ಉಡುಪಿ: ಜಿಲ್ಲೆಯ ಮರಾಟಿ ಸಮುದಾಯದವರಿಂದ ನಿರ್ಮಾಣಗೊಂಡ ಸಮುದಾಯ ಭವನವು ಅವರ ಹೆಮ್ಮೆಯ ಸಂಕೇತವಾಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಕುಂಜಿಬೆಟ್ಟುವಿನ ಜಿಲ್ಲಾ ಮರಾಟಿಸಮಾಜ ಸೇವಾ ಸಂಘದ ನೇತೃತ್ವದಲ್ಲಿ ನಿರ್ಮಿಸಲಾದ ಮರಾಟಿ ಸಮುದಾಯ ಭವನ ಮತ್ತು ಶ್ರೀ ತುಳಜಾಭವಾನಿ ಮಂದಿರವನ್ನು ಅವರು ರವಿವಾರ ಉದ್ಘಾಟಿಸಿ ಮಾತನಾಡಿದರು.
ಹಿಂದುಳಿದ ಸಮುದಾಯಗಳು ಅಭಿವೃದ್ಧಿಗೊಳ್ಳಬೇಕಾದರೆ ಸಮುದಾಯ ಭವನ ನಿರ್ಮಾಣದಂತಹ ಕಾರ್ಯಗಳು ನಡೆಯಬೇಕು. ಮರಾಟಿ ಸಮುದಾಯದವರು ಇಂದಿಗೂ ಹಿರಿಯರ ಕಟ್ಟುಪಾಡುಗಳನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ಒಗ್ಗಟ್ಟಾಗಿ ಬಾಳುವ ಮೂಲಕ ಸಂಘಟನೆ ಬಲಗೊಳಿಸಿ ಆರ್ಥಿಕ ಸಬಲತೆ ಸಾಧಿಸಬೇಕಾಗಿದೆ ಎಂದರು.
ಸಂಘದ ಅಧ್ಯಕ್ಷ ಎಸ್. ಅನಂತನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಹೊಸದಿಲ್ಲಿ ಜಿಎಸ್‌ಟಿ ಕಮಿಷನರ್‌ರಾಜೇಶ್ ಪ್ರಸಾದ್, ಕರ್ನಾಟಕ-ಕೇರಳ ಮರಾಟಿ ಫೆಡರೇಶನ್ ಅಧ್ಯಕ್ಷ ಟಿ. ಸುಬ್ರಾಯ ನಾಯ್ಕ, ಸ್ಥಾಪಕಾಧ್ಯಕ್ಷ ಕೆ. ಅಣ್ಣಯ್ಯ ನಾಯ್ಕ ಕೊಡಂಗಳ, ಗೌರವಾಧ್ಯಕ್ಷ ಡಾ| ಕೆ. ಸುಂದರ ನಾಯ್ಕ, ಕಾರ್ಯಾಧ್ಯಕ್ಷ ಕೆ.ಕೆ. ನಾಯ್ಕ, ಜತೆಕಾರ್ಯದರ್ಶಿ ಷಣ್ಮುಖ ನಾಯ್ಕ, ಕೋಶಾಧಿಕಾರಿಗಳಾದ ದೇವೇಂದ್ರ ನಾಯ್ಕ, ಉಪಾಧ್ಯಕ್ಷೆ ಇಂದಿರಾ ಎನ್. ನಾಯ್ಕ, ಕಟ್ಟಡ ರಚನಾ ಸಮಿತಿ ಕೋಶಾಧಿಕಾರಿ ಕೆ. ಶ್ರೀನಿವಾಸ ನಾಯ್ಕ ಅಲೆವೂರು ಉಪಸ್ಥಿತರಿದ್ದರು.
ಈ ಸಂದರ್ಭ ರಘುಪತಿ ಭಟ್ ಮತ್ತು ದಾನಿಗಳನ್ನು ಸಮ್ಮಾನಿಸಲಾಯಿತು. ಅತಿಥಿಗಳು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.
ಉಪಾಧ್ಯಕ್ಷ ಉಮೇಶ್ ನಾಯ್ಕ ಸ್ವಾಗತಿಸಿ, ಕಾರ್ಯದರ್ಶಿ ಕೆ.ಟಿ. ನಾಯ್ಕ ಪ್ರಸ್ತಾವನೆಗೈದರು. ಪ್ರಧಾನ ಸಂಪಾದಕ ಕೆ.ಕೆ. ನಾಯ್ಕ ಸ್ಮರಣ ಸಂಚಿಕೆ ಪರಿಚಯಿಸಿದರು. ಕಾರ್ಯದರ್ಶಿ ಶಿಕ್ಷಕ ಮಂಜುನಾಥ ನಾಯ್ಕ ಚಾಂತಾರು ನಿರೂಪಿಸಿ, ನಿಕಟಪೂರ್ವಾಧ್ಯಕ್ಷ ನರಸಿಂಹ ನಾಯ್ಕ ವಂದಿಸಿದರು. ನೂತನ ಶ್ರೀ ತುಳಜಾ ಭವಾನಿ ಮಂದಿರದಲ್ಲಿ ವಿವಿಧ ಧಾರ್ಮಿಕ ಪ್ರಕ್ರಿಯೆಗಳೊಂದಿಗೆ ಶ್ರೀ ದೇವಿಯ ಪ್ರತಿಷ್ಠೆ, ಚಂಡಿಕಾಯಾಗ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಜರಗಿತು.