ಗಂಗಾವತಿ: ಹಿಂದೂ ಧರ್ಮದವರಲ್ಲದವರಿಗೆ ಕಿಷ್ಕಿಂಧಾ ಅಂಜನಾದ್ರಿಯಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸದಂತೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ತಾಲೂಕು, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ಮೂಲಕ ಕೋಮು ದ್ವೇಷ ಹರಡಿ ರಾಜಕೀಯ ಲಾಭ ಪಡೆಯಲು ಹುನ್ನಾರು ನಡೆಸಿದ್ದು ಖಂಡನೀಯವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕೋಮು ದ್ವೇಷ ಹರಡುವವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಿಪಿಐಎಂ ಹಾಗೂ ಪ್ರಗತಿಪರ ಸಂಘಟನೆ, ಕೋಮು ಸೌಹಾರ್ದ ವೇದಿಕೆಯ ಕಾರ್ಯಕರ್ತರು ತಹಶೀಲ್ದಾರ್ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಮಾತನಾಡಿ, ಜಾಗರಣ ವೇದಿಕೆಯ ಅತಿರೇಕದ ವರ್ತನೆ ಪ್ರಜಾಪ್ರಭುತ್ವಕ್ಕೆ ವಿರೋಧಿಯಾಗಿದೆ. ನವೆಂಬರ್ 26 ರಂದು ಸಂವಿಧಾನ ಸಮರ್ಪಣಾ ದಿನವನ್ನು ದೇಶಾದ್ಯಂತ ಆಚರಿಸುತ್ತೇವೆ. ಆದರೆ ದೇಶದ ಬಹುತ್ವ ಸಂಸ್ಕೃತಿಗೆ ಕೂಡಿ ಬಾಳುವ ಪರಂಪರೆಗೆ ಧಕ್ಕೆ ತರುವ ರೀತಿಯಲ್ಲಿ ಹಿಂದುತ್ವವಾದಿಗಳು ಅತಿರೇಕ ವರ್ತನೆಯ ಸಂಘಟನೆಗಳು ಖಂಡನೀಯವಾಗಿದೆ ಎಂದರು.
ಈ ಹಿಂದೆಯೂ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಹೀಗೆ ಅತಿರೇಕದ ವರ್ತನೆಗಳನ್ನು ಹಿಂದುತ್ವವಾದಿ ಸಂಘಟನೆಗಳು ಮಾಡಿರುವುದು ತಮ್ಮ ಗಮನದಲ್ಲಿದೆ ಎಂದು ಭಾವಿಸುತ್ತೇವೆ. ಅದೇ ರೀತಿ ಗಂಗಾವತಿ ತಾಲೂಕಿನ ಅಂಜಿನಾದ್ರಿ ಬೆಟ್ಟ ಸಹಬಾಳ್ವೆಗೆ ಹೆಸರಾಗಿದ್ದು, ಅದಕ್ಕೆ ಮಸಿ ಬಳಿಯುವ ಕೆಲಸವನ್ನು ಯಾರೇ ಮಾಡಿದರೂ ಅದನ್ನು ದುಷ್ಕೃತ್ಯ ಎಂದು ಪರಿಗಣಿಸಿ ನೆಲದ ಕಾನೂನು ಅಡಿಯಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲೆ ವಿಸರ್ಜನೆಯ ಸಂದರ್ಭದಲ್ಲಿ ಕೆಲ ಸಂಘಟನೆಗಳು ಕೋಮು ಗಲಭೆಯನ್ನು ಸೃಷ್ಟಿಸಲು ಉನ್ನಾರ ನಡೆಸಿದ್ದು, ಅದಕ್ಕೆ ಜಿಲ್ಲಾಡಳಿತ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಲ್ಲಾ ಕೋಮಿನ ಎಲ್ಲಾ ಜನಾಂಗದವರಿಗೆ ಸಮಾನ ಅವಕಾಶ ಸಮಾನ ಆದ್ಯತೆ ಸಿಗುವಂತೆ ತಾವು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಮುಖಂಡ ಮುತ್ತಣ್ಣ ಸಿಡಬ್ಲ್ಯೂಎಫ್ಐ, ಅಧ್ಯಕ್ಷರು ಮಂಜುನಾಥ್ ಡಗ್ಗಿ, ಸಿಐಟಿಯು ತಾಲೂಕು ಕಾರ್ಯದರ್ಶಿ ಶಿವಕುಮಾರ್, ಎಸ್ಎಫ್ಐ ತಾಲೂಕು ಕಾರ್ಯದರ್ಶಿ ರವಿ ಅಕ್ಕಿ ರೊಟ್ಟಿ, ಎ. ರಮೇಶ್ ಬೂದಗುಂಪ, ಶಂಕರ್ ದರ್ಶನ್, ಹುಸೇನಪ್ಪ, ಈಶಕುಮಾರ ಮತ್ತಿತರರಿದ್ದರು.