ದೇಶದ ಎಲ್ಲ ಮತ ಧರ್ಮಗಳ ಜನರು ಒಗ್ಗಟ್ಟಿನಿಂದ ಬದುಕಲು ಇಷ್ಟಪಡುತ್ತಾರೆ ಮತ್ತು ಕಷ್ಟಕಾಲದಲ್ಲಿ ಒಬ್ಬರಿಗೊಬ್ಬರು ನೆರವಾಗುತ್ತಾರೆ.
ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬತೆಂಗೂ ಎಂಬಲ್ಲಿ ನಿನ್ನೆ ರಾತ್ರಿ ಉಗ್ರರ ತಂಡವೊಂದು ಅಮರನಾಥ ಯಾತ್ರಿಗಳ ಬಸ್ಸಿನ ಮೇಲೆ ದಾಳಿ ಮಾಡಿ ಏಳು ಮಂದಿಯನ್ನು ಕೊಂದಿರುವ ಘಟನೆ ದೇಶವ್ಯಾಪಿ ಕಂಪನವುಂಟು ಮಾಡಿದೆ. ಸಂಜೆ ಐದು ಗಂಟೆಗೆ ಅಮರನಾಥದಿಂದ ಹೊರಟ ಬಸ್ ರಾತ್ರಿ 8.20ರ ವೇಳೆಗೆ ಬಟೆಂಗೂ ತಲುಪಿದಾಗ ಉಗ್ರರು ದಾಳಿ ಮಾಡಿದ್ದಾರೆ. ಬಹಳ ವರ್ಷಗಳ ಬಳಿಕ ಅಮರನಾಥ ಯಾತ್ರಿಗಳ ಮೇಲಾಗಿರುವ ದಾಳಿಯಿದು. ಧಾರ್ಮಿಕ ಯಾತ್ರಾರ್ಥಿಗಳನ್ನು ಗುರಿಮಾಡಿಕೊಂಡು ನಡೆಸಿರುವ ದಾಳಿಯಲ್ಲಿ ಕಾಶ್ಮೀರ ಮಾತ್ರವಲ್ಲದೆ ಇಡೀ ದೇಶದಲ್ಲಿ ಕೋಮು ಹಿಂಸೆಯನ್ನು ಕೆರಳಿಸುವ ದುರುದ್ದೇಶ ಇದೆ. ಪಶ್ಚಿಮ ಬಂಗಾಲದ ಹಿಂಸಾಚಾರ, ಗೋ ರಕ್ಷಕರಿಂದ ಹತ್ಯೆ ಇತ್ಯಾದಿ ಘಟನೆಗಳಿಂದ ದೇಶ ಪ್ರಕ್ಷುಬ್ಧವಾಗಿದ್ದು, ಈ ಸಂದರ್ಭದಲ್ಲಿ ಧಾರ್ಮಿಕ ಯಾತ್ರಿಕರ ಮೇಲೆ ದಾಳಿ ಮಾಡಿದರೆ ದೇಶದಲ್ಲಿ ವ್ಯಾಪಕವಾಗಿ ಕೋಮುಗಲಭೆ ನಡೆಯಬಹುದು ಎನ್ನುವುದು ಉಗ್ರರ ಲೆಕ್ಕಾಚಾರ ಎನ್ನಲು ವಿಶೇಷ ಪಾಂಡಿತ್ಯದ ಅಗತ್ಯವಿಲ್ಲ. ಅಂತೆಯೇ ಯಾರು ಈ ಕೃತ್ಯದ ಹಿಂದೆ ಇದ್ದಾರೆ ಎನ್ನುವುದು ಕೂಡ ಬಹುತೇಕ ಎಲ್ಲರಿಗೂ ಗೊತ್ತಾಗಿದೆ. ಪಾಕಿಸ್ಥಾನದ ಕೃಪಾಶ್ರಯದಲ್ಲಿರುವ ಎಲ್‌ಇಟಿ ಉಗ್ರ ಸಂಘಟನೆಯ ಉಗ್ರರು ಕೃತ್ಯ ಎಸಗಿದ್ದಾರೆ ಮತ್ತು ಲಷ್ಕರ್ ಕಮಾಂಡರ್ ಇಸ್ಮಾಯಿಲ್ ಎಂಬಾತ ತಂಡದ ಮುಖಂಡನಾಗಿದ್ದ ಎನ್ನುವುದನ್ನು ಕಾಶ್ಮೀರದ ಪೊಲೀಸರು ಬಹಿರಂಗಪಡಿಸಿದ್ದಾರೆ.
ಭಾರೀ ಪ್ರಮಾಣದ ಸಾವುನೋವು ಗಳನ್ನು ಉಂಟು ಮಾಡುವುದು ಉಗ್ರರ ಹುನ್ನಾರವಾಗಿದ್ದರೂ ಬಸ್ಸಿನ ಚಾಲಕ ಸಲೀಮ್ ಶೇಕ್ ಸಮಯ ಪ್ರಜ್ಞೆಯಿಂದಾಗಿ ಸುಮಾರು 50 ಮಂದಿಯ ಜೀವ ಉಳಿದಿದೆ. ನಿಸ್ಸಂಶಯವಾಗಿ ನಿನ್ನೆ ಘಟನೆಯ ಹೀರೊ ಸಲೀಮ್ ಶೇಖ್. ಮುಸ್ಲಿಮ್ ಉಗ್ರರ ದಾಳಿಯಿಂದ ಹಿಂದು ಯಾತ್ರಿಕರನ್ನು ರಕ್ಷಿಸಿದ್ದು ಓರ್ವ ಮುಸ್ಲಿಂ ಚಾಲಕ ಎನ್ನುವುದು ಈ ಸಂದರ್ಭದಲ್ಲಿ ಬಹಳ ಮುಖ್ಯವಾಗುತ್ತದೆ. ಏಕೆಂದರೆ ಹಿಂಸಾಚಾರ ಬೇಕಾಗಿರುವುದು ಕೆಲವೇ ಮಂದಿಗೆ ತಮ್ಮ ಸ್ಥಾಪಿತ ಹಿತಾಸಕ್ತಿಗಳನ್ನು ಈಡೇರಿಸಲು ಮಾತ್ರ. ಉಳಿದಂತೆ ದೇಶದ ಎಲ್ಲ ಮತ ಧರ್ಮಗಳ ಜನರು ಒಗ್ಗಟ್ಟಿನಿಂದ ಬದುಕಲು ಇಷ್ಟಪಡುತ್ತಾರೆ ಮತ್ತು ಕಷ್ಟಕಾಲದಲ್ಲಿ ಒಬ್ಬರಿಗೊಬ್ಬರು ನೆರವಾಗುತ್ತಾರೆ. ಅವರನ್ನು ವಿಭಜಿಸುವುದು ಮತೀಯ ಭಾವನೆಯನ್ನು ಕೆರಳಿಸುವ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳಲೆತ್ನಿಸುವ ಕೆಲವು ಧೂರ್ತ ರಾಜಕೀಯ ಮತ್ತು ಧಾರ್ಮಿಕ ಮುಖಂಡರು. 17 ವರ್ಷಗಳ ಬಳಿಕ ಅಮರನಾಥ ಯಾತ್ರಿಗಳ ಮೇಲೆ ನಡೆದಿರುವ ದೊಡ್ಡ ಪ್ರಮಾಣದ ದಾಳಿಯಿದು. ಪ್ರತಿ ವರ್ಷ ಸರಕಾರ ಅಮರನಾಥ ಯಾತ್ರೆಗೆ ಭಾರೀ ಭದ್ರತಾ ವ್ಯವಸ್ಥೆಯ ಏರ್ಪಾಡು ಮಾಡುತ್ತಿದೆ. ಇಷ್ಟೆಲ್ಲ ಭದ್ರತೆಯಿದ್ದರೂ ಈ ಸಲ ಉಗ್ರರ ದಾಳಿಯಾಗಿರುವುದು ಹಲವು ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ. ಯಾತ್ರೆಯ ಮೇಲೆ ದಾಳಿ ಮಾಡಲು ಉಗ್ರರು ಸಜ್ಜಾಗಿದ್ದಾರೆ ಎಂಬ ಮಾಹಿತಿಯನ್ನು ಕಾಶ್ಮೀರ ಪೊಲೀಸರು ಎರಡು ವಾರಗಳ ಹಿಂದೆಯೇ ಕೇಂದ್ರ ಸರಕಾರಕ್ಕೆ ನೀಡಿದ್ದರು. ಹಾಗಿದ್ದರೂ ಭದ್ರತಾ ಲೋಪ ಆಗಿರುವುದು ಏಕೆ ಎನ್ನುವುದನ್ನು ತಿಳಿಸುವ ಜವಾಬ್ದಾರಿ ಸರಕಾರಕ್ಕಿದೆ. ಯಾತ್ರೆ ನಡೆಸಲು ಪ್ರತ್ಯೇಕವಾದ ಮಂಡಳಿಯೊಂದಿದೆ. ಯಾತ್ರಾರ್ಥಿಗಳನ್ನು ಕರೆದೊಯ್ಯುವ ವಾಹನಗಳು ಈ ಮಂಡಳಿಯಲ್ಲಿ ನೋಂದಣಿಯಾಗಿರಬೇಕು. ಆದರೆ ನಿನ್ನೆ ದಾಳಿಗೊಳಗಾದ ಬಸ್ ಮಂಡಳಿಯಲ್ಲಿ ನೋಂದಣಿಯಾಗಿರಲಿಲ್ಲ ಎನ್ನುವ ಮಾಹಿತಿಯಿದೆ. ನೋಂದಣಿಯಾಗಿರದ ಬಸ್ಸೊಂದು ಬಂದೋಬಸ್ತಿನ ನಡುವೆ ಅಮರನಾಥ ತಲುಪಿದ್ದು ಹೇಗೆ? ಸೂರ್ಯಾಸ್ತದ ಬಳಿಕ ಯಾತ್ರಾಥಿಗಳ ಪ್ರಯಾಣಕೆ ನಿರ್ಬಂಧವಿದ್ದರೂ ಬಸ್ ಹೋಗಲು ಬಿಟ್ಟದ್ದು ಹೇಗೆ? ಅಡಿಗಡಿಗೂ ತಪಾಸಣೆ ನಡೆಯುತ್ತಿದ್ದರೂ ಈ ಬಸ್ ಸುಮಾರು ಮೂರು ತಾಸು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾರ ಕಣ್ಣಿಗೂ ಬೀಳಲಿಲ್ಲವೆ? ಏನೇ ಆದರೂ ಈ ದಾಳಿಯಿಂದ ದೇಶ ಎದೆಗುಂದಿಲ್ಲ. ಯಾತ್ರೆ ಎಂದಿನಂತೆಯೇ ಮುಂದುವರಿದಿದೆ ಮತ್ತು ಎಲ್ಲೂ ಹಿಂಸಾಚಾರ ನಡೆದಿಲ್ಲ. ಅಷ್ಟರಮಟ್ಟಿಗೆ ಉಗ್ರರ ಮತ್ತು ಅವರಿಗೆ ಕುಮ್ಮಕ್ಕು ನೀಡುತ್ತಿರುವವರ ಉದ್ದೇಶವನ್ನು ವಿಫಲಗೊಳಿಸುವಲ್ಲಿ ದೇಶ ಸಫಲವಾಗಿದೆ ಎನ್ನುವುದಷ್ಟೇ ಸಮಾಧಾನ ಕೊಡುವ ವಿಷಯ.