Advertisement

ಸಂವಹನ ಕೌಶಲ್ಯ ಅಗತ್ಯ

09:28 PM Sep 22, 2019 | Lakshmi GovindaRaju |

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳು ಎಷ್ಟೇ ಉನ್ನತ ಶಿಕ್ಷಣ ಪಡೆದರೂ ಸಂವಹನ ಕೌಶಲ್ಯ ಬೆಳೆಸಿಕೊಳ್ಳಬೇಕು. ಅನೇಕ ವಿದ್ಯಾರ್ಥಿಗಳಿಗೆ ಇಂದಿಗೂ ಉದ್ಯೋಗ ನೀಡುವ ಕಂಪನಿಗಳು ಏರ್ಪಡಿಸುವ ಸಂದರ್ಶನ ಎದುರಿಸುವ ಕಲೆ ಗೊತ್ತಿಲ್ಲದೇ ಕೈಗೆ ಬರುವ ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ಐಟಿಬಿಟಿ ಇಲಾಖೆ ನಿವೃತ್ತ ಕಾರ್ಯದರ್ಶಿ ವಿವೇಕ್‌ ಕುಲಕರ್ಣಿ ತಿಳಿಸಿದರು.

Advertisement

ನಗರದ ಹೊರ ವಲಯದಲ್ಲಿರುವ ನಾಗಾರ್ಜುನ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಐದು ವರ್ಷಗಳ ಎಂಜಿನಿಯರಿಂಗ್‌ ಪೂರೈಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದ ಬಳಿಕ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಓದಿನಷ್ಟೇ ಕೌಶಲಕ್ಕೂ ಆದ್ಯತೆ ನೀಡಬೇಕಿದೆ. ಎಂಜಿನಿಯರಿಂಗ್‌ ವಿಭಾಗಗಳ ಪೈಕಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ಗೆ ಇರುವ ವಿಫ‌ುಲವಾದ ಅವಕಾಶಗಳು ಮತ್ತೂಂದಕ್ಕಿಲ್ಲ ಎಂದರು.

ಗುಣಮಟ್ಟದ ಶಿಕ್ಷಣ ಪಡೆಯಿರಿ: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಓದು, ಬರಹದ ಅಭ್ಯಾಸ ಸಾಕಷ್ಟು ಕ್ಷೀಣಿಸುತ್ತಿದೆ. ಸತತ ಅಧ್ಯಯನದಿಂದ ಜ್ಞಾರ್ನಾಜನೆ ಹೆಚ್ಚುತ್ತದೆ. ಆದರೆ ಇಂದಿನ ಬಹಳಷ್ಟು ವಿದ್ಯಾರ್ಥಿಗಳು ಓದಿನ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದರು. ಉತ್ತಮ ಭವಿಷ್ಯ ರೂಪುಗೊಳ್ಳಬೇಕಾದರೆ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಓದು ಮುಗಿದ ನಂತರ ಬದುಕು ರೂಪಿಸಿಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ ವಿದ್ಯಾರ್ಥಿ ಜೀವನವನ್ನು ಸದ್ಬಳಕೆ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ಪಡೆಯಬೇಕೆಂದರು.

ಎಂಜಿನಿಯರ್‌ಗಳು ದೇಶದ ಭವಿಷ್ಯ: ಜೀವನದುದ್ದಕ್ಕೂ ಕಲಿಕೆಯ ಮೇಲೆ ಆಸಕ್ತಿ ಇರಬೇಕು. ಒಂದು ಕೋರ್ಸ್‌ ಮುಗಿದ ಬಳಿಕ ಕಲಿಕೆ ಮುಗಿಯುವುದಿಲ್ಲ. ನಿರಂತರವಾದ ಅಧ್ಯಯನ ಇದ್ದರೆ ಮಾತ್ರ ಯಾವುದೇ ರಂಗದಲ್ಲಿ ಯಶಸ್ಸು ಸಾಧಿಸಬಹುದು. ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಮೇಲೆಯೇ ದೇಶದ ಭವಿಷ್ಯ ನಿಂತಿದೆ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಎಂಜಿನಿಯರ್‌ಗಳ ಪಾತ್ರ ಅಮೂಲ್ಯವಾಗಿರುವುದರಿಂದ ಆಳವಾದ ಅಧ್ಯಯನಕ್ಕೆ ವಿದ್ಯಾರ್ಥಿಗಳು ಆದ್ಯತೆ ನೀಡಬೇಕೆಂದರು.

ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ನಾಗಾರ್ಜುನ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ಶ್ರೀಕಂಠ ಮೂರ್ತಿ ವಹಿಸಿದ್ದರು. ವೇದಿಕೆಯಲ್ಲಿ ನಾಗಾರ್ಜುನ ತಾಂತ್ರಿಕ ಮಹಾ ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕರಾದ ಭಾನು ಚೈತನ್ಯ, ಡಾ.ಎಸ್‌.ಜಿ.ಗೋಪಾಲಕೃಷ್ಣ, ಉಪ ಪ್ರಾಂಶುಪಾಲ ಡಾ.ಹರೀಶ್‌, ಪರೀಕ್ಷಾ ನಿಯಂತ್ರಕರಾದ ಡಾ.ಎಚ್‌.ಸಿ.ಯೋಗೀಶ್‌, ವಿವಿಧ ವಿಭಾಗಗಳ ಮುಖ್ಯಸ್ಥರಾದ ಅನಂದಮ, ಶಾರದಾ, ಭವನಿ ಸೇರಿದಂತೆ ಮಹಾ ವಿದ್ಯಾಲಯದ ವಿವಿಧ ವಿಭಾಗದ ಎಂಜಿನಿಯರಿಂಗ್‌ ಪೂರೈಸಿದ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

53 ವಿದ್ಯಾರ್ಥಿಗಳಿಗೆ ಚಿನ್ನದ ಪದಕ: ನಾಗಾರ್ಜುನ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ನಡೆದ ಎಂಜನಿಯರಿಂಗ್‌ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಕಂಪ್ಯೂಟರ್‌ ಸೈನ್ಸ್‌ ಆಂಡ್‌ ಎಂಜಿನಿಯರಿಂಗ್‌, ಕನ್‌ಸ್ಟ್ರಕ್ಷನ್‌ ಟೆಕ್ನಾಲಜಿ, ಎಂಟೆಕ್‌, ಎಂಬಿಎ, ಸಿವಿಲ್‌ ಎಂಜಿನಿಯರಿಂಗ್‌, ಮೆಕ್ಯಾನಿಕಲ್‌ ಎಂಜಿನಿಯರಿಂಗ್‌, ಎಲೆಕ್ಟ್ರಿಕಲ್‌ ಆಂಡ್‌ ಕಮ್ಯೂನಿಕೇಷನ್‌ ಎಂಜಿನಿಯರಿಂಗ್‌ ವಿಭಾಗ ಸೇರಿ ಒಟ್ಟು 608 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರೆ ಆ ಪೈಕಿ 53 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕ ಪಡೆದು ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next