ಹೊಸದಿಲ್ಲಿ: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಾಗಿನಿಂದ ಈವರೆಗೆ ಅಲ್ಲಿ ವಿಧಿಸಲಾಗಿರುವ ಕೆಲವಾರು ನಿರ್ಬಂಧಗಳಿಂದಾಗಿ, ಜನ ಸಾಮಾನ್ಯರು ನರಳುವಂತಾಗಿದೆ ಎಂಬು ದನ್ನು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಕೊಂಡಿದೆ.
ಕಾಶ್ಮೀರದಲ್ಲಿ ಜಾರಿಗೊಳಿಸಲಾಗಿರುವ ನಿರ್ಬಂಧಗಳ ವಿರುದ್ಧ ಸಲ್ಲಿಸಲಾಗಿರುವ ಮನವಿಗಳ ವಿಚಾರಣೆ ವೇಳೆ, ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್, ನಿಷೇಧಾಜ್ಞೆಯು ಜಾರಿಗೊಂಡಿರುವ ಪ್ರದೇಶಗಳಲ್ಲಿ ಜನರು ಅನುಭವಿಸುವ ಯಾತನೆಯನ್ನು ಎಳೆಎಳೆಯಾಗಿ ನ್ಯಾ| ಎನ್.ವಿ. ರಮಣ ನೇತೃತ್ವದ ನ್ಯಾಯ ಪೀಠದ ಮುಂದೆ ಬಿಡಿಸಿಟ್ಟರು.
ಕಾಶ್ಮೀರದೊಳಕ್ಕೆ ಕಾಲಿಡಲು ಯಾವುದೇ ನೇತಾರರಿಗೆ ಈವರೆಗೆ ಅವಕಾಶ ಕಲ್ಪಿಸಲಾಗಿಲ್ಲ. ಇದಕ್ಕೆ ನೇತಾರರ ಸುರಕ್ಷತೆಯ ಕಾರಣ ನೀಡಲಾಗುತ್ತಿದೆ. ಆದರೆ, ಈ ಕಾರಣಕ್ಕೆ ಸೂಕ್ತವಾದ ಪುರಾವೆಯನ್ನು ಸರಕಾರ ನೀಡಿಲ್ಲ. ಇದರ ಜತೆಗೆ, ಮೊಬೈಲ್ ಮತ್ತು ಸ್ಥಿರ ದೂರವಾಣಿಗಳ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ. ಈ ಮೂಲಕ, ನಿಷೇ ಧಾಜ್ಞೆಯನ್ನು ಅದರ ವ್ಯಾಪ್ತಿಗೂ ಮೀರಿ ಜಾರಿಗೊಳಿಸುವ ಮೂಲಕ ಸಾಮಾನ್ಯ ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದರು.
ಇಡೀ ರಾಜ್ಯವನ್ನೇ ನಿರ್ಬಂಧದಲ್ಲಿ ಇರಿಸಬೇಕೆಂದರೆ, ಸರಕಾರ, ಸಂವಿಧಾನದ 352ನೇ ವಿಧಿಯ ಅನ್ವಯ ತುರ್ತು ಪರಿಸ್ಥಿತಿಯನ್ನೇ ಘೋಷಿಸಬಹು ದಲ್ಲವೇ ಎಂದೂ ಖಾರವಾಗಿ ಪ್ರಶ್ನಿಸಿದರು. ಸಿಬಲ್ ವಾದವನ್ನು ಪೀಠದಲ್ಲಿದ್ದ ನ್ಯಾ| ಆರ್. ಸುಭಾಷ್ ರೆಡ್ಡಿ ಒಪ್ಪಿಕೊಂಡರಲ್ಲದೆ, ನಿರ್ಬಂಧದ ಹೊರೆಯನ್ನು ಸತತವಾಗಿ ಹೊತ್ತಿರುವ ಕಾಶ್ಮೀರ ಜನತೆಗೆ ತೊಂದರೆಯಾಗಿರುವುದು ನಿಜ ಎಂದು ಒಪ್ಪಿಕೊಂಡರು.
ಇದೇ ವೇಳೆ, ರಾಜ್ಯದಲ್ಲಿ ವಿವಿಧ ನಿರ್ಬಂಧಗಳನ್ನು ಹೇರಿದ್ದನ್ನು ವಿರೋಧಿಸಿ ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಸಲ್ಲಿಸಿರುವ ಅರ್ಜಿ ಪರ ವಾದ ಮಂಡಿಸಿದ ಕಪಿಲ್ ಸಿಬಲ್‌ಗೆ, ಸುಪ್ರೀಂ ಕೋರ್ಟ್ ‘ನಿಮ್ಮ ಪ್ರಕಾರ, ಆಡಳಿತಯಂತ್ರವು ಹಿಂಸಾಚಾರ ನಡೆಯುವವರೆಗೂ ಕಾಯಬೇಕಿತ್ತೇ?’ ಎಂದೂ ಪ್ರಶ್ನೆ ಮಾಡಿತು.