ಗುರುಮಠಕಲ್: ವಿದ್ಯಾರ್ಥಿಗಳ ಉತ್ತಮ ಶಿಕ್ಷಣಕ್ಕಾಗಿ ಶಿಕ್ಷಕರೊಂದಿಗೆ ಪಾಲಕರ ಜವಾಬ್ದಾರಿ ಕೂಡ ಅಷ್ಟೇ ಪ್ರಾಮುಖ್ಯತೆ ಹೊಂದಿದೆ. ನಮ್ಮ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿ ಉತ್ತಮ ಶಿಕ್ಷಣ ಪಡೆಯಬೇಕು ಎಂದು ಯಾದಗಿರಿ ಪ್ರಾಚಾರ್ಯ ವೈ.ಬಿ. ಬಾದವಾಡಗಿ ತಿಳಿಸಿದರು.
ಪಟ್ಟಣದ ಹರಿಜನವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಯಾದಗಿರಿ ಹಾಗೂ ತಾತ್ಕಾಲಿಕ ಟ್ರಸ್ಟ್ ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ಹಾಜರಾತಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರಕಾರಿ ಶಾಲೆಗಳಲ್ಲಿ ಸರಕಾರ ಉತ್ತಮವಾದ ಮೂಲ ಸೌಲಭ್ಯಗಳನ್ನು ಮತ್ತು ಉಚಿತವಾಗಿ ಶಿಕ್ಷಣ ಒದಗಿಸಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿವರಿಸಿದರು.
ಶಿಕ್ಷಣಾಧಿಕಾರಿಗಳಾದ ಚಂದ್ರಕಾಂತ ರೆಡ್ಡಿ ಮಾತನಾಡಿ, ಕಾರ್ಯಕ್ರಮದಲ್ಲಿ ಸಮುದಾಯದ ಸಹಕಾರ ತುಂಬಾ ಹೆಚ್ಚಿದೆ. ನೂತನ ಶೈಕ್ಷಣಿಕ ವರ್ಷ ಕಲಿಕಾ ಚೇತರಿಕೆ ಎನ್ನುವ ವಿನೂತನ ಕಾರ್ಯಕ್ರಮದ ಯಶಸ್ವಿಗಾಗಿ ಶಿಕ್ಷಕರ ಪಾಲು ಹೆಚ್ಚಿದೆ ಎಂದರು.
ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾದ ಶಿಕ್ಷಕ ಬಳಗವಿದೆ. ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಸಲಹೆ ನೀಡಿದರು.
ಪುರಸಭೆ ಉಪಾಧ್ಯಕ್ಷೆ ಭೀಮಮ್ಮ ಮುಕುಡಿ, ಪುರಸಭೆ ಸದಸ್ಯರಾದ ಬಾಬು ತಲಾರಿ, ಅನ್ವರ್, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ ಕುಮಾರ ನಿರೆಟಿ, ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ನಾರಾಯಣರೆಡ್ಡಿ ಪೊಲೀಸ್ ಪಾಟೀಲ್, ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಿವಾಸ, ಮುಖ್ಯಗುರು ರಾಮಕೃಷ್ಣ ಯಾದವ, ಪ್ರಮುಖರಾದ ಲಾಲಪ್ಪ ತಲಾರಿ, ಮಾಣಿಕ್ಯಪ್ಪ ಜೋಗು, ಕಲಿಕಾ ಸಂಯೋಜಕ ಶಿವಕುಮಾರ್, ಬಿಆರ್‌ಪಿ ಚಂದ್ರು ಜಾಧವ, ಸಿಆರ್‌ಪಿ ಬಾಲಪ್ಪ ಸಿರಿಗೆಂ ಇದ್ದರು.