Advertisement
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಕಾಂಗ್ರೆಸ್ಸಿಗರು ಪ್ರಮುಖ ಪಾತ್ರ ವಹಿಸಿದ್ದರೂ, ಅದರಲ್ಲಿ 1935 ರಿಂದಲೇ ಕ್ರಿಯಾಶೀಲರಾಗಿದ್ದ ಕಮ್ಯೂನಿಸ್ಟರ ಪಾತ್ರವನ್ನು ಚರಿತ್ರ ಕಾರರು ಕಡೆಗಣಿಸಿದ್ದಾರೆ. ಈ ಕಮ್ಯೂನಿಸ್ಟರಾದರೋ ಸ್ವಾತಂತ್ರ್ಯ ಹೋರಾಟದ ಜತೆಗೇ ದುಡಿಯುವ ಜನ, ಕಾರ್ಮಿಕ ವರ್ಗದ ಹೋರಾಟಗಳನ್ನೂ ದೊಡ್ಡ ಪ್ರಮಾಣದಲ್ಲೇ ಆರಂಭಿಸಿದರು. ಸ್ವಾತಂತ್ರ್ಯ ದೊರೆತ ಬೆನ್ನಿಗೇ ರೈತ ಚಳುವಳಿಯನ್ನೂ ಮುನ್ನಡೆಸಿ ದರು. ತಮ್ಮ ವಿದ್ಯಾರ್ಥಿ ದಿನಗಳಲ್ಲಿ ದುಡಿಯುವ ಜನರ ಈ ಚಳುವಳಿಯಿಂದ ಪ್ರಭಾವಿತರಾಗಿ, ವಿದ್ಯಾರ್ಥಿ ದೆಸೆ ಮುಗಿಯುತ್ತಲೇ ಕಮ್ಯೂನಿಸ್ಟ್ ಚಳುವಳಿಗೆ ಧುಮುಕಿ ಅರುವತ್ತು ವರ್ಷಗಳಿಗೂ ಮೀರಿ ಚಳುವಳಿಯಲ್ಲಿ ಸಕ್ರಿಯರಾಗಿ ಇರುವ ಕೆ. ಆರ್. ಶ್ರೀಯಾನ್ ಅವರು ನಾಡಿನ ಸಾಕ್ಷಿ ಪ್ರಜ್ಞೆಯಂತೆ ಕ್ರಿಯಾಶೀಲರು.ಮಂಗಳೂರಿನ ಕೊಂಚಾಡಿಯು ಎಂಟು ದಶಕಗಳ ಹಿಂದೆ ನಗರದ ಹೊರವಲಯದ ಕೃಷಿಪ್ರಧಾನ ಗ್ರಾಮ ದೇರೆಬೈಲಿನ ಲ್ಲಿತ್ತು. ನೇಯ್ಗೆ, ಬೀಡಿ, ಹಂಚು, ಗೋಡಂಬಿ ಉದ್ಯಮಗಳು ಪ್ರಾರಂಭವಾಗಿ ಏಳಿಗೆ ಹೊಂದುತ್ತಿದ್ದ ಕಾಲ. ಬಡ ರೈತ ಕುಟುಂಬದ ರಾಮ ದೇವಾಡಿಗ ಗುರುವಮ್ಮ ದಂಪತಿಯ ಒಂಬತ್ತು ಮಂದಿ ಮಕ್ಕಳಲ್ಲಿ ಕೆ.ಆರ್. ಶ್ರೀಯಾನ್ ಏಳನೆಯವರು. ಜನನ 25 ಮೇ 1934. ಅವರ ಮೂವರು ಅಣ್ಣಂದಿರು ಸುಮಾರು 7-8 ಕಿ.ಮೀ.ಗಳಷ್ಟು ದೂರ ಕಾಲ್ನಡಿಗೆಯಲ್ಲಿ ನಡೆದು ಮಂಗಳೂರು ನಗರದ ಹೆಂಚಿನ ಕಾರ್ಖಾನೆಗಳಲ್ಲಿ; ಮೂವರು ಅಕ್ಕಂದಿರು ಸಮೀಪದ ಬಿಕರ್ಣಕಟ್ಟೆಯ ಗೋಡಂಬಿ ಕಾರ್ಖಾನೆಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಶ್ರೀಯಾನ್ ಕೊಂಚಾಡಿಯ ಶ್ರೀ ರಾಮಾಶ್ರಮ ಶಾಲೆಯಲ್ಲಿ ಪ್ರಾಥಮಿಕ, ಪದುವಾ ಹೈಸ್ಕೂಲ್‌ನಲ್ಲಿ ಪ್ರೌಢಶಿಕ್ಷಣವನ್ನು ಮುಂದುವರಿಸಿ, ಮಂಗಳೂರಿನ ಗಣಪತಿ ಹೈಸ್ಕೂಲ್‌ನಲ್ಲಿ 10 ಮತ್ತು 11ನೇ ತರಗತಿಗೆ ಹಾಜರಾಗಿ ಮೆಟ್ರಿಕ್ಯುಲೇಷನ್ ಮುಗಿಸಿದರು.
1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಾಗ, ಗಣಪತಿ ಹೈಸ್ಕೂಲ್‌ನಲ್ಲಿ ಮೆಟ್ರಿಕ್ ವಿದ್ಯಾರ್ಥಿಯಾಗಿದ್ದ ಕೆ.ಆರ್. ಶ್ರೀಯಾನ್ ತನ್ನ ಸಮವಯಸ್ಕ ಮಿತ್ರರನ್ನು ಕೂಡಿಸಿಕೊಂಡು ಮಂಗಳೂರು ವಿಧಾನಸಭಾ ಕ್ಷೇತ್ರದ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿ ಎ. ಶಾಂತಾರಾಮ ಪೈಯವರ ಪರವಾಗಿ ಪ್ರಚಾರಕಾರ್ಯ ನಡೆಸಿದ್ದರು.
Related Articles
Advertisement
ಅವರ ಶಿಸ್ತು ಮತ್ತು ಬದ್ಧತೆಗಳಿಂದಾಗಿ ಕಮ್ಯೂನಿಸ್ಟ್ ಪಕ್ಷದಲ್ಲಿ ಹೆಚ್ಚು ಜವಾಬ್ದಾರಿಗಳು ಅವರಿಗೆ ಬಂದುವು. 1964ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷ ವಿಭಜನೆಯಾಯಿತಷ್ಟೆ? ದ.ಕ. ಜಿಲ್ಲೆಯಲ್ಲಿ ಹೆಚ್ಚಿನ ನಾಯಕರು ಸಿಪಿಐ ಪಕ್ಷದ ಜತೆಗಿದ್ದರು. ಸಿಪಿಐ (ಎಂ) ಜತೆಗೆ ದೃಢವಾಗಿ ನಿಂತವರು ಎಂ. ಎಚ್. ಕೃಷ್ಣಪ್ಪ, ಎ. ಕೃಷ್ಣ ಶೆಟ್ಟಿ, ಪಿ. ರಾಮಚಂದ್ರರಾವ್, ಕೆ.ಆರ್. ಶ್ರೀಯಾನ್ ಮಾತ್ರ. ಅವರ ನಾಯಕತ್ವದಲ್ಲಿ ಕಾರ್ಮಿಕ ಹಾಗೂ ರೈತ ಸಂಘಟನೆಗಳ ಬಹುಜನ ವಿಭಾಗ ಸಿಪಿಐ (ಎಂ) ಪಕ್ಷವನ್ನು ಬೆಂಬಲಿಸಿ ಆಧರಿಸಿತು. ವಿಭಜನೆಯ ಪರಿಣಾಮ ಕಾರ್ಮಿಕ, ರೈತ ಸಂಘಟನೆಗಳ ಮೇಲೂ ಆಯಿತು. ಇಂದಿಗೂ ಸಿಪಿಐ (ಎಂ) ಬೆಂಬಲಿಸುವ ಕರ್ನಾಟಕ ಪ್ರಾಂತ ರೈತ ಸಂಘ, ಕಾರ್ಮಿಕ ಸಂಘಟನೆ ಸಿಐಟಿಯು ಜನಹೋರಾಟದ ಮುಂಚೂಣಿಯಲ್ಲಿದೆ. ಸಿಪಿಐ (ಎಂ) ನ ಹೊಸ ಪತ್ರಿಕೆ “ಐಕ್ಯರಂಗ’ ವ್ಯವಸ್ಥಾಪಕರಾಗಿ- ಅದು 1978ರಲ್ಲಿ ಬೆಂಗಳೂರಿಗೆ ಸ್ಥಾನಪಲ್ಲಟವಾಗುವವರೆಗೂ- ಕೆ.ಆರ್. ಶ್ರೀಯಾನ್ ಕಾರ್ಯನಿರ್ವಹಿಸಿದ್ದಾರೆ. ಕಾರ್ಮಿಕ ಸಂಘಟನೆ ಗಳು ಸಿಐಟಿಯುವಿಗೆ ಸಂಯೋಜನೆಗೊಂಡ ಬಳಿಕ ಶ್ರೀಯಾನರು ವಿವಿಧ ಸಂದರ್ಭಗಳಲ್ಲಿ ಹಂಚಿನ ಕಾರ್ಮಿಕರ ಸಂಘಟನೆ, ಬೀಡಿ ಕಾರ್ಮಿಕರ ಜಿಲ್ಲಾ ಫೆಡರೇಶನ್, ಗೋಡಂಬಿ ಕಾರ್ಮಿಕರ ಯೂನಿಯನ್ ಮೊದಲಾದ ಮುಖ್ಯ ಕಾರ್ಮಿಕ ಸಂಘಟನೆಗಳಲ್ಲದೆ ಇತರ ಕಾರ್ಮಿಕ ಸಂಘಟನೆಗಳಿಗೂ ಮುಖಂಡತ್ವ ನೀಡಿದ್ದರು ಹಾಗೂ ಹಲವು ಹೋರಾಟಗಳನ್ನು ಮುನ್ನಡೆಸಿದ್ದರು.
1969ರಲ್ಲಿ ವಿಜಯಾ ಅವರೊಂದಿಗೆ ಕೆ.ಆರ್. ಶ್ರೀಯಾನರ ವಿವಾಹವಾಯಿತು. ಇವರಿಗೆ ನಾಲ್ವರು ಮಕ್ಕಳು – ಮೂರು ಗಂಡು, ಒಂದು ಹೆಣ್ಣು. ಎಲ್ಲರಿಗೂ ಮದುವೆಯಾಗಿದೆ. ವಿಜಯಾ ಅವರು ಕಳೆದ ವರ್ಷ ಅನಾರೋಗ್ಯದಿಂದ ತೀರಿಕೊಂಡಿದ್ದಾರೆ.
ಕೂಳೂರು, ದೇರೆಬೈಲ್, ಕೋಡಿಕಲ್ ಗ್ರಾಮಗಳ ಭೂಸ್ವಾಧಿಧೀನಕ್ಕೆ ಸರಕಾರ ಆಜ್ಞೆ ಪ್ರಕಟಿಸಿದಾಗ 1970ರಲ್ಲಿ ಕೆ. ಆರ್.ಶ್ರೀಯಾನ್ ಅವರ ನೇತೃತ್ವದಲ್ಲಿ ನಡೆದ ಹೋರಾಟದಿಂದಾಗಿ ಸರಕಾರ ಭೂಸ್ವಾಧೀನ ಆಜ್ಞೆಯನ್ನು ಹಿಂದೆಗೆದುಕೊಂಡಿತು.
1978ರಲ್ಲಿ ನಡೆದ ಸಿಪಿಐ (ಎಂ) ಪಕ್ಷದ ದ.ಕ. ಜಿಲ್ಲಾ ಸಮ್ಮೇಳನ ದಲ್ಲಿ ಕೆ. ಆರ್. ಶ್ರೀಯಾನ್ ಅವರು ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಗೊಂಡವರು, 30 ವರ್ಷಗಳ ಕಾಲ ಅಂದರೆ, 2008ರವರೆಗೆ ಜಿಲ್ಲೆಯಲ್ಲಿ ಪಕ್ಷವನ್ನು ಬೆಳೆಸಲು ಕಾರಣರಾದರು. ಪಕ್ಷದ ರಾಜ್ಯ ಸಮಿತಿಗೂ 1982ರಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಲಿಗೂ ಆಯ್ಕೆಯಾಗಿ 2015ರ ವರೆಗೂ ಪಕ್ಷದ ರಾಜ್ಯ ಸಮಿತಿ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಜಿಲ್ಲೆಯ ಪಕ್ಷದ ಮುಖ್ಯ ಸ್ಥಾನಕ್ಕೆ ಬಂದ ಮೇಲೆ ಹಲವು ಜನಪರ ಚಳುವಳಿಗಳಲ್ಲಿ ಕೆ. ಆರ್.ಶ್ರೀಯಾನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಬೀಡಿ ಕಾರ್ಮಿಕರು ಪ್ರಾವಿಡೆಂಟ್ ಫಂಡಿಗಾಗಿ ನಡೆಸಿದ ಜೂನ್ 1982ರ ಅನ್ನಸತ್ಯಾಗ್ರಹ, ಧೂಮಪಾನ ನಿಷೇಧ ಕಾಯಿದೆ ವಿರುದ್ಧವಾಗಿ ಆಗಸ್ಟ್ 2016ರಲ್ಲಿ ನಡೆದ ಪ್ರತಿಭಟನಾ ರ್ಯಾಲಿ, ಕಾಯಿದೆ ವಿರುದ್ಧ ಮಾರ್ಚ್ 2015ರ ಪ್ರತಿಭಟನೆ, ಆಗಸ್ಟ್ 1988ರಲ್ಲಿ ರೇಶನ್ ಕೋಟಾ ಹೆಚ್ಚಿಸಲು ಆಗ್ರಹಿಸಿದ ಅನ್ನಕ್ಕಾಗಿ ಹೋರಾಟ, ಅಡಿಕೆ ತೆಂಗು ಬೆಳೆಗಾರರ ರಕ್ಷಣೆಗಾಗಿ ನಡೆಸಿದ ಸಮಾವೇಶ ಹಾಗೂ ಹೋರಾಟಗಳು, ನಿವೇಶನ ರಹಿತರು ಹಕ್ಕುಪತ್ರ ವಂಚಿತರು ನಡೆಸುತ್ತಿರುವ ಭೂಮಿ ಹೋರಾಟಗಳು ಇತ್ಯಾದಿ ಹೋರಾಟಗಳು ಪ್ರಧಾನವಾದವು. ಪಕ್ಷದಲ್ಲಿ ಶಿಸ್ತು ಮತ್ತು ಐಕ್ಯತೆಯನ್ನು ಕಾಪಾಡಿಕೊಳ್ಳಿ ಎಂಬುದೇ ಕೆ.ಆರ್. ಶ್ರೀಯಾನರು ಕಿರಿಯ ಪಕ್ಷ ಕಾರ್ಯಕರ್ತರಿಗೆ ನೀಡುವ ಸಂದೇಶ. ಕಠಿನ ನಿರ್ಧಾರಗಳ, ಆದರೆ ಮೆಲುದನಿಯ ಹೋರಾಟಗಾರ ಕೆ. ಆರ್. ಶ್ರೀಯಾನ್. ಚಳುವಳಿಗಳ ಕಾಠಿನ್ಯದಿಂದ ಬಳಲಿದರೂ, ನಿರಾಳವಾದ, ಆಶಾವಾದದ ನಡವಳಿಕೆ ಅವರದು. ಅವರ “ಇಲ್ ದೆತ್ತಿ ಮಗೆ’ನಾಟಕದ ಹಾಡೊಂದು ಆ ಆಶಾವಾದದ ಸಂಕೇತ.ಸುಲಿಪುನ ಕೂಟದ ಆ ಶಕ್ತಿ ಅಳಿವುಂಡು|| ಜನಶಕ್ತಿ ಕೊಡಿ ರಾವು||’
ವಾಸುದೇವ ಉಚ್ಚಿಲ