Advertisement

ಹೆಚ್ಚಿದ ಮೀಸಲು ಕೂಗು : ವೀರಶೈವ-ಲಿಂಗಾಯತದ ಎಲ್ಲ ಉಪಜಾತಿ ಒಬಿಸಿ ಸೇರ್ಪಡೆಗೆ ಆಗ್ರಹ

01:02 AM Feb 14, 2021 | Team Udayavani |

ಬೆಂಗಳೂರು/ತುಮಕೂರು: ಲಿಂಗಾಯತ ಪಂಚಮಸಾಲಿ ಸಮುದಾಯವನ್ನು “ಪ್ರವರ್ಗ- 2ಎ’ಗೆ ಸೇರ್ಪಡೆ ಮಾಡಬೇಕೆಂಬ ಹೋರಾಟ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ವೀರಶೈವ-ಲಿಂಗಾಯತ ಸಮುದಾಯದ ಎಲ್ಲ ಉಪಜಾತಿಗಳನ್ನು ಕೇಂದ್ರ ಸರಕಾರದ ಹಿಂದುಳಿದ ವರ್ಗ (ಒಬಿಸಿ)ಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಬೇಕೆಂಬ ಹಕ್ಕೊತ್ತಾಯ ಕೇಳಿಬಂದಿದೆ.

Advertisement

ವೀರಶೈವ-ಲಿಂಗಾಯತ ಸಮುದಾಯದ ನೂರಾರು ಮಠಾಧಿಪತಿಗಳು ಬೆಂಗಳೂರಿನಲ್ಲಿ ಶನಿವಾರ ಸಭೆ ನಡೆಸಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದಾರೆ. ಬೇಡಿಕೆಗೆ ಸರಕಾರ ಸ್ಪಂದಿಸದಿದ್ದರೆ ಬೃಹತ್‌ ಪಾದಯಾತ್ರೆ ಆರಂಭಿಸಬೇಕು ಎಂಬುದಾಗಿ ಕರೆ ನೀಡಿದ್ದಾರೆ. ಅಗತ್ಯಬಿದ್ದರೆ ಪಂಚಮಸಾಲಿ ಹೋರಾಟಕ್ಕೂ ಕೈಜೋಡಿಸಲಾಗುವುದು ಎಂದು ಕೆಲವು ಸ್ವಾಮೀಜಿಗಳು ಸ್ಪಷ್ಟಪಡಿಸಿದ್ದಾರೆ. ಸಭೆಯಲ್ಲಿ 300ಕ್ಕೂ ಹೆಚ್ಚು ಮಠಾಧಿಪತಿಗಳು ಪಾಲ್ಗೊಂಡಿದ್ದರು.

ಒಕ್ಕೂಟದ ಮನವಿಯನ್ನು ಸ್ವೀಕರಿಸಿದ ವೀರಶೈವ -ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್‌. ಪರಮಶಿವಯ್ಯ ಮಾತನಾಡಿ, ಸಮುದಾಯದ ಎಲ್ಲ ಒಳ ಪಂಗಡಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿ ಸಲು ಶಿಫಾರಸು ಮಾಡುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡೋಣ. ಕೇಂದ್ರ ಸರಕಾರ ಮಾನ್ಯತೆ ನೀಡದಿದ್ದರೆ ಬೃಹತ್‌ ಜಾಥಾ ನಡೆಸೋಣ ಎಂದರು.

ಪಂಚಮಸಾಲಿ ಹೋರಾಟಕ್ಕೂ ಬೆಂಬಲ
ಲಿಂಗಾಯತ ಪಂಚಮಸಾಲಿ ಸಮುದಾಯದವರು ನಡೆಸುತ್ತಿರುವ ಪಾದಯಾತ್ರೆಗೆ ನಮ್ಮ ವಿರೋಧವಿಲ್ಲ. ವೀರಶೈವ-ಲಿಂಗಾಯತ ಸಮುದಾಯದ ಎಲ್ಲ ಉಪಜಾತಿಗಳನ್ನು ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಲು ಸಭೆ ನಡೆಸಲಾಗಿದೆ ಎಂದು ಹಲವು ಮಠಾಧಿಪತಿಗಳು ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸಿದರು.

ಫೆ.21: ಬೃಹತ್‌ ಸಮಾವೇಶ
ಪ್ರವರ್ಗ-2ಎ ಮೀಸಲಾತಿಗಾಗಿ ಆಗ್ರಹಿಸಿ ಪಾದಯಾತ್ರೆ ಕೈಗೊಂಡಿರುವ ಪಂಚಮಸಾಲಿ ಸಮುದಾಯ ಫೆ. 21ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್‌ ಸಮಾವೇಶ ನಡೆಸುವ ತೀರ್ಮಾನವನ್ನು ಕೈಗೊಂಡಿದೆ. ನಗರದ ಸಿದ್ಧಗಂಗಾ ಮಠದಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದ ಪಾದಯಾತ್ರಿಗಳು ಶನಿವಾರ ಬೆಳಗ್ಗೆ ಸಭೆ ನಡೆಸಿ ಅರಮನೆ ಮೈದಾನದಲ್ಲೇ ಸಮಾವೇಶ ನಡೆಸುವ ಸಂಬಂಧ ನಿರ್ಣಯ ಕೈಗೊಂಡರು. ಇದರಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಬಸವ ಮೃತ್ಯುಂಜಯ ಸ್ವಾಮೀಜಿ  ಹೇಳಿದರು. ಅಂದು ಸಂಜೆ 4ರ ಒಳಗಾಗಿ ಸಿಎಂ ವರದಿ ತರಿಸಿಕೊಳ್ಳದಿದ್ದರೆ, ಅಂದು ಸಂಜೆಯಿಂದಲೇ ವಿಧಾನ
ಸೌಧದ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸುತ್ತೇವೆ ಎಂದರು.

Advertisement

ಎಸ್‌ಸಿಗೆ ಸೇರಿಸಲು ಈಡಿಗ ಸಮುದಾಯ ಆಗ್ರಹ
ಕುರುಬ, ಪಂಚಮಸಾಲಿ ಹೋರಾಟದ ನಡುವೆಯೇ ಈಡಿಗ ಸಮುದಾಯವು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕೆಂದು ಸರಕಾರಕ್ಕೆ ಹೊಸ ಬೇಡಿಕೆ ಮಂಡಿಸಿದೆ. ಈ ಸಂಬಂಧ ಸದ್ಯದಲ್ಲೇ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ಹೇಳಿರುವ ಸ್ವಾಮೀಜಿಗಳು, ಮುಖಂಡರು ಮತ್ತು ಸರಕಾರ ಸ್ಪಂದಿಸದಿದ್ದರೆ ಹೋರಾಟದ ಹಾದಿ ಹಿಡಿಯುವ ಎಚ್ಚರಿಕೆ ನೀಡಿದ್ದಾರೆ. ಆ ಮೂಲಕ ಮತ್ತೂಂದು ಸಮುದಾಯ ಮೀಸಲಾತಿ ಕಾರಣಕ್ಕೆ ಹೋರಾಟ ನಡೆಸುವ ಸುಳಿವು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next