Advertisement
ಬುಧವಾರ ತಡರಾತ್ರಿ ನಡೆದ ಫೈನಲ್‌ನಲ್ಲಿ 23 ವರ್ಷದ ತೇಜಸ್ವಿನ್ ಶಂಕರ್ 2.22 ಮೀ. ಎತ್ತರದ ಸಾಧನೆಯೊಂದಿಗೆ ತೃತೀಯ ಸ್ಥಾನಿಯಾದರು. ಬಹಾಮಸ್‌ನ ಡೊನಾಲ್ಡ್ ಥಾಮಸ್ ಮತ್ತು ಇಂಗ್ಲೆಂಡ್‌ನ ಜೋಯೆಲ್ ಕ್ಲಾರ್ಕ್ ಕೂಡ 2.22 ಮೀ. ಎತ್ತರಕ್ಕೇ ನೆಗೆದಿದ್ದರು. ಆದರೆ ಇವರಿಬ್ಬರು ಈ ಎತ್ತರಕ್ಕೆ ಒಂದಕ್ಕೂ ಹೆಚ್ಚು ಸಲ ಜಂಪ್ ಮಾಡಿದ್ದರು. ಆದರೆ ತೇಜಸ್ವಿನ್ ಶಂಕರ್ ಒಂದೇ ಪ್ರಯತ್ನದಲ್ಲಿ ಈ ದೂರ ದಾಖಲಿಸಿದ್ದರಿಂದ ಕಂಚು ಒಲಿಸಿಕೊಂಡರು.
Related Articles
Advertisement
ಇದಕ್ಕೂ ಮೊದಲು ಗೇಮ್ಸ್ ಹೈಜಂಪ್ ಇತಿಹಾಸದಲ್ಲಿ ಭಾರತದ ಅತ್ಯುತ್ತಮ ಸಾಧನೆ 1970ರ ಎಡಿನ್‌ಬರ್ಗ್ ಕೂಟದಲ್ಲಿ ದಾಖಲಾಗಿತ್ತು. ಅಂದು ಭೀಮ ಸಿಂಗ್ 2.06 ಮೀ. ಎತ್ತರ ನೆಗೆದಿದ್ದರು.
ನ್ಯಾಯಾಲಯಕ್ಕೆ ಮೊರೆ :
ತೇಜಸ್ವಿನ್ ಶಂಕರ್ ಈ ಕೂಟಕ್ಕೆ ಆಯ್ಕೆಯಾದುದರ ಹಿಂದೆ ದೊಡ್ಡ ಕತೆ ಇದೆ. ಮೊದಲು ಪ್ರಕಟಗೊಂಡ ಆ್ಯತ್ಲೆಟಿಕ್ಸ್ ತಂಡದಲ್ಲಿ ಅವರ ಹೆಸರಿರಲಿಲ್ಲ. ಹೀಗಾಗಿ ದಿಲ್ಲಿ ಹೈಕೋರ್ಟ್ ಮೊರೆಹೋದರು. ಪ್ರಸಕ್ತ ಋತುವಿನಲ್ಲಿ 2.27 ಮೀ. ಹಾಗೂ 2.29 ಮೀ. ನೆಗೆತದ ಸಾಧನೆಗೈದರೂ ತನ್ನನ್ನು ಕಡೆಗಣಿಸಲಾಗಿದೆ ಎಂಬುದು ಇವರ ಆರೋಪವಾಗಿತ್ತು. ಇದನ್ನು ಎತ್ತಿಹಿಡಿದ ನ್ಯಾಯಪೀಠ ಶಂಕರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಸೂಚಿಸಿತು.
ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ ಇದನ್ನು ಗೇಮ್ಸ್ ಸಂಘಟಕರಿಗೆ ತಿಳಿಸಿತು. ಜು. 22ರಂದಷ್ಟೇ ಶಂಕರ್ ಭಾರತ ತಂಡವನ್ನು ಸೇರಿಕೊಂಡಿದ್ದರು. ಇದೀಗ ತಮ್ಮ ಆಯ್ಕೆಯನ್ನು ಭರ್ಜರಿಯಾಗಿ ಸಮರ್ಥಿಸಿಕೊಂಡರು. ಭಾರತಕ್ಕೆ ಪದಕದೊಂದಿಗೆ ಮರಳಲು ಬಹಳ ಖುಷಿಯಾಗುತ್ತಿದೆ ಎಂದಿದ್ದಾರೆ.