Advertisement

ಕೋಮು ಹಿಂಸೆ ಆಧರಿತ ರಾಜಕಾರಣ ನಿರ್ಮೂಲನೆ: ಯೆಚೂರಿ

12:28 PM Jan 03, 2018 | Team Udayavani |

ಮೂಡಬಿದಿರೆ: ಕೋಮು ಪ್ರಚೋದಿತ ಹಿಂಸೆಯ ಆಧಾರದಲ್ಲಿ ರಾಜಕಾರಣ ನಡೆಸುವುದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಆರೆಸ್ಸೆಸ್‌ ಪ್ರೇರಿತ ಬಿಜೆಪಿ ಈ ದೇಶವನ್ನು ಕೋಮು ಆಧಾರದಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಆಪಾದಿಸಿದರು.

Advertisement

ಮೂಡಬಿದಿರೆಯಲ್ಲಿ ಮಂಗಳವಾರದಿಂದ 4 ದಿನ ನಡೆಯಲಿ ರುವ ಸಿಪಿಐನ 22ನೇ ರಾಜ್ಯ ಸಮ್ಮೇಳನಕ್ಕೆ ಮುನ್ನ ಸ್ವರಾಜ್ಯ ಮೈದಾನದಲ್ಲಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಮಗಿಂದು ಬೇಕಾಗಿರುವುದು ಶಾಂತಿ, ಸ್ಥಿರತೆ, ಏಕತೆ. ಕೆಂಬಾವುಟ ಹಿಡಿದ ಸಿಪಿಐ ಈ ದೇಶವನ್ನು ಯಾರೂ ಒಡೆದು ಆಳಲು ಬಿಡುವುದಿಲ್ಲ ಎಂದು ಘೋಷಿಸಿದರು. ಬಿಜೆಪಿಯು ಬಂಡವಾಳಶಾಹಿಗಳು ಮತ್ತು ಪಕ್ಷದ ಸಚಿವರು ಹಾಗೂ ಸಂಬಂಧಿಕರ ಹೆಸರು ಅಂಟಿಕೊಂಡಿರುವ ಅದೆಷ್ಟೋ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆಗೆ ಒಳಪಡಿಸಿಲ್ಲ. ದೇಶದ ಸಂಪನ್ಮೂಲಗಳನ್ನು ಸೂರೆಗೊಳ್ಳುವ ಮಂದಿಯನ್ನು ತನಿಖೆಗೆ ಒಳಪಡಿಸಬೇಕಾಗಿದೆ ಎಂದು ಯೆಚೂರಿ ಆಗ್ರಹಿಸಿದರು.

ಕಾರ್ಯದರ್ಶಿ ಮಂಡಳಿ ಸದಸ್ಯ ಜೆ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜಿ.ವಿ. ರಾಮರೆಡ್ಡಿ, ಜಿ.ಎನ್‌. ನಾಗರಾಜ್‌, ನಿತ್ಯಾನಂದ ಸ್ವಾಮಿ, ಕೆ. ಶಂಕರ್‌, ಸಿಐಟಿಯು ರಾಜ್ಯಾಧ್ಯಕ್ಷ ಎಸ್‌. ವರಲಕ್ಷ್ಮೀ, ಯು. ಬಸವರಾಜ್‌, ವಸಂತ ಆಚಾರಿ, ಮೀನಾಕ್ಷಿ ಸುಂದರಂ, ಕೆ.ಎನ್‌. ಉಮೇಶ್‌, ಮುನಿವೆಂಕಟಪ್ಪ, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಆರ್‌. ಶ್ರೀಯಾನ್‌, ಪ್ರ. ಕಾರ್ಯದರ್ಶಿ ಕೆ. ಯಾದವ ಶೆಟ್ಟಿ, ಉಪಾಧ್ಯಕ್ಷೆ, ಪುರಸಭಾ ಸದಸ್ಯೆ ರಮಣಿ ವೇದಿಕೆಯಲ್ಲಿದ್ದರು. ಮೂರು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಅಧ್ಯಕ್ಷರ ಆಂಗ್ಲ ಭಾಷಣವನ್ನು ಕೆ. ಎನ್‌. ಉಮೇಶ್‌ ಕನ್ನಡಕ್ಕೆ ಭಾಷಾಂತರಿಸಿದರು. ಕೆ. ಯಾದವ ಶೆಟ್ಟಿ ಸ್ವಾಗತಿಸಿ, ಮುನೀರ್‌ ಕಾಟಿಪಳ್ಳ ನಿರೂಪಿಸಿದರು.

ನೂತನ ರಾಮಾಶ್ವಮೇಧ
ರಾಮಾಶ್ವಮೇಧದಲ್ಲಿ ಶ್ರೀರಾಮ ಶ್ವೇತವರ್ಣದ ಅಶ್ವಗಳನ್ನು ಕಳುಹಿಸಿ ಲೋಕದ ರಾಜರಿಗೆ ಸವಾಲು ಒಡ್ಡಿದಾಗ ಆ ಸವಾಲನ್ನು ಇದಿರಿಸಿದವರು ರಾಮನ ಪುತ್ರರಾದ ಕುಶ ಲವರು. ಈಗ ಚುನಾವಣೆಯ ಮೇಲೆ ಚುನಾ ವಣೆಯನ್ನು ಗೆಲ್ಲುತ್ತಿರುವ ಮೋದಿ-ಅಮಿತ್‌ ಷಾ ಜೋಡಿ ಬಿಜೆಪಿ-ಆರೆಸ್ಸೆಸ್‌ ಅಶ್ವಮೇಧದ ಮೂಲಕ ದೇಶವನ್ನು ನಾಶ ಮಾಡಲು ಹೊರಟಿದ್ದಾರೆ. ಇವರನ್ನು ಕೆಂಬಾವುಟದ ಕತ್ತಿ ಮತ್ತು ಸುತ್ತಿಗೆಗಳೆಂಬ ಕುಶ ಲವರ ಮೂಲಕ ಇದಿರಿಸಲು ಸನ್ನದ್ಧರಾಗಿದ್ದೇವೆ ಎಂದು ಯೆಚೂರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next