Advertisement

ಕೇತುಮೊಟ್ಟೆ ನಿರ್ಬಂಧಿತ ಪ್ರದೇಶ: ಡಿಸಿ ಅನೀಸ್‌ ಆದೇಶ

12:37 AM Mar 21, 2020 | Sriram |

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೇತುಮೊಟ್ಟೆ ಗ್ರಾಮಕ್ಕೆ ಬಂದಿರುವ ವ್ಯಕ್ತಿಯೋರ್ವರಿಗೆ ಕೋವಿಡ್‌ 19 ವೈರಸ್‌ ಸೋಂಕು ತಗುಲಿರುವ ಹಿನ್ನೆಲೆ ಮುಂದಿನ ಆದೇಶದವರೆಗೆ, ಈ ಗ್ರಾಮದ 500 ಮೀಟರ್‌ ವ್ಯಾಪ್ತಿಯ ಭೌಗೋಳಿಕ ಪ್ರದೇಶವನ್ನು ನಿರ್ಬಂಧಿತ ಪ್ರದೇಶ (ಕಂಟೈನ್‌ಮೆಂಟ್‌ ಏರಿಯಾ) ಎಂದು ಘೋಷಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಆದೇಶ ಹೊರಡಿಸಿದ್ದಾರೆ.

Advertisement

ಕೇತುಮೊಟ್ಟೆ ಗ್ರಾಮದಲ್ಲಿ ಒಟ್ಟು 75 ಮನೆಗಳಲ್ಲಿ 304 ಮಂದಿ ವಾಸಿಸುತ್ತಿದ್ದಾರೆ. ಇವರ ಜತೆ ಕೊಂಡಂಗೇರಿ ಗ್ರಾಮದಲ್ಲಿರುವ 247 ಮನೆಗಳಲ್ಲಿ 1054 ಮಂದಿ ವಾಸಿಸುತ್ತಿದ್ದು, ಈ ಗ್ರಾಮ ವ್ಯಾಪ್ತಿಯ ಭೌಗೋಳಿಕ ಪ್ರದೇಶವನ್ನು ಬಫ‌ರ್‌ ಜೋನ್‌ ಎಂದು ಘೋಷಿಸಿದೆ.

ಈ ಪ್ರದೇಶದಲ್ಲಿ ವಾಸಿಸುತ್ತಿರುವವರು ಹೊರ ಪ್ರದೇಶಕ್ಕೆ ಹೋಗುವಂತಿಲ್ಲ ಮತ್ತು ಹೊರಗಿನವರು ಈ ಪ್ರದೇಶಕ್ಕೆ ಆಗಮಿಸುವಂತಿಲ್ಲ. ಈ ಪ್ರದೇಶದಲ್ಲಿ ಯಾವುದೇ ರೀತಿಯ ಕ್ರೀಡೆ, ಸಭೆ, ಸಮಾರಂಭ, ಮದುವೆ ಮುಂತಾದ ಜನ ಗುಂಪು ಸೇರುವಂತಹ ಎಲ್ಲಾ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ನಿಷೇಧಿಸಿದೆ.

ಕಾಲ್ನಡಿಗೆ, ವಾಹನ ಅಥವಾ ಇನ್ಯಾವುದೇ ರೀತಿಯಿಂದ ಈ ಪ್ರದೇಶದ ಒಳ ಪ್ರವೇಶ ಮತ್ತು ಹೊರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಿದೆ. ಈ ನಿಷೇಧಿತ ಪ್ರದೇಶದ ಎಲ್ಲ ಕಚೇರಿಗಳು, ಅಂಗಡಿ ಮಳಿಗೆ, ದಾಸ್ತಾನು ಕೇಂದ್ರ, ಎಲ್ಲ ಅವಶ್ಯ ಮತ್ತು ತುರ್ತು ಸೇವೆಗಳನ್ನು ನೀಡುವ ಮಳಿಗೆಗಳನ್ನು ಮುಚ್ಚುವುದು, ಯಾವುದೇ ಅಗತ್ಯ ವಸ್ತುಗಳ ಪೂರೈಕೆಯನ್ನು ಸಂಬಂಧಪಟ್ಟ ಇಲಾಖೆಗಳ ಮೂಲಕ ಕೈಗೊಳ್ಳುವುದು, ಇದನ್ನು ಹೊರತುಪಡಿಸಿ ಯಾವುದೇ ಖಾಸಗಿ ಮೂಲಗಳಿಂದ ನೀಡುವಂತಿಲ್ಲ. ಈ ಪ್ರದೇಶದಲ್ಲಿರುವ ಎಲ್ಲ ಮನೆಗಳಲ್ಲಿನ ಸದಸ್ಯರು ಅವರ ಮನೆ ಬಿಟ್ಟು ಹೊರಗಡೆ ತಿರುಗಾಡುವಂತಿಲ್ಲ ಮತ್ತು ಇತರರ ಮನೆಗಳಿಗೆ ಹೋಗುವಂತಿಲ್ಲ ಎಂದು ತಿಳಿಸಿದರು.

ನಿರ್ಬಂಧಿತ ಪ್ರದೇಶದಲ್ಲಿರುವ ಕುಟುಂಬಗಳಿಗೆ 14 ದಿನಗಳ ವರೆಗೆ ಆವಶ್ಯಕ ಆಹಾರ ಸಾಮಗ್ರಿ ಮತ್ತು ಇನ್ನಿತರ ವಸ್ತುಗಳನ್ನು ನೀಡಲು ಕ್ರಮ ವಹಿಸುವಂತೆ ಸೂಚಿಸಿದರು. ಈ ಗ್ರಾಮದಲ್ಲಿರುವ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆೆ ಬರೆಯುವ ವಿದ್ಯಾರ್ಥಿಗಳಿದ್ದರೆ ಅವರನ್ನು ಪರೀಕ್ಷಾ ಕೇಂದ್ರಗಳಿಗೆ ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

Advertisement

ಬಫ‌ರ್‌ ಜೋನ್‌ನಲ್ಲಿರುವ 247 ಮನೆಗಳ 1054 ಜನರ ಬಗ್ಗೆಯೂ ಸಹ ಪ್ರತಿ ನಿತ್ಯ ನಿಗಾವಹಿಸಿ ಸೋಂಕು ಲಕ್ಷಣಗಳು ಕಂಡುಬಂದ ಕೂಡಲೇ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ತಿಳಿಸಿದರು.

ಇಂದು ಉಸ್ತುವಾರಿ ಸಚಿವ ಸೋಮಣ್ಣ ಭೇಟಿ

ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಶನಿವಾರ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ಮಧ್ಯಾಹ್ನ 3.30 ಗಂಟೆಗೆ ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಭೇಟಿ ನೀಡಿ ಕೋವಿಡ್‌ 19 ಶಂಕಿತರಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಪರಿಶೀಲನೆ ಹಾಗೂ ಸಂಸ್ಥೆಯ ನಿರ್ದೇಶಕರೊಂದಿಗೆ ಚರ್ಚೆ ನಡೆಸಲಿದ್ದಾರೆ.

ಸಂಪರ್ಕ ನಿಗಾದಲ್ಲಿರುವವರ ಬಗ್ಗೆ ಗಮನಹರಿಸಿ
ವಿದೇಶದಿಂದ ಆಗಮಿಸಿ ಮನೆಗಳಲ್ಲಿಯೇ ಸಂಪರ್ಕ ತಡೆಯಲ್ಲಿರುವವರ (ಹೋಂ ಕ್ವೆರೆಂಟೈನ್‌) ಬಗ್ಗೆ ವಿಶೇಷ ಗಮನ ಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಹಲವು ಮಂದಿ ಮನೆಗಳಲ್ಲಿಯೇ ಸಂಪರ್ಕ ತಡೆಯಲ್ಲಿದ್ದು, ಇವರ ಚಲನವಲನಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ವಿಶೇಷ ಗಮನಹರಿ ಸಬೇಕು ಮತ್ತು ತಹಶೀಲ್ದಾರರು, ತಾ.ಪಂ.ಇಒಗಳು ಮತ್ತು ತಾಲೂಕು ವೈದ್ಯಾಧಿಕಾರಿಗಳು ಪ್ರತಿ ನಿತ್ಯ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಅವರು ನಿರ್ದೇಶನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next