Advertisement

ಒಲಿಂಪಿಕ್ಸ್‌ ಪದಕ ಗುರಿ: ಜಿಲ್ಲಾಡಳಿತದ ಗೌರವ ಸ್ವೀಕರಿಸಿ ಗುರುರಾಜ್‌

10:23 AM Apr 20, 2018 | Team Udayavani |

ಉಡುಪಿ: ಒಲಿಂಪಿಕ್ಸ್‌ ಪದಕ ನನ್ನ ಗುರಿ ಎಂದು ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ವೇಟ್‌ ಲಿಫ್ಟಿಂಗ್‌ ಬೆಳ್ಳಿ ಪದಕ ಗೆದ್ದಿರುವ ಕುಂದಾಪುರದ ಗುರುರಾಜ್‌ ಹೇಳಿದ್ದಾರೆ. ಗುರುವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನಾನು ಹುಟ್ಟೂರಿಗೆ ಬಂದ ಸಂದರ್ಭ ಭವ್ಯ ಸ್ವಾಗತ ದೊರೆತಿದೆ. ಇತರ ಕ್ರೀಡಾಪಟುಗಳಿಗೂ ಇದೇ ಮಾದರಿಯ ಪ್ರೋತ್ಸಾಹ ದೊರೆಯಲಿ. ಆಗ ಮಾತ್ರ ಹ‌ಳ್ಳಿಯ ಕ್ರೀಡಾಪಟುಗಳು ಕೂಡ ಸಾಧನೆ ಮಾಡಲು ಸಾಧ್ಯ ಎಂದರು. 2015ರಿಂದ ಪಂಜಾಬ್‌ನ ಪಟಿಯಾಲಾದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ತಲಾ 2 ತಾಸು, ಸಂಜೆ 3 ತಾಸು ನಿರಂತರ ಅಭ್ಯಾಸ ಮಾಡುತ್ತಿದ್ದೇನೆ. ಸೆಪ್ಟಂಬರ್‌ನಲ್ಲಿ ನಡೆಯುವ ಏಷ್ಯನ್‌ ಗೇಮ್ಸ್‌ಗೆ ಸಿದ್ಧನಾಗುತ್ತಿದ್ದೇನೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಗುರಿ ಇದೆ. ಕಾಮನ್ವೆಲ್ತ್‌ನಲ್ಲಿ ಎತ್ತಿರುವ ಭಾರಕ್ಕಿಂತ 20ರಿಂದ 30 ಕೆಜಿ ಜಾಸ್ತಿ ಎತ್ತಿದರೆ ಒಲಿಂಪಿಕ್ಸ್‌ ಪದಕ ಗೆಲ್ಲಬಹುದಾಗಿದೆ ಎಂದರು.

Advertisement

ಪ್ರೋತ್ಸಾಹ ಸಾಲದು
ನಾಲ್ಕು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಒಟ್ಟು 2 ಚಿನ್ನ, ತಲಾ 1 ಬೆಳ್ಳಿ ಮತ್ತು ಕಂಚು ಗೆದ್ದುಕೊಂಡಿದ್ದೇನೆ. ಏಕಲವ್ಯ ಪ್ರಶಸ್ತಿ ದೊರೆತಿದೆ. ಉಳಿದಂತೆ ಸರಕಾರಗಳ ಪ್ರೋತ್ಸಾಹ ಅಷ್ಟಾಗಿ ಸಿಕ್ಕಿಲ್ಲ. ಎ. 20ರಂದು ರಕ್ಷಣಾ ಇಲಾಖೆಯಿಂದ ಸಮ್ಮಾನವಿದೆ ಎಂದು ಹೇಳಿದರು.

ಜಿಲ್ಲೆಗೆ ಹೆಮ್ಮೆ
ಸಮ್ಮಾನ ನಡೆಸಿದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರು, ಗುರುರಾಜ್‌ ಅವರು ಉಡುಪಿ ಜಿಲ್ಲೆಯವರಾಗಿರುವುದು ನಮಗೆ ಹೆಮ್ಮೆ ಮತ್ತು ಸಂತೋಷವನ್ನುಂಟು ಮಾಡಿದೆ. ಇವರು ಇತರರಿಗೂ ಸ್ಫೂರ್ತಿಯಾಗಿ ಮತ್ತಷ್ಟು ಮಂದಿ ಕ್ರೀಡೆಯಲ್ಲಿ ಸಾಧನೆ ಮಾಡುವಂತಾಗಲಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್‌ ಕುಮಾರ್‌ ಶೆಟ್ಟಿ, ಗುರುರಾಜ್‌ ಹುಟ್ಟೂರಿಗೆ ಆಗಮಿಸುತ್ತಿರುವ ಈ ಸಂದರ್ಭದಲ್ಲಿ ಜಿಲ್ಲಾಡಳಿತವೇ ವಿಮಾನ ನಿಲ್ದಾಣದಿಂದ ಅವರ ಮನೆಯವರೆಗೆ ವಾಹನ ವ್ಯವಸ್ಥೆ ಮಾಡಿದೆ. ಎ. 20ರಂದು ಅವರು ದಿಲ್ಲಿಗೆ ತೆರಳಲಿದ್ದಾರೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಅನುರಾಧಾ, ಸಿಇಒ ಶಿವಾನಂದ ಕಾಪಶಿ, ಗುರುರಾಜ್‌ ತಂದೆ ಮಹಾಬಲ ಪೂಜಾರಿ ಉಪಸ್ಥಿತರಿದ್ದರು.

ಜಿಲ್ಲೆಯ ಮತ ಜಾಗೃತಿ ಐಕಾನ್‌
ಮತದಾನ ಜಾಗೃತಿಗಾಗಿ ಗುರುರಾಜ ಅವರನ್ನು ಉಡುಪಿ ಜಿಲ್ಲೆಯ ಐಕಾನ್‌ ಆಗಿ ಜಿಲ್ಲಾಡಳಿತ ನಿಯೋಜಿಸುತ್ತಿದೆ ಎಂದು ಜಿಲ್ಲಾಧಿಕಾರಿ ಘೋಷಿಸಿದರು. ‘ಎಲ್ಲರೂ ತಪ್ಪದೇ ಮತದಾನ ಮಾಡಿ’ ಎಂಬ ಸಂದೇಶವನ್ನು ಒಳಗೊಂಡ ಗುರುರಾಜ್‌ ಅವರ ಧ್ವನಿಚಿತ್ರವನ್ನು ಮುದ್ರಿಸಿಕೊಳ್ಳಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next