗಳಲ್ಲಿ ಕಸ ವಿಲೇವಾರಿ ಕುರಿತು ಜನಜಾಗೃತಿ ನಡೆಸಲಾಗುವುದು. ನಂತರ ಡಿಸೆಂಬರ್‌ನಲ್ಲಿ ಕಾಂಪ್ಯಾಕ್ಟರ್‌ ಕಂಟೇನರ್‌ ಕಸ ಸಂಗ್ರಹ ಕಾರ್ಯ ಆರಂಭವಾಗಲಿದೆ.
. ನಯನಾ,
ಮಹಾನಗರ ಪಾಲಿಕೆ ಪರಿಸರ ಅಭಿಯಂತೆ

. ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next