Advertisement

ದೇಶದ ಇತಿಹಾಸ ತಿರುಚಿದ್ದು ಕಮ್ಯುನಿಸ್ಟ್ , ಕಾಂಗ್ರೆಸ್ಸಿಗರು: ಶಾಸಕ ಯತ್ನಾಳ

08:24 AM Nov 02, 2019 | Team Udayavani |

ವಿಜಯಪುರ: ದೇಶದಲ್ಲಿ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ಸಿಗರು ದೇಶದ ಇತಿಹಾಸ ತಿರುಚಿದ್ದಾರೆ. ಇದರ ಫಲವೇ ಹಿಂದೂ ವಿರೋಧಿ ಟಿಪ್ಪು ವೈಭವೀಕರಣ ಇತಿಹಾಸ ರಚನೆಯಾಗಿದೆ. ಇಂಥ ಸಂಗತಿಗಳನ್ನು ಮಕ್ಕಳಿಗೆ ಕಲಿಸಬಾರದು ಎಂಬ ‌ಕಾರಣಕ್ಕೆ ಸರಕಾರ ಪಠ್ಯಕ್ರಮದಿಂದ ಟಿಪ್ಪು ವಿಷಯ ಕೈಬಿಡುವ ನಿರ್ಧಾರಕ್ಕೆ ಬಂದಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Advertisement

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಕಾಂಗ್ರೆಸ್, ಕಮ್ಯೂನಿಷ್ಠರು ತಿರುಚಿರುವ ಇತಿಹಾಸವನ್ನುಈಗ ಸರಿಪಡಿಸುವ ಕೆಲಸ ನಮ್ಮ ಸರಕಾರದಿಂದ ನಡೆಯುತ್ತಿದೆ ಎಂದು ಪಠ್ಯದಿಂದ ಟಿಪ್ಪು ಪಾಠ ಕೈಬಿಡುವ ಸರಕಾರದ‌ ನಿರ್ಧಾರವನ್ನು ಸಮರ್ಥಿಸಿದರು.

ಟಿಪ್ಪು ಅನೇಕ ಸಮುದಾಯಗಳ ಮೇಲೆ ದೌರ್ಜನ್ಯ ನಡೆಸಿದ್ದ.ಹಿಂದೂಗಳು ಅನುಭವಿಸಿದ ನೋವಿನ ಇತಿಹಾಸವನ್ನುವ್ಯವಸ್ಥಿತವಾಗಿ ತಿರುಚಲಾಗಿದೆ. ಹೀಗಾಗಿ ಇಂಥ ಮತಾಂಧನ ಇತಿಹಾಸ ಓದುವ ಸುಸ್ಥಿತಿ ನಮ್ಮ ಮಕ್ಕಳಿಗೆ ಬೇಡ ಎಂದು ಕಿಡಿಕಾರಿದರು.

ಇನ್ನಾದರೂ ದೇಶಕ್ಕೆ ಅಪ್ರತಿಮ ಸೇವೆ ಸಲ್ಲಿಸಿ, ಅಪರೂಪದ ಕೊಡುಗೆ ನೀಡಿದ ಮಹಾರಾಣಾ ಪ್ರತಾಪ್, ಪೃತ್ವಿರಾಜ್ ಚವ್ಹಾಣ, ಭಗತ್ ಸಿಂಗ್, ಲೋಕಮಾನ್ಯ ತಿಲಕರಂಥ ಮಹಾತ್ಮರ ಕೊಡುಗೆ ಕುರಿತು ಮುಂದಿನ ಪೀಳಿಗೆಗೆ ಮನವರಿಕೆ ಮಾಡಲು ಇವರ ಜೀವನ ಚರಿತ್ರೆಯನ್ನು ಕೇಂದ್ರ  ರಾಜ್ಯ ಸರಕಾರಗಳು ಪಠ್ಯದಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದರು.

ಕನ್ನಡ ವಿರೋಧಿ ಟಿಪ್ಪು ಸುಲ್ತಾನ್ ಪಠ್ಯ ಕೈಬಿಡುವುದರಿಂದ ಕನ್ನಡ ನಾಡಿಗೆ ಉತ್ತಮ ಸಂದೇಶ ರವಾನೆ ಆಗಲಿದೆ ಎಂದರು.

Advertisement

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೇವಲ ‌ಮಹಾತ್ಮಾ ಗಾಂಧೀಜಿ ಮಾತ್ರ ಪಾಲ್ಗೊಂಡಿಲ್ಲ. ನೇತಾಜಿ ಸುಭಾಷಚಂದ್ರ ಭೋಸ್, ಸರದಾರ ವಲ್ಲಭಭಾಯಿ ಪಟೇಲ್ ಅವರಂಥ ಮಹಾನ್ ನಾಯಕರ ಕೊಡುಗೆಯೂ ಅನುಪಮವಾಗಿದೆ ಎಂದು, ಡಾ.ಅಂಬೇಡ್ಕರ್ ಅವರೇ ಹೇಳಿದ್ದಾರೆ ಎಂದರು.

ಹೀಗಾಗಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ ಅವರ ವಿಚಾರಧಾರೆಗಳನ್ನು ದೇಶದ ಮುಂದಿಡುವ ಅಗತ್ಯವಿದೆ.

ನೆಹರು ಮನೆತನಕ್ಕೆ ದೇಶದಲ್ಲಿ ಈವರೆಗೆ ನೀಡಿರುವ ಗೌರವ ಸಾಕು.‌ ಸುಭಾಷಚಂದ್ರ ಭೋಸ್ ಅವರಿಗೂ ಸೂಕ್ತ ಗೌರವ ಸಿಗಬೇಕು. ರಾಜೀವ ಗಾಂಧಿ ಅವರೇನು ಡಾ.ಅಂಬೇಡ್ಜರ್ ಅವರಿಗಿಂತ ಮೇಲಾ. ಕಾಂಗ್ರೆಸ್ ನವರು ಭಾರತ ರತ್ನ ನೀಡುವಲ್ಲಿ ವಿಳಂಬ ಮಾಡಿ ಅವಮಾನ ಮಾಡಿದರು. ಅಂಬೇಡ್ಕರ ಅವರ ಸಲುವಾಗಿ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದ ಪಕ್ಷ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಮಾಜಿ ಮುಖ್ಯಮಂತ್ರಿಸಿದ್ಧರಾಮಯ್ಯ ಅವರು ಅರ್ಧ ಇತಿಹಾಸ ಓದಿ ಏನೇನೋ ಮಾತನಾಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು ಯಾವುದೇ ಪಕ್ಷ ಸಿದ್ಧಾಂತ ಹೊಂದಿದ್ದರೂ ಎಲ್ಲರಿಗೂ ಸಮಾನ ಗೌರವ ನೀಡಿ ಎಂದು ಸಲಹೆ ನೀಡಿದರು.

ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆ ಅನುಭವದಿಂದ ಬಿಜೆಪಿ ಪಾಠವಾಗಿದೆ ಎಂದರು.

ಸ್ಥಳೀಯ ನಾಯಕರನ್ನು ಹೈಕಮಾಂಡ್‌ ಇನ್ನು ಮುಂದೆ ವಿಶ್ವಾಸಕ್ಕೆ ತೆಗೆದುಕೊಂಡು ಆದ್ಯತೆ ನೀಡಲಿದೆ ಎಂಬ ವಿಶ್ವಾಸವಿದೆ ಎಂದರು.

ಆಯಾ ರಾಜ್ಯಗಳಲ್ಲಿ ಅಲ್ಲಿಯ ನಾಯಕರಿಗೆ ಗೌರವ ನೀಡಲೇಬೇಕು. 30 ಸಾವಿರ ಮತಗಳಿಂದ ಸೋತವರು ಮಹಾರಾಷ್ಟ್ರದ ಸ್ಟಾರ್ ಪ್ರಚಾರಕರಾಗಿದ್ದರು ಅವರು ಸೋತಲ್ಲಿ ಬಿಜೆಪಿ ಸೋತು ಹೋಗಿದೆ ಎಂದು ಟೀಕಿಸಿದರು.

ಬಿಜೆಪಿ ಪಕ್ಷಕ್ಕಾಗುವ ನೋವು ನಮ್ಮ ತಾಯಿಗೆ ನೋವಾದಂತೆ. ಈ ಹಿನ್ನೆಲೆ ಪಕ್ಷಕ್ಕೆ ಅನ್ಯಾಯ ಆದಾಗ ಮಾತನಾಡುತ್ತೇನೆ ಎಂದರು.

ರಾಜ್ಯ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಸಂತ್ರಸ್ತರ ಪರವಾಗಿ ಪಾದಯಾತ್ರೆ ಸೇರಿದಂತೆ ಯಾವುದೇ ಹೋರಾಟ ಮಾಡುವುದು ಅವರ ವಿವೇಚನೆಗೆ ಬಿಟ್ಟದ್ದು ಎಂದರು.

ಸಿದ್ಧರಾಮಯ್ಯ ಪಾದಯಾತ್ರೆ ಬಳಿಕ ನಮಗೆ ಅವಕಾಶ ನೀಡಿದರೆ ನಾನು ಹೋಗಿ ರಾಜ್ಯ ಸರಕಾರದ ಸಾಧನೆಗಳನ್ನು ಜನರ ಮುಂದಿಟ್ಟು ಪ್ರಚಾರ ಮಾಡುತ್ತೇನೆ. ಇಲ್ಲದಿದ್ದರೆ ಮೂರು ಜನ ಉಪ ಮುಖ್ಯಮಂತ್ರಿಗಳು ಮಾತ್ರ ಹೋಗಿ ರಾಜ್ಯ ಸರಕಾರದ ಸಾಧನೆಗಳನ್ನು ಪ್ರಚಾರ ಮಾಡಲಿ ಎಂದು ಕುಟುಕಿದರು.

17 ಶಾಸಕರು ರಾಜೀನಾಮೆ ನೀಡಿದ ಪರಿಣಾಮ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿದೆ‌. ಅನರ್ಹ ಶಾಸಕರು ಬಿಜೆಪಿಗೆ ಬಂದರೆ ಅವರಿಗೆ ಟಿಕೇಟ್ ನೀಡಿ, ಗೆಲ್ಲಿಸಬೇಕು. ಅವರಿಗೂ ಅಧಿಕಾರ ನೀಡವುದು ನಮ್ಮ ಪಕ್ಷದ ಜವಾಬ್ದಾರಿ ಎಂದು ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಹೇಳಿಕೆಗೆ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next