ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 4 ವರ್ಷಗಳಲ್ಲಿ ವಿವಿಧ ಇಲಾಖೆ ಮತ್ತು ಯೋಜನೆಗಳಡಿ ಮಾಡಲಾದ ಕಾಮಗಾರಿಗಳ ಬಗ್ಗೆ ಜನತೆಗೆ ವರದಿ ಒಪ್ಪಿಸಬೇಕು. ಇನ್ನಷ್ಟು ಕಾಮಗಾರಿಗಳು ನಡೆಯಬೇಕಿದ್ದರೆ ಜನರಿಂದಲೇ ನೇರವಾಗಿ ತಿಳಿದುಕೊಂಡು ಅದನ್ನು ಮಾಡಿಸಿಕೊಡಬೇಕೆಂಬ ನೆಲೆಯಲ್ಲಿ ವಿನೂತನ ಕಾರ್ಯಕ್ರಮವಾಗಿ ಈ ಜನಸಂಪರ್ಕ ಸಭೆ ಆಯೋಜಿಸಲಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಕರಂಬಳ್ಳಿ ನೇಕಾರರ ಕಾಲನಿಯ (ಡಾ| ಎ.ವಿ. ಬಾಳಿಗ ಆಸ್ಪತ್ರೆಯ ಹತ್ತಿರ) ಅಂಗನವಾಡಿ ಬಳಿ ಬಯಲು ರಂಗ ಮಂಟಪದಲ್ಲಿ ಶನಿವಾರ ನಡೆದ ಉಡುಪಿ ನಗರಸಭೆ ವ್ಯಾಪ್ತಿಯ ಕರಂಬಳ್ಳಿ ವಾರ್ಡ್ ಮಟ್ಟದ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆಯ 1,769 ಕೋ. ರೂ. ಅಭಿವೃದ್ಧಿ ಕೆಲಸಗಳ ಪರಾಮರ್ಶೆಗಾಗಿ “ಗ್ರಾಮದೆಡೆ ವಿಶ್ವಾಸದ ನಡೆ’ ಎನ್ನುವ ವಿಶಿಷ್ಟ ಕಾರ್ಯಕ್ರಮದ ಮೂಲಕ ಜನರ ಕಷ್ಟ ಮತ್ತು ಬೇಡಿಕೆಗಳಿಗೆ ಸ್ಪಂದಿಸಲಾಗುತ್ತಿದೆ. ಜನರಿಂದ ಬಂದ ಬೇಡಿಕೆಗಳಿಗೆ ಸ್ಪಂದಿಸಿ ಸರಕಾರದಿಂದ ಅನುದಾನ ಬಂದಾಗ ಹಂತ ಹಂತವಾಗಿ ವಿವಿಧ ಕಾಮಗಾರಿಗಳನ್ನು ಮಾಡಿಸಿ ಕೊಡಲಾಗುವುದು. 800 ರೂ. ಮಿತಿಯೊಳಗಿನ ವಿದ್ಯುತ್ ಬಿಲ್ ಪಾವತಿಸುವವರು ಬಿಪಿಎಲ್ ಕಾರ್ಡ್ ಪಡೆದು ಸರಕಾರದಿಂದ ಸಿಗುವ ಹಲವು ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಸವಲತ್ತು ವಿತರಣೆ
ಇದೇ ಸಂದರ್ಭ ಸಚಿವರು ಅರ್ಹಫಲಾನುಭವಿಗಳಿಗೆ ವಿವಿಧ ಪಿಂಚಣಿ, ಸವಲತ್ತುಗಳಾದ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಅಂಗ ವಿಕಲವೇತನ, ಪ್ರೋತ್ಸಾಹಧನ ವಿತರಿಸಿದರು.
ಗ್ರಾಮಸ್ಥರಿಂದ ಅಹವಾಲು ಅರ್ಜಿಗಳನ್ನು ಸ್ವೀಕರಿಸಿದ ಸಚಿವರು ಬಹುತೇಕ ಅರ್ಜಿಗಳಿಗೆ ವಿವಿಧ ಇಲಾಖಾಧಿಕಾರಿ ಗಳ ಮುಖಾಂತರ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಕರಂಬಳ್ಳಿ ವಾರ್ಡ್ ಸದಸ್ಯೆ ಸೆಲಿನಾ ಕರ್ಕಡ, ಮಾಜಿ ಮಂಡಲ ಪ್ರಧಾನ ಗೋಪಾಲ ಶೆಟ್ಟಿ, ನಗರಸಭೆ ಸದಸ್ಯರಾದ ಸತೀಶ್ ಪುತ್ರನ್, ಆರ್.ಕೆ. ರಮೇಶ್, ರಮೇಶ್ ಕಾಂಚನ್, ಜನಾರ್ದನ್ ಭಂಡಾರ್ಕರ್, ಗಣೇಶ್‌ನೇರ್ಗಿ, ಸರ್ಕಲ್ ಇನ್ಸ್‌ಪೆಕ್ಟರ್ ಸುದರ್ಶನ್, ಬ್ರಹ್ಮಾವರ ತಹಶೀ ಲ್ದಾರ್ ಪ್ರದೀಪ್ ಕುರುಡೇಕರ್ ಮೊದಲಾದವರು ಉಪಸ್ಥಿತರಿದ್ದರು.ನಗರಸಭೆ ಪೌರಾಯುಕ್ತ ಡಿ. ಮಂಜುನಾಥಯ್ಯ ಪ್ರಸ್ತಾವನೆಗೈದು ವಂದಿಸಿದರು. ಸುಧಾಕರ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.
ವಿಶೇಷ ಅನುದಾನಕ್ಕೆ ಬೇಡಿಕೆ
ಸಚಿವನಾಗುವ ಮೊದಲು ಆಶ್ವಾಸನೆ ಕೊಟ್ಟಂತೆ ಈಗಾಗಲೇ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆಯ ಕಾಮಗಾರಿ ಮಾಡಲಾಗಿದೆ. ಉಡುಪಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ಜನರ ಪರವಾಗಿ ಮುಖ್ಯಮಂತ್ರಿ, ಇತರ ಸಚಿವರು ಹಾಗೂ ಅಧಿಕಾರಿಗಳಲ್ಲಿ ಭಿಕ್ಷುಕನಂತೆ ಅನುದಾನ ಕೇಳಿ ತಂದಿದ್ದೇನೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗಾಗಿ ಮುಖ್ಯಮಂತ್ರಿ ಅವರಲ್ಲಿ ವಿಶೇಷ ಅನುದಾನಕ್ಕಾಗಿ ಈಗಾಗಲೇ ಬೇಡಿಕೆ ಸಲ್ಲಿಸಿದ್ದೇನೆ. ಒಟ್ಟಾರೆ ಉಡುಪಿ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇನೆ. ಜನರ ಆಶೀರ್ವಾದದಿಂದ ಸಚಿವನಾದ ನನಗೆ ಜನರ ಇನ್ನೂ ಹೆಚ್ಚಿನ ಚಾಕರಿ ಮಾಡಲು ಸಿದ್ಧನಿದ್ದೇನೆ ಎಂದು ಸಚಿವರು ಭರವಸೆ ನೀಡಿದರು.