ಜಮ್ಮು : ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿ ದೋಡಾದ ಕುರ್ಸಾರಿ ಎಂಬಲ್ಲಿ ಪುರಾತನ ಶಿವ ದೇವಾಲಯಕ್ಕೆ ಬೃಹತ್ ವಿಗ್ರಹಗಳನ್ನು ಸಾಗಿಸಲು ಮುಸ್ಲಿಮರು ಕೈ ಜೋಡಿಸಿದ್ದಾರೆ.
500 ರಿಂದ 700 ಕೆಜಿ ತೂಕದ ಗ್ರಾನೈಟ್ ನಿಂದ ಮಾಡಲಾಗಿದ್ದ 6 ವಿಗ್ರಹಗಳನ್ನು ರಾಜಸ್ಥಾನದಿಂದ ತರಿಸಲಾಗಿತ್ತು. ಭದೇರ್ವಾ-ದೋಡಾ ಹೆದ್ದಾರಿಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಗುಡ್ಡದ ಮೇಲಿರುವ ದೇವಾಲಯಕ್ಕೆ ಒಯ್ಯಬೇಕಾಗಿತ್ತು. ಸರಿಯಾದ ರಸ್ತೆ ಇಲ್ಲದೇ ಇದ್ದುದು ಬೃಹತ್ ಮೂರ್ತಿಗಳನ್ನು ಸಾಗಿಸುವುದು ದೇವಾಲಯದ ಸಮಿತಿಗೆ ಸವಾಲಾಗಿತ್ತು. ಈ ವೇಳೆ ಕುರ್ಸಾರಿ ಪಂಚಾಯತ್ ನ ಸರ್ ಪಂಚ್ ಸಾಜಿದ್ ಮಿರ್ ಅವರು 4.6 ಲಕ್ಷ ರೂ. ಅನುದಾನವನ್ನು ತುರ್ತಾಗಿ ರಸ್ತೆಗಾಗಿ ಮಂಜೂರು ಮಾಡಿಸಿದ್ದಾರೆ, ಮಾತ್ರವಲ್ಲದೆ ತನ್ನ ಸಮುದಾಯದ 150 ಮಂದಿಯಿಂದ ಕರಸೇವೆ ಯನ್ನು ಮಾಡಿಸಿದ್ದಾರೆ.
”ಇದು ನಮ್ಮ ಸಂಸ್ಕೃತಿ, ಇದು ನಮ್ಮ ಪರಂಪರೆ ಹಿಂದಿನಿಂದ ಬಂದದ್ದು ನಾವೆಲ್ಲ ಒಂದಾಗಿಯೇ ಇದ್ದೇವೆ ಎನ್ನುವುದನ್ನು ತೋರಿಸಬೇಕು. ಅದಕ್ಕಾಗಿಯೇ ನಮ್ಮನ್ನು ಧರ್ಮದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುವವರ ನೀಚ ತಂತ್ರಗಳಿಗೆ ನಾವು ಎಂದಿಗೂ ಬಲಿಯಾಗಲಿಲ್ಲ” ಎಂದು ಸಾಜಿದ್ ಮಿರ್ ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾರೆ.
”ನಮಗೆ ಶಕ್ತಿ ನೀಡಿದ ನಮ್ಮ ನೆರೆಹೊರೆಯವರ ಪ್ರೀತಿ ಮತ್ತು ವಾತ್ಸಲ್ಯವನ್ನು ನೋಡುವುದು ಹೃದಯಸ್ಪರ್ಶಿಯಾಗಿದೆ. ವಿಗ್ರಹಗಳನ್ನು ಸಾಗಿಸಲು ನಾವು ನಾಲ್ಕು ದಿನ ಶ್ರಮಿಸಿದ್ದೇವೆ, ಒಂದು ಹಂತದಲ್ಲಿ ಅದು ಅಸಾಧ್ಯವಾದ ಕೆಲಸವಾಗಿತ್ತು” ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ರವೀಂದರ್ ಪರ್ದೀಪ್ ಹೇಳಿದರು.
ನಾಲ್ಕು ದಿನಗಳಲ್ಲಿ, ಎರಡೂ ಸಮುದಾಯಗಳ ಸ್ವಯಂಸೇವಕರು ಯಂತ್ರಗಳು ಮತ್ತು ಹಗ್ಗಗಳನ್ನು ಬಳಸಿ ವಿಗ್ರಹಗಳನ್ನು ದೇವಸ್ಥಾನಕ್ಕೆ ಕೊಂಡೊಯ್ಯಲು ಯಶಸ್ವಿಯಾದರು, ಅಲ್ಲಿ ಅವುಗಳನ್ನು ಆಗಸ್ಟ್ 9 ರಂದು ಧಾರ್ಮಿಕ ಸಮಾರಂಭದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ.