Advertisement
ಮಂತ್ರಾಲಯದಲ್ಲಿ ಗುರುವಾರ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಉತ್ತರಾರಾಧನೆ ಮಹೋತ್ಸವ ನಿಮಿತ್ತ ಶ್ರೀ ಪ್ರಹ್ಲಾದರಾಜರ ಮಹಾರಥೋತ್ಸವಕ್ಕೆ ಚಾಲನೆ ನೀಡಿ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ದೇಶದಲ್ಲಿ ಶಾಂತಿ ನೆಲೆಸಲಿ. ಮತೀಯ ಗಲಭೆಗಳು ನಿಲ್ಲಲಿ. ಭಕ್ತರ ಕಷ್ಟ ನೀಗಿಸುವ ಶ್ರೀ ಗುರುರಾಯರ ವರ್ಣನೆ ಅಸಾಧ್ಯ. ಗುರುರಾಯರ ಭಕ್ತರು ದೇಶ-ವಿದೇಶಗಳ ಮೂಲೆ-ಮೂಲೆಗಳಿಂದ ಆರಾಧನೆಗೆ ಆಗಮಿಸುತ್ತಾರೆ. ದೇಶ ಸೇರಿದಂತೆ ವಿಶ್ವದಲ್ಲಿ ಶಾಂತಿ-ನೆಮ್ಮದಿ ಲಭಿಸಲಿ ಎಂದು ರಾಯರಲ್ಲಿ ಪ್ರಾರ್ಥಿಸಲಾಗುವುದು ಎಂದರು.
ಮಹಾರಥೋತ್ಸವಕ್ಕೆ ಹೆಲಿಕಾಪ್ಟರ್ ಮೂಲಕ ಶ್ರೀಗಳು ಪುಷ್ಟವೃಷ್ಟಿ ಮಾಡಿದರು. ಬೃಂದಾವನ ಸುತ್ತಲಿನ ಶಿಲಾಮಂಟಪಕ್ಕೆ ಅಳವಡಿಸುತ್ತಿರುವ ಸ್ವರ್ಣ ಕವಚವನ್ನು ಶ್ರೀಮಠದ ಪೀಠಾಧಿ ಪತಿ ಸುಬುಧೇಂದ್ರ ತೀರ್ಥರು ಹಾಗೂ ಮೈಸೂರು ರಾಜ ಮನೆತನದ ಯದುವೀರ ಒಡೆಯರ್ ಜಂಟಿಯಾಗಿ ಲೋಕಾರ್ಪಣೆ ಮಾಡಿದರು. ಬಳಿಕ ಪ್ರಹ್ಲಾದರಾಜರ ಗಜವಾಹನೋತ್ಸವದಲ್ಲಿ ಪಾಲ್ಗೊಂಡ ಯದುವೀರ್ ಚಾಮರ ಸೇವೆ ಮಾಡಿದರು.
Related Articles
ನಿಜವಾದ ಭಕ್ತಿ ನೋಡಬೇಕಿದ್ದರೆ ಮೈಸೂರು ದಸರಾ ನೋಡಬೇಕು ಎನ್ನುವ ಮಾತಿದೆ. ಮಂತ್ರಾಲಯದ ವೈಭವ ಕಂಡಾಗ ಆ ಮಾತನ್ನು ಸ್ವಲ್ಪ ಬದಲಿಸಿ ಮೈಸೂರು ದಸರಾ ಇಲ್ಲವೇ ರಾಯರ ಆರಾಧನೆ ನೋಡಬೇಕು ಎನ್ನಬೇಕಿದೆ ಎಂದು ಮೈಸೂರು ರಾಜ ಮನೆತನದ ಯದುವೀರ ಒಡೆಯರ್ ಬಣ್ಣಿಸಿದರು.
Advertisement
ರಾಯರ 353ನೇ ಆರಾಧನಾ ಮಹೋತ್ಸವ ಪ್ರಯುಕ್ತ ಗುರುವಾರ ನಡೆದ ಉತ್ತಾರಾರಾಧನೆಯಂದು ಶ್ರೀಮಠದಿಂದ ಶ್ರೀ ರಾಘವೇಂದ್ರಾನುಗ್ರಹ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಮಠಕ್ಕೆ ಇದು ನನ್ನ ಮೊದಲ ಭೇಟಿ. ಇಂಥ ಅವಕಾಶ ಸಿಕ್ಕಿರುವುದು ದೊಡ್ಡ ಸೌಭಾಗ್ಯ ಎಂದು ಭಾವಿಸುತ್ತಿದ್ದೇವೆ. ಎಷ್ಟೋ ದಾಳಿಗಳು ನಿರಂತರವಾಗಿ ನಡೆದಾಗ್ಯೂ ನಮ್ಮ ಭಾರತದ ಪರಂಪರೆಗೆ ಕಿಂಚಿತ್ತೂ ಧಕ್ಕೆಯಾಗಿಲ್ಲ. ಇಂಥ ಪರಂಪರೆಯನ್ನು ಇದೇ ರೀತಿ ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.