Advertisement
ಮೆರವಣಿಗೆ ಮೂಲಕ ಕುಂದಾಪುರಕ್ಕೆ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ರಸ್ತೆಯುದ್ದಕ್ಕೂ ನೂರಾರು ಮಂದಿ ಸಾಲುಗಟ್ಟಿ ನಿಂತು ಹುಟ್ಟೂರ ಸಾಧಕನಿಗೆ ಗೌರವ ಸಲ್ಲಿಸಿದರು.
ಕುಂದಾಪುರದಲ್ಲಿ ಹಕ್ಯುìಲಸ್ ಜಿಮ್ ವತಿಯಿಂದ ನಡೆದ ಸಮ್ಮಾನ ಕಾರ್ಯಕ್ರಮದಲ್ಲಿ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಟಿ. ಭೂಬಾಲನ್ ಅಭಿನಂದಿಸಿದರು. ತಾಲೂಕು ಬಿಲ್ಲವ ಸಂಘದ ವತಿಯಿಂದ ಕುಂದಾಪುರದ ನಾರಾಯಣಗುರು ಮಂದಿರದಲ್ಲಿ ಸಮ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಗುರುರಾಜ್ ತಂದೆ ಮಹಾಬಲ ಪೂಜಾರಿ, ಸಹೋದರರು, ಸಂಬಂಧಿಕರು, ಜಿಲ್ಲಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್, ಮೊದಲ ಕೋಚ್ ಕೊಲ್ಲೂರಿನ ಸುಕೇಶ್ ಶೆಟ್ಟಿ, ಕುಂದಾಪುರ ಎಸ್‌ಐ ಹರೀಶ್ ಆರ್., ಗಣ್ಯರು ಉಪಸ್ಥಿತರಿದ್ದರು.
Related Articles
ಗುರುರಾಜ್ ಪೂಜಾರಿ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಗುರುವಾರ ಸಂಜೆ ತೆರಳಿ ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
Advertisement
ದೇಗುಲದ ಅರ್ಚಕ ಡಾ| ಕೆ.ಎನ್. ನರಸಿಂಹ ಅಡಿಗ ಅವರ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ಗುರುರಾಜ್ ಪೂಜಾರಿ ಅವರ ದೈಹಿಕ ಶಿಕ್ಷಣ ನಿರ್ದೇಶಕ ಸುಕೇಶ ಶೆಟ್ಟಿ, ದೈಹಿಕ ಶಿಕ್ಷಕ ಸಚಿನ್ ಕುಮಾರ್ ಶೆಟ್ಟಿ ಹಾಗೂ ದೇಗುಲದ ಅಧೀಕ್ಷಕ ರಾಮಕೃಷ್ಣ ಅಡಿಗ ಉಪಸ್ಥಿತರಿದ್ದರು.
ಶ್ರೀ ದೇವಿಯ ಅನುಗ್ರಹ…ಸುದ್ದಿಗಾರರೊಂದಿಗೆ ಮಾತನಾಡಿದ ಗುರುರಾಜ್, ಕೊಲ್ಲೂರು ಶ್ರೀ ಮೂಕಾಂಬಿಕಾ ಪ.ಪೂ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಪ್ರತಿ ದಿನ ಕ್ಷೇತ್ರಕ್ಕೆ ಆಗಮಿಸಿ, ದೇವಿಯನ್ನು ಧ್ಯಾನಿಸುತ್ತಿದ್ದೆ. ಹಾಸ್ಟೆಲ್‌ನಲ್ಲಿ ಬೆಳಗ್ಗೆ ಒದಗಿಸುತ್ತಿದ್ದ ಗಂಜಿ ಊಟದೊಡನೆ ಅಮ್ಮನ ಆಶೀರ್ವಾದದಿಂದ ಕಿಂಚಿತ್ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು. ವಂಡ್ಸೆ: ಸಮ್ಮಾನಕ್ಕೆ ನೀತಿ ಸಂಹಿತೆ ಅಡ್ಡಿ
ವಂಡ್ಸೆ ಮತ್ತು ಚಿತ್ತೂರು ಆಸುಪಾಸಿನ ಗ್ರಾಮಸ್ಥರು ಆಯೋಜಿಸಿದ್ದ ಸಮ್ಮಾನ ಕಾರ್ಯಕ್ರಮದ ವಿಚಾರದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ನೀತಿಸಂಹಿತೆಯ ಬಗ್ಗೆ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ವಂಡ್ಸೆಯ ಶ್ರೀ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ವತಿಯಿಂದ ದೇಗುಲದ ಆಡಳಿತ ಮೊಕ್ತೇಸರ ಬಿ.ಕೆ. ಶಿವರಾಮ ಶೆಟ್ಟಿ , ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀಧರ ಶೆಟ್ಟಿ ಉಪಸ್ಥಿತರಿದ್ದು ಸಮ್ಮಾನಿಸಿದರು. ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲಕ್ಕೆ ತೆರಳಿದ ಗುರುರಾಜ್ ಪೂಜಾರಿ ಅಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ತ್ರಿವರ್ಣ ಧ್ವಜ ಹಾರಾಡುತ್ತಿದ್ದಂತೆ ಕಣ್ಣಲ್ಲಿ ನೀರು ಜಿನುಗಿತು…
ಕುಂದಾಪುರದಲ್ಲಿ ಅಭಿನಂದನೆ ಸ್ವೀಕರಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಗುರುರಾಜ್, ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿರುವುದಕ್ಕೆ ತುಂಬಾ ಖುಷಿಯಿದೆ. ಭಾರತ ಗೆದ್ದ 66 ಪದಕಗಳಲ್ಲಿ ಮೊದಲ ಪದಕ ನನ್ನದು ಎನ್ನುವುದು ಹೆಮ್ಮೆಯ ಸಂಗತಿ. ಗೋಲ್ಡ್‌ಕೋಸ್ಟ್‌ನಲ್ಲಿ ಬೆಳ್ಳಿ ಗೆದ್ದಾಗ ರಾಷ್ಟ್ರಗೀತೆಯೊಂದಿಗೆ ತ್ರಿವರ್ಣ ಧ್ವಜವು ನಿಧಾನವಾಗಿ ಮೇಲೇರುತ್ತಿದ್ದಂತೆ ಕಣ್ಣಲ್ಲಿ ನೀರು ಬಂತು. ತೀರಾ ಹಳ್ಳಿ ಪ್ರದೇಶದಲ್ಲಿ ಹುಟ್ಟಿ ಬೆಳೆದ ನನ್ನ ಈ ಸಾಧನೆಯಿಂದಾಗಿ ದೇಶದ ಹೆಮ್ಮೆಯ ಪ್ರತೀಕವಾಗಿರುವ ತ್ರಿವರ್ಣ ಧ್ವಜ ಎತ್ತರಕ್ಕೆ ಹಾರಾಡಿದ ಖುಷಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದರು.