Advertisement

ಹಳೇ ನಿಗಮಗಳಿಗೆ ಸಿಕ್ಕಿಲ್ಲ ವಾರಸುದಾರ; ಹೊಸದಕ್ಕೆ ಯಾರು ಜವಾಬ್ದಾರ?

08:22 AM Nov 20, 2020 | mahesh |

ಬೆಂಗಳೂರು: ರಾಜ್ಯದಲ್ಲೀಗ ನಿಗಮ ರಚನೆಯ ಹಬ್ಬ ಬಿರುಸಾಗಿದೆ. ಮೊದಲಿಗೆ ಕಾಡುಗೊಲ್ಲ ಅಭಿವೃದ್ಧಿ ನಿಗಮ, ಬಳಿಕ ಮರಾಠ ಸಮುದಾಯ ನಿಗಮ, ಅನಂತರದಲ್ಲಿ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ… ಇದಷ್ಟೇ ಅಲ್ಲ, ಇನ್ನೂ ಕೆಲವು ಸಮುದಾಯಗಳು ತಮಗೂ ಒಂದು ನಿಗಮ ಸ್ಥಾಪಿಸಿ ಎಂದು ದುಂಬಾಲು ಬೀಳುತ್ತಿವೆ. ಇದರ ಮಧ್ಯೆಯೇ ಈ ಹಿಂದೆ ರಚನೆಯಾಗಿರುವ ಹಲವಾರು ನಿಗಮಗಳಿಗೆ ಅಧ್ಯಕ್ಷರನ್ನೇ ನೇಮಕ ಮಾಡಿಲ್ಲ ಎಂಬ ವಿಚಾರ ಬಹಿರಂಗವಾಗಿದೆ.

Advertisement

ರಾಜ್ಯದಲ್ಲಿ ಸಮುದಾಯಗಳ ಅಭಿವೃದ್ಧಿಗೆ ರಚನೆಯಾಗಿರುವುದು ಇಪ್ಪತ್ತು ನಿಗಮಗಳು. ಆದರೆ ಅಧ್ಯಕ್ಷರು ನೇಮಕಗೊಂಡಿರುವುದು ಐದಕ್ಕೆ ಮಾತ್ರ. ಇನ್ನೈದು ನಿಗಮಗಳಿಗೆ ಇನ್ನೂ ಸುಸಜ್ಜಿತ ಕಚೇರಿ ಭಾಗ್ಯವೂ ಸಿಕ್ಕಿಲ್ಲ. ಉದಾಹರಣೆಗೆ, ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರದಲ್ಲಿ ಘೋಷಣೆಯಾದ ಸವಿತಾ ಸಮಾಜ ಅಭಿವೃದ್ಧಿ ನಿಗಮಕ್ಕೆ ಇನ್ನೂ ಕಚೇರಿಯೇ ಸಿಕ್ಕಿಲ್ಲ. 25 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿ 15 ಕೋ.ರೂ. ಬಿಡುಗಡೆಯಾಗಿದ್ದರೂ ನಿಗಮ ಅಧಿಕೃತವಾಗಿ ಇನ್ನೂ ಕಾರ್ಯಾರಂಭವೇ ಮಾಡಿಲ್ಲ.

ನಿಗಮಗಳಿಗೆ ವಾರ್ಷಿಕವಾಗಿ ನೀಡುವ ಅನುದಾನ ಸಿಬಂದಿ ವೇತನ ಮತ್ತು ಇತರ ಆಡಳಿತಾತ್ಮಕ ವೆಚ್ಚಕ್ಕೆ ಸಾಕಾಗುತ್ತಿಲ್ಲ. 25 ಕೋಟಿ ರೂ. ಅನುದಾನ ಯಾವುದಕ್ಕೂ ಸಾಲದು ಎಂದು 100ರಿಂದ 200 ಕೋಟಿ ರೂ.ಗಳಿಗೆ ನಿಗಮಗಳು ಬೇಡಿಕೆ ಇಟ್ಟಿವೆ.

ಹಿಂ. ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲ ನಿಗಮಗಳಿಗೂ ಬೆಂಗಳೂರಿನ ದೇವರಾಜ ಅರಸು ಭವನದಲ್ಲಿ ಸ್ಥಳಾವಕಾಶ ಎಂದು ಆದೇಶಿಸಲಾಗಿದೆ. ಕೆಲವು ನಿಗಮಗಳು ಚಿಕ್ಕ ಕೋಣೆಯಲ್ಲಿ ಕಾರ್ಯನಿರ್ವಹಿಸುವಂತಾಗಿದೆ. ನಿಗಮಗಳ ಸ್ಥಾಪನೆ ಮಾಡುವಾಗ ಇರುವ ಉತ್ಸಾಹ ಅನಂತರ ಇಲ್ಲದಿರುವುದು ಕಂಡುಬರುತ್ತದೆ.

ಓಲೈಕೆ ತಂತ್ರ
ರಾಜ್ಯದಲ್ಲಿ ಸಮುದಾಯಗಳ ಅಭಿವೃದ್ಧಿಗೆ ನಿಗಮ ಸ್ಥಾಪನೆ ಹೊಸದಲ್ಲ. ಆದರೆ ಹತ್ತು ವರ್ಷಗಳಿಂದೀಚೆಗೆ ಓಲೈಕೆ ರಾಜಕಾರಣದ ಭಾಗವಾಗಿ ನಿಗಮಗಳ ಸಂಖ್ಯೆ ಇಪ್ಪತ್ತಕ್ಕೆ ಏರಿಕೆಯಾಗಿದೆ.

Advertisement

2008ರ ವರೆಗೆ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ದೇವರಾಜ ಅರಸು ನಿಗಮ, ಅಲ್ಪಸಂಖ್ಯಾಕರಿಗೆ ಅಲ್ಪಸಂಖ್ಯಾಕರ ನಿಗಮ, ಪ. ಜಾತಿ ಸಮುದಾಯಕ್ಕೆ ಡಾ| ಬಿ.ಆರ್‌. ಅಂಬೇಡ್ಕರ್‌ ನಿಗಮ, ಪ. ಪಂಗಡಕ್ಕೆ ಮಹರ್ಷಿ ವಾಲ್ಮೀಕಿ ನಿಗಮ, ಮಹಿಳೆಯರಿಗೆ ಮಹಿಳಾ ಅಭಿವೃದ್ಧಿ ನಿಗಮ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾಕರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಎಲ್ಲ ವರ್ಗದವರ ಅಭಿವೃದ್ಧಿಗೂ ಯೋಜನೆ ರೂಪಿಸಿ ಕಾರ್ಯ ನಿರ್ವಹಿಸುತ್ತಿದ್ದವು.

ಅಧ್ಯಕ್ಷರಿಲ್ಲದ ನಿಗಮಗಳು
=ದೇವರಾಜ ಅರಸು ಹಿಂ. ವ. ಅಭಿವೃದ್ಧಿ ನಿಗಮ
=ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮ
=ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ
=ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
=ಅಲೆಮಾರಿ /ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿ ಮಂಡಳಿ
=ಡಾ| ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮ
=ಡಾ| ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ
=ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮ
=ಕ್ರೈಸ್ತ ಅಭಿವೃದ್ಧಿ ನಿಗಮ
=ಭೋವಿ ಅಭಿವೃದ್ಧಿ ನಿಗಮ
=ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ
=ಸವಿತಾ ಸಮಾಜ ಅಭಿವೃದ್ಧಿ ನಿಗಮ

Advertisement

Udayavani is now on Telegram. Click here to join our channel and stay updated with the latest news.

Next