Advertisement

ತ್ರಿವರ್ಣದೊಂದಿಗೆ ಸಾಗಿ ಬಂದ ಸಿಂಧು, ಮನ್‌ಪ್ರೀತ್‌

08:57 AM Jul 30, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ಗೆ ಗುರುವಾರ ತಡರಾತ್ರಿ ಅದ್ಧೂರಿ ಹಾಗೂ ವರ್ಣರಂಜಿತ ಆರಂಭ ಲಭಿಸಿತು. ಪಥಸಂಚಲನದಲ್ಲಿ ಬ್ಯಾಡ್ಮಿಂಟನ್‌ ಸ್ಟಾರ್‌ ಪಿ.ವಿ. ಸಿಂಧು ಮತ್ತು ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ಭಾರತದ ತ್ರಿವರ್ಣ ಧ್ವಜ ಹಿಡಿದು ಸಾಗಿ ಬರುತ್ತಿದ್ದಂತೆಯೇ ಕ್ರೀಡಾಭಿಮಾನಿಗಳು ಪುಳಕಗೊಂಡರು.

Advertisement

ಆಸ್ಟ್ರೇಲಿಯದ ಕ್ರೀಡಾ ತಂಡದೊಂದಿಗೆ ಪಥಸಂಚಲನ ಮೊದಲ್ಗೊಂಡಿತು. 30 ಸಾವಿರದಷ್ಟು ವೀಕ್ಷಕರು ಈ ಭವ್ಯ ಸಮಾರಂಭವನ್ನು ಕಣ್ತುಂಬಿಸಿಕೊಂಡರು.

ರಾಜಕುಮಾರ ಚಾರ್ಲ್ಸ್‌ ಚಾಲನೆ
“ಅಲೆಕ್ಸಾಂಡರ್‌ ಸ್ಟೇಡಿಯಂ’ನಲ್ಲಿ ನಡೆದ ರಂಗುರಂಗಿನ ಸಮಾರಂಭಕ್ಕೆ ಬ್ರಿಟನ್‌ ರಾಜಕುಮಾರ ಚಾರ್ಲ್ಸ್‌
ಚಾಲನೆ ನೀಡಿದರು. ಅವರು ಈ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಪತ್ನಿ ಕಮಿಲಾ ಅವರೊಂದಿಗೆ ತಾವೇ ಕಾರು ಚಲಾಯಿಸಿಕೊಂಡು ಬಂದರು.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಡ್ರಮ್ಮರ್‌ ಅಬ್ರಹಾಂ ಪ್ಯಾಡಿ ಆರಂಭ ಒದಗಿಸಿದರು. ಲಂಡನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಗಾಯಕಿ ಮತ್ತು ಸಂಗೀತ ಸಂಯೋಜಕಿ ರಂಜನಾ ಘಾಟಕ್‌ ಪ್ರೇಕ್ಷಕರಿಗೆ ಭರಪೂರ ರಂಜನೆ ಒದಗಿಸಿದರು.

ವೇದಿಕೆಯಲ್ಲಿ 72 ಕಾರು
ಸಮಾರಂಭದಲ್ಲಿ ಬರ್ಮಿಂಗ್‌ಹ್ಯಾಮ್‌ನ ಮೋಟಾರ್‌ ಉದ್ಯಮಕ್ಕೆ ವಿಶೇಷ ಗೌರವ ಸಲ್ಲಿಸಲಾಯಿತು. ಕಳೆದ 5 ದಶಕಗಳ 72 ವಾಹನಗಳು ವೇದಿಕೆಯನ್ನೇರಿ ಬ್ರಿಟನ್‌ ಧ್ವಜವಾದ “ಯೂನಿಯನ್‌ ಜಾಕ್‌’ ಆಕಾರ ತಾಳಿದ ದೃಶ್ಯಾವಳಿ ಎಲ್ಲರನ್ನೂ ಸೆಳೆಯಿತು. ವಿಂಟೇಜ್‌ ಹಾಗೂ ಮಿನಿ ಕೂಪರ್‌ ಕಾರುಗಳು ಇಲ್ಲಿ ಕಾಣಿಸಿಕೊಂಡವು.

Advertisement

ಸ್ವಾಗತ ಕೋರಿದ ಮಲಾಲ
ನೊಬೆಲ್‌ ಪ್ರಶಸ್ತಿ ಪುರಸ್ಕೃತ ಮಲಾಲ ಯೂಸಫಾಯಿ ಎಲ್ಲ ಕ್ರೀಡಾಪಟುಗಳಿಗೆ ಸ್ವಾಗತ ಕೋರಿ, ಶಿಕ್ಷಣ ಹಾಗೂ ಶಾಂತಿಯ ಸಂದೇಶ ನೀಡಿದರು. ಮಲಾಲಾ ತಮ್ಮ ಶಸ್ತ್ರಚಿಕಿತ್ಸೆ ಬಳಿಕ ಬರ್ಮಿಂಗ್‌ಹ್ಯಾಮ್‌ನಲ್ಲೇ ನೆಲೆಸಿದ್ದಾರೆ.

ಚಾಪ್ಲಿನ್‌, ಶೇಕ್ಸ್‌ಪಿಯರ್‌ ಸ್ಮರಣೆ
ಬರ್ಮಿಂಗ್‌ಹ್ಯಾಮ್‌ ನಗರ ಹೀರೋ ಆಗಿದ್ದ ಲೆಜೆಂಡ್ರಿ ಕಾಮಿಡಿಯನ್‌ ಚಾರ್ಲಿ ಚಾಪ್ಲಿನ್‌ ಅವರಿಗೆ ಗೌರವ ಸಲ್ಲಿಸಲಾಯಿತು. ಜತೆಗೆ ಖ್ಯಾತ ಆಂಗ್ಲ ನಾಟಕಕಾರ ವಿಲಿಯಂ ಶೇಕ್ಸ್‌ ಪಿಯರ್‌ ಅವರನ್ನೂ ಸ್ಮರಿಸಲಾಯಿತು. 1623ರಲ್ಲಿ ಮುದ್ರಣ ಕಂಡ ಅವರ ನಾಟಕಗಳ ಮೊದಲ ಬೃಹತ್‌ ಸಂಕಲನ, ಯುಕೆಯಲ್ಲೇ ಅತೀ ದೊಡ್ಡದಾದ ಬರ್ಮಿಂಗ್‌ಹ್ಯಾಮ್‌ ಸಾರ್ವಜನಿಕ ಗ್ರಂಥಾಲಯದಲ್ಲಿದೆ.

ಗೂಳಿ ಮೂಲಕ ಹೋರಾಟದ ಹಾದಿ
10 ಮೀಟರ್‌ ಉದ್ದದ ಬೃಹತ್‌ ಗೂಳಿ ಈ ಸಮಾರಂಭದ ವಿಶೇಷ ಆಕರ್ಷಣೆ ಆಗಿತ್ತು. ಈ ಗೂಳಿ ಮೂಲಕ ಬರ್ಮಿಂಗ್‌ಹ್ಯಾಮ್‌ನ ಹೋರಾಟದ ಹಾದಿ ಒಂದೊಂದಾಗಿ ತೆರೆಯಲ್ಪಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next