Advertisement

ಕಸ ವಿಲೇವಾರಿ ಘಟಕವಾದ ಸಮುದಾಯ ಭವನ!

07:40 PM Sep 02, 2021 | Team Udayavani |

ಗೋಳಿಯಂಗಡಿ: ಜನರು, ಸಂಘ-ಸಂಸ್ಥೆಗಳಿಗೆ ಕಾರ್ಯಕ್ರಮ ಆಯೋಜಿಸಲು ಸರಕಾರದ ಲಕ್ಷಾಂತರ ರೂ. ಅನುದಾನದಲ್ಲಿ ನಿರ್ಮಿಸಿದ ಸಮುದಾಯ ಭವನವನ್ನು ಕಸ ವಿಲೇವಾರಿ ಘಟಕವಾಗಿ ಮಾಡಲಾಗಿದ್ದು, ಇದು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಶಾಲೆ, ಸಹಕಾರಿ ಸಂಘ, ಇನ್ನಿತರ ಜನವಸತಿ ಪ್ರದೇಶವಿರುವ ಜಾಗದಲ್ಲಿ ಈ ರೀತಿ ಕಸ ವಿಲೇವಾರಿ ಮಾಡುತ್ತಿರುವುದು ಸರಿಯಲ್ಲ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

Advertisement

ಬೆಳ್ವೆ ಗ್ರಾ.ಪಂ. ವ್ಯಾಪ್ತಿಯ ಅಲಾºಡಿ ಗ್ರಾಮದ ಆರ್ಡಿಯಲ್ಲಿ ಸುಮಾರು 10 ವರ್ಷಗಳ ಹಿಂದೆ ನಿರ್ಮಿಸಿದ ಸಮುದಾಯ ಭವನದಲ್ಲಿ ಈಗ ಬೆಳ್ವೆ, ಮಡಾಮಕ್ಕಿ ಹಾಗೂ ಹೆಂಗವಳ್ಳಿ ಈ 3 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ  ಒಣ ಕಸವನ್ನು ಸಂಗ್ರಹಿಸಲಾಗುತ್ತಿದೆ. ಇದಕ್ಕೆ ನಾಗರಿಕರಿಂದ ವಿರೋಧ ವ್ಯಕ್ತವಾಗಿದೆ.

10 ವರ್ಷಗಳ‌ ಹಿಂದೆ ನಿರ್ಮಾಣ:

2009- 10ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತ್‌ ಅನುದಾನದಲ್ಲಿ ಅಲಾºಡಿ ಗ್ರಾಮದ ಆರ್ಡಿಯಲ್ಲಿ ಈ ಸಮುದಾಯ ಭವನವನ್ನು ನಿರ್ಮಿಸಲಾಗಿತ್ತು. ನಿರ್ಮಾಣಗೊಂಡು, ಉದ್ಘಾಟನೆ ಬಳಿಕ ಅನೇಕ ವರ್ಷಗಳವರೆಗೆ ಈ ಸಮುದಾಯ ಭವನದಲ್ಲಿ ಹಲವಾರು ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು, ಸಾರ್ವಜನಿಕ ಆಚರಣೆ ಕುರಿತ ಪೂರ್ವಭಾವಿ ಸಭೆಗಳೆಲ್ಲ ನಡೆಯುತ್ತಿತ್ತು. ಆದರೆ ಕಳೆದ ಒಂದೆರಡು ವರ್ಷಗಳಿಂದ ಇಲ್ಲಿ ಯಾವುದೇ ಕಾರ್ಯಕ್ರಮ ನಡೆಯುತ್ತಿರಲಿಲ್ಲ.

ಶಾಲೆ, ಸೊಸೈಟಿಗೆ ಸಂಕಷ್ಟ:

Advertisement

ಆರ್ಡಿಯ ಈ ಸಮುದಾಯ ಭವನದ ಸಮೀಪವೇ ಸರಕಾರಿ ಪ್ರೌಢಶಾಲೆಯಿದ್ದು, ಇದಲ್ಲದೆ ಪಡಿತರ ವಿತರಣೆಯ ಸೊಸೈಟಿ, ಸರಕಾರಿ ಅಧಿಕಾರಿಗಳ ಮನೆಗಳಿರುವ ಕಾಲನಿ ಸಹ ಇಲ್ಲಿದೆ. ಆಸುಪಾಸಿನಲ್ಲಿ ಮನೆಗಳಿದ್ದು, ಇದು ಜನವಸತಿ ಪ್ರದೇಶವಾಗಿರುವುದರಿಂದ ಈ ಸಮುದಾಯ ಭವನದಲ್ಲಿ ಕಸ ವಿಲೇವಾರಿ ಮಾಡುವುದು ಸರಿಯಲ್ಲ ಎನ್ನುವ ಅಭಿಪ್ರಾಯ ಸ್ಥಳೀಯರದ್ದಾಗಿದೆ.

ಬಹುಗ್ರಾಮ ಕಸ ವಿಲೇವಾರಿ ಘಟಕ :

ಬೆಳ್ವೆ, ಮಡಾಮಕ್ಕಿ ಹಾಗೂ ಹೆಂಗವಳ್ಳಿ ಈ ಮೂರು ಗ್ರಾ.ಪಂ.ಗಳ ಸಂಯುಕ್ತ ಆಶ್ರಯದಲ್ಲಿ ಬೆಳ್ವೆಯ ಗುಮ್ಮೊàಲದ 10 ಎಕರೆ ಜಾಗದಲ್ಲಿ ಬಹುಗ್ರಾಮ ಘನ ತ್ಯಾಜ್ಯ ಸಂಪನ್ಮೂಲ ನಿರ್ವಹಣ ಘಟಕ ನಿರ್ಮಾಣಗೊಳ್ಳುತ್ತಿದೆ. ಆದರೆ ಅದರ ನಿರ್ಮಾಣ ಪ್ರಕ್ರಿಯೆ ನಡೆಯುತ್ತಿರುವುದರಿಂದ ಈಗ ಸಂಗ್ರಹಿಸುತ್ತಿರುವ ಒಣ ಕಸವನ್ನು ತಾತ್ಕಾಲಿಕವಾಗಿ ಈ ಸಮುದಾಯ ಭವನದಲ್ಲಿ ಸಂಗ್ರಹಿಸಲಾಗುತ್ತಿದೆ ಎನ್ನುವುದು ಪಂಚಾಯತ್‌ ಸ್ಪಷ್ಟನೆಯಾಗಿದೆ.

ನಮ್ಮ ಈ ಬಾರಿಯ ಆಡಳಿತಾವಧಿಯ ಮುನ್ನವೇ ಇಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿತ್ತು. ನಾನು ಸದಸ್ಯನಾದ ಬಳಿಕ ಇಲ್ಲಿ ಕಸ ವಿಲೇವಾರಿ ಮಾಡುವುದು ಸರಿಯಲ್ಲ. ಇಲ್ಲಿ ಶಾಲೆ, ಸೊಸೈಟಿಗಳೆಲ್ಲ ಇರುವುದರಿಂದ ಇಲ್ಲಿಂದ ತೆರವು ಮಾಡಿ ಎಂದು ಗ್ರಾ.ಪಂ.ಗೆ ಮನವಿ ಪತ್ರವನ್ನು ಸಹ ಸಲ್ಲಿಸಲಾಗಿದೆ. ರೋಹಿತ್‌ ಕುಮಾರ್‌ ಶೆಟ್ಟಿ, ಸ್ಥಳೀಯ ಗ್ರಾ.ಪಂ. ಸದಸ್ಯ

ಬೆಳ್ವೆ, ಮಡಾಮಕ್ಕಿ ಹಾಗೂ ಹೆಂಗವಳ್ಳಿ ಗ್ರಾ.ಪಂ. ಸಹಯೋಗದಲ್ಲಿ ಸುಸಜ್ಜಿತ ಘನ ತ್ಯಾಜ್ಯ ವಿಲೇವಾರಿ ಘಟಕ ತಯಾರಾಗುತ್ತಿದೆ. ಆದರೆ ಸದ್ಯಕ್ಕೆ ಆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಇಲ್ಲಿ ತಾತ್ಕಾಲಿಕವಾಗಿ ಕಸವನ್ನು ಸಂಗ್ರಹಿಸಲಾಗುತ್ತಿದೆ. ಇಲ್ಲಿ ಶಾಶ್ವತ ಕಸ ವಿಲೇವಾರಿ ಘಟಕವಲ್ಲ. ಹಸಿ ಕಸವನ್ನು ಇಲ್ಲಿ ವಿಲೇವಾರಿ ಮಾಡುತ್ತಿಲ್ಲ. ಒಣ ಕಸವನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ. ಚಂದ್ರಶೇಖರ್‌ ಶೆಟ್ಟಿ ಸೂರ್ಗೋಳಿ, ಬೆಳ್ವೆ ಗ್ರಾ.ಪಂ. ಅಧ್ಯಕ್ಷ 

 

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next