Advertisement

ಕ್ಷುಲ್ಲಕ ಕಿಡಿಗೇಡಿ ಕೃತ್ಯಗಳಿಗೆ ಕೋಮು ಬಣ್ಣ!

12:02 PM Sep 08, 2019 | Suhan S |

ಕೋಲಾರ: ಕಿಡಿಗೇಡಿಗಳ ಕ್ಷುಲ್ಲಕ ಕಾರಣಗಳಿಗೆ ಕೋಮು ಬಣ್ಣ ಬಳಿದು ಕೋಲಾರ ನಗರದ ಶಾಂತಿ ಸೌಹಾರ್ದತೆ ಕದಡುವ ವ್ಯವಸ್ಥಿತ ಷಡ್ಯಂತ್ರ ಪ್ರಕರಣಗಳು ನಾಗರಿಕರ ಆತಂಕಕ್ಕೆ ಕಾರಣವಾಗುತ್ತಿದೆ.

Advertisement

ನಗರ ತೊಂಬತ್ತರ ದಶಕದಲ್ಲಿ ಕಂಡಂತೆ ಈ ಘಟನಾವಳಿಗಳು ಅತಿರೇಕ ತಲುಪಿ, ಕರ್ಫ್ಯೂ ವಿಧಿಸುವ ಅಪಾಯದ ಮಟ್ಟಕ್ಕೆ ತಲುಪಿಬಿಡುತ್ತದೆಯೇ ಎಂಬುದು ನಗರದ ಶಾಂತಿಪ್ರಿಯ ಸಾರ್ವಜನಿಕರನ್ನು ಭಯಭೀತಗೊಳಿಸುತ್ತಿದೆ.

ಕರ್ಫ್ಯೂ ಕೋಲಾರ: ಹಿಂದೊಮ್ಮೆ ಕೋಲಾರ ಕೋಮು ಗಲಭೆಗಳಿಗೆ ಹೆಸರುವಾಸಿಯಾಗಿತ್ತು. ತೊಂಬತ್ತರ ದಶಕಗಳಲ್ಲಿ ನಡೆದ ಸತತ ಕೋಮು ಗಲಭೆಗಳು ಕೋಲಾರದಲ್ಲಿ ತಿಂಗಳುಗಟ್ಟಲೇ ಕರ್ಫ್ಯೂ ವಿಧಿಸುವ ಮಟ್ಟಿಗೆ ಹರಡಿತ್ತು. ಕಾಶ್ಮೀರ ಹೊರತುಪಡಿಸಿದರೆ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ತಿಂಗಳುಗಳ ಕಾಲ ಕರ್ಫ್ಯೂ ವಿಧಿಸಿಕೊಂಡಿದ್ದ ಕೋಲಾರದ ಅಭಿವೃದ್ಧಿ ಕೋಮು ಗಲಭೆಗಳ ಕಾರಣಕ್ಕಾಗಿಯೇ ಇಪ್ಪತ್ತು ಮೂವತ್ತು ವರ್ಷಗಳಷ್ಟು ಹಿಂದಕ್ಕೆ ಸರಿಯುವಂತಾಗಿತ್ತು.

ಭಯದ ವಾತಾವರಣ: ತೊಂಬತ್ತರ ದಶಕದಲ್ಲಿ ನಡೆದ ಕೋಮು ಗಲಭೆಗಳ ಭೀತಿ ಎಷ್ಟರ ಮಟ್ಟಿಗೆ ಇತ್ತೆಂದರೆ, ಯಾರಾದರು ಯಾವುದೋ ಕಾರಣಕ್ಕೆ ಬಿರುಸಾಗಿ ಕೂಗುತ್ತಾ ಪೇಟೆ ಬೀದಿಯಲ್ಲಿ ಓಡಿ ಹೋದರೂ ಕ್ಷಣ ಮಾತ್ರದಲ್ಲಿ ಕೋಲಾರದಲ್ಲಿ ಅಘೋಷಿತ ಬಂದ್‌ನ ವಾತಾವರಣ ಸೃಷ್ಟಿಯಾಗಿಬಿಡುತ್ತಿತ್ತು. ಅಂಗಡಿ ಮುಂಗಟ್ಟುಗಳು ಕೆಲವೇ ಕ್ಷಣಗಳಲ್ಲಿ ಬಂದ್‌ ಆಗಿಬಿಡುತ್ತಿದ್ದವು. ಜನಜಂಗುಳಿ ಮಾಯವಾಗಿಬಿಡುತ್ತಿತ್ತು. ರಾತ್ರಿ ಎಂಟರ ಹೊತ್ತಿಗೆ ಕೋಲಾರ ನಿರ್ಜನವಾಗಿಬಿಡುತ್ತಿತ್ತು. ಈ ಭಯದ ಸುಳಿಯಿಂದ ಕೋಲಾರದ ನಾಗರಿಕರ ಹೊರ ಬರಲು 20 ವರ್ಷಗಳೇ ಸರಿಯಬೇಕಾಯಿತು.

ಮತ್ತೆ ಗಲಭೆ ಬೇಡ: ಅಂದಿನ ಕೋಮು ಗಲಭೆಗಳ ಬಿಸಿಯನ್ನು ಅನುಭವಿಸಿದ್ದ ಯಾರೊಬ್ಬರು ಕೋಲಾರಕ್ಕೆ ಮತ್ತೆ ಕೋಮು ಗಲಭೆಯ ಹಣೆಪಟ್ಟಿ ಬೇಡ ಎಂದೇ ಭಾವಿಸುತ್ತಾರೆ. ಏಕೆಂದರೆ, ಕೋಲಾರ ನಗರದಲ್ಲಿ ಅಂದಿನ ಕರ್ಫ್ಯೂ ದಿನಗಳಲ್ಲಿ ದಿನದ ಊಟಕ್ಕೆ ಕೂಲಿ ಕೆಲಸ ಮಾಡುತ್ತಿದ್ದ ಅದೆಷ್ಟೋ ಕುಟುಂಬಗಳು ಹಸಿವಿನಿಂದ ನರಳಬೇಕಾಗಿತ್ತು. ಆಸ್ಪತ್ರೆ, ಶಾಲಾ ಕಾಲೇಜು, ಸಾರಿಗೆ ಸೌಕರ್ಯಗಳು ಸ್ತಬ್ಧಗೊಂಡಿತ್ತು.

Advertisement

ಕರ್ಫ್ಯೂ ಅವಧಿಯಲ್ಲಿನ ಪರಿಸ್ಥಿತಿ ಇದಾದರೆ, ಕೋಮುಗಲಭೆಗಳ ನಿಂತ ನಂತರವೂ ಕೋಲಾರಕ್ಕೆ ಕೋಮುಗಲಭೆ ಜಿಲ್ಲೆಯೆಂಬ ಕಪ್ಪು ಚುಕ್ಕೆ ಅಳಿಸಲು ಆಗಿರಲಿಲ್ಲ. ಇದರಿಂದಲೇ ರಾಜಧಾನಿ ಬೆಂಗಳೂರಿಗೆ ಅತಿ ಹತ್ತಿರವಿದ್ದರೂ ಕೋಲಾರ ಕೈಗಾರಿಕೆ, ವಾಣಿಜ್ಯ ಚಟುವಟಿಕೆಗಳಿಂದ ದೂರ ಉಳಿಯಬೇಕಾಯಿತು. ಇದರ ಸಂಪೂರ್ಣ ಲಾಭ ಪಡೆದುಕೊಂಡಿದ್ದ ತುಮಕೂರು ಇದೀಗ ಕೈಗಾರಿಕಾ ನಗರವಾಗಿ ಮಾರ್ಪಟ್ಟಿದ್ದರೆ, ಕೋಲಾರ ಇಂದಿಗೂ ಅತ್ತ ಹಳ್ಳಿಯೂ ಅಲ್ಲದ, ಇತ್ತ ನಗರವೂ ಆಗದ ದುಸ್ಥಿತಿಯಲ್ಲಿರುವಂತಾಗಿದೆ.

ಕೋಮುಗಲಭೆಗೆ ಹಪಾಹಪಿಸುವ ಬಿಸಿ ರಕ್ತ: ಆದರೆ, ಇದರ ಅರಿವಿಲ್ಲದ ಕೋಲಾರದ ಬಿಸಿ ರಕ್ತದ ಯುವಕರು ಕೋಮುಗಲಭೆಗಾಗಿ ಹಪಾಹಪಿಸುತ್ತಿರುವುದು ಕಂಡು ಬರುತ್ತಿದೆ. ಇದರ ದುಷ್ಪರಿಣಾಮದ ಅರಿವಲ್ಲದ ಸಂಘಟನೆಗಳು ಕೋಮು ಗಲಭೆಗಳನ್ನು ಸೃಷ್ಟಿಸುವ ಸಲುವಾಗಿ ಕ್ಷುಲ್ಲಕ ಘಟನೆಗಳನ್ನು ನೆಪವಾಗಿಟ್ಟುಕೊಳ್ಳುತ್ತಿರುವುದು ಕೋಲಾರದಲ್ಲಿ ಶಾಂತಿ ಸುವ್ಯವಸ್ಥೆ ಅಂದುಕೊಂಡಂತೆ ಇಲ್ಲ ಎಂಬ ವಾತಾವರಣವನ್ನು ಕಾಣುವಂತಾಗಿಬಿಟ್ಟಿದೆ.

ಯಾವುದೇ ಧರ್ಮ ದ್ವೇಷ, ಗಲಭೆ, ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಧಾರ್ಮಿಕ ಕಾರ್ಯಕ್ರಮಗಳು ಪರಸ್ಪರವಾಗಿ ಧರ್ಮಗಳ ನಡುವೆ, ವಿವಿಧ ಧರ್ಮೀಯರ ನಡುವೆ ಸೌಹಾರ್ದತೆ, ಸಹಬಾಳ್ವೆ ಮೂಡಿಸುವಂತಿರಬೇಕು. ಶಾಂತಿ ಬೋಧಿಸುವಂತಿರಬೇಕು. ಆದರೆ, ಕೋಲಾರದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳು ಮತ್ತೂಬ್ಬರಿಗೆ ಕಿರಿಕಿರಿಯನ್ನುಂಟು ಮಾಡುವಂತೆ, ಪ್ರಚೋದಿಸುವಂತೆ, ಭೀಕರವಾಗಿ ಘೋಷಣೆಗಳನ್ನು ಕೂಗುವಂತೆ, ಅಸಭ್ಯವಾಗಿ ಕುಣಿಯುವಂತೆ ನಡೆಸುತ್ತಿರುವುದು ಯಾವುದೇ ಧರ್ಮಕ್ಕೆ ಗೌರವ ತರುವಂತದ್ದಲ್ಲ. ಇಂತ ಕೃತ್ಯಗಳಿಂದ ಯಾವ ಧರ್ಮವೂ ಉದ್ಧಾರವೂ ಆಗುವುದಿಲ್ಲ.

ಇಂತ ಕೃತ್ಯಗಳಲ್ಲಿ ಬಹುತೇಕ ಯುವ ಪೀಳಿಗೆಯೇ ಪಾಲ್ಗೊಳ್ಳುತ್ತಿದ್ದು, ಈ ಯುವ ಮನಸ್ಸುಗಳಿಗೆ ಕೋಲಾರದ ಕೋಮುಗಲಭೆಯ ಇತಿಹಾಸ ಮತ್ತು ಅದರ ದುಷ್ಪರಿಣಾಮಗಳ ಅರಿವಿಲ್ಲದಿರುವುದರಿಂದ. ಇಬ್ಬರ ವ್ಯಕ್ತಿಗಳ ನಡುವಿನ ಸಣ್ಣ ಪುಟ್ಟ ಘಟನೆಗಳನ್ನು ದೊಡ್ಡದು ಮಾಡುವಂತಾಗಿಬಿಟ್ಟಿದೆ. ಇಂತ ಘಟನೆಗಳಿಗೆ ಬಹುಬೇಗ ಕೋಮು ಬಣ್ಣ ಬಳಿಯುವ ಸಾಮಾಜಿಕ ಜಾಲತಾಣಗಳ ವ್ಯವಸ್ಥೆಯೂ ಯುವ ಮನಸ್ಸುಗಳನ್ನು ಕದಡುತ್ತಿದೆ.

 

● ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next