ಗೋಲ್ಡ್‌ಕೋಸ್ಟ್: ಭಾರತದ ಬ್ಯಾಡ್ಮಿಂಟನ್ ರಾಣಿಯರಾದ ಪಿ.ವಿ. ಸಿಂಧು ಮತ್ತು ಸೈನಾ ನೆಹ್ವಾಲ್ ಗೋಲ್ಡ್‌ಕೋಸ್ಟ್ ಗೇಮ್ಸ್‌ನ ಬಹು-ನಿರೀಕ್ಷಿತ ಬ್ಯಾಡ್ಮಿಂಟನ್ ವನಿತಾ ಸಿಂಗಲ್ಸ್ ಫೈನಲ್‌ನಲ್ಲಿ ಪರಸ್ಪರ ಎದುರಾಗಲಿದ್ದಾರೆ. ಇದರೊಂದಿಗೆ ಭಾರತಕ್ಕೆ 2 ಪದಕಗಳು ಖಾತ್ರಿಯಾಗಿವೆ. ಚಿನ್ನ ಯಾರಿಗೆ, ಬೆಳ್ಳಿ ಯಾರಿಗೆ ಎಂಬುದಷ್ಟೇ ರವಿವಾರದ ಕುತೂಹಲ. ಈ ನಡುವೆ ಕೆ. ಶ್ರೀಕಾಂತ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಸೆಣಸಲಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು ಹಾಲಿ ಚಾಂಪಿಯನ್ ಕೆನಡಾದ ಮಿಚೆಲ್ ಲೀ ವಿರುದ್ಧ, ಸೈನಾ ಕ್ರಿಸ್ಟಿ ಗಿಲ್ಮೋರ್ ವಿರುದ್ಧ ಜಯ ಸಾಧಿಸಿದರು.
ಸಿಂಧು ಕೆನಡಾ ಆಟಗಾರ್ತಿ ಮಿಚೆಲ್ ಲೀಯನ್ನು 21-18, 21-8 ಅಂತರದಿಂದ ಸೋಲಿಸಿದರು. ಇಬ್ಬರ ನಡುವೆ 26 ನಿಮಿಷಗಳ ಸ್ಪರ್ಧೆ ನಡೆಯಿತು. ಇನ್ನೊಂದು ಪಂದ್ಯದಲ್ಲಿ ಮಾಜಿ ವಿಶ್ವ ನಂ. 1 ಆಟಗಾರ್ತಿ ಸೈನಾ, ಸ್ಕಾಟ್ಲೆಂಡ್‌ನ ಗಿಲ್ಮೋರ್ ಅವರನ್ನು 21-14, 18-21, 21-17 ಅಂತರದಿಂದ ಸೋಲಿಸಿದರು.
ಇತ್ತೀಚೆಗಷ್ಟೇ ವಿಶ್ವ ನಂ. 1 ಸ್ಥಾನಕ್ಕೇರಿರುವ ಭಾರತದ ಸ್ಟಾರ್ ಆಟಗಾರ ಕಿಡಂಬಿ ಶ್ರೀಕಾಂತ್ ಕೂಡ ಫೈನಲ್ ಪ್ರವೇಶಿದ್ದು, ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಲಭಿಸುವುದು ಖಾತ್ರಿಯಾಗಿದೆ. ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ಅಗ್ರ ಶ್ರೇಯಾಂಕಿತ ಶ್ರೀಕಾಂತ್ ಇಂಗ್ಲೆಂಡ್‌ನ ರಾಜೀವ್ ಔಸೆಫ್ ವಿರುದ್ಧ 21-10, 21-17 ಅಂತರದ ಗೆಲುವು ದಾಖಲಿಸಿದರು. 2010ರ ದಿಲ್ಲಿ ಗೇಮ್ಸ್ ಬೆಳ್ಳಿ ವಿಜೇತ ಆಟಗಾರನನ್ನು ಸೋಲಿಸಲು ಶ್ರೀಕಾಂತ್‌ಗೆ ಸುಮಾರು ಅರ್ಧ ಗಂಟೆ ಬೇಕಾಯಿತು.
ಇದಕ್ಕೂ ಮೊದಲಿನ ಪಂದ್ಯದಲ್ಲಿ ಮತ್ತೂಬ್ಬ ಭಾರತೀಯ ಉದಯೋನ್ಮುಖ ಆಟಗಾರ ಎಚ್.ಎಸ್. ಪ್ರಣಯ್ ಅವರು ಔಸೆಫ್ ವಿರುದ್ಧ 21-17, 23-25 ಸೋಲು ಕಂಡಿದ್ದರಿಂದ ಭಾರತಕ್ಕೆ ಲಭಿಸಲಿದ್ದ ಬೆಳ್ಳಿ ಕೈ ತಪ್ಪಿತು.
ಪುರುಷರ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಚಿನ್ನ ಗೆಲ್ಲಲು ಇನ್ನೊಂದೇ ಹೆಜ್ಜೆ ಬಾಕಿಯಿದೆ. ಸೆಮಿಫೈನಲ್‌ನಲ್ಲಿ ಭಾರತೀಯ ಜೋಡಿ ಶ್ರೀಲಂಕಾದ ಸಚಿನ್ ಡಯಾಸ್-ಭುವನೇಕ ಗುಣತಿಲಕ ವಿರುದ್ಧ 21-18, 21-10 ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿತು.
ವನಿತಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಎನ್. ಸಿಕ್ಕಿ ರೆಡ್ಡಿ ಜೋಡಿ ಸ್ಥಳೀಯ ಸೇತ್ಯಾನಾ ಮಪಾಸಾ-ಗ್ರೋನಿಯಾ ಸೊಮೆರ್ವಿಲ್ಲೆ ವಿರುದ್ಧ 21-19, 21-19 ಅಂತರದಲ್ಲಿ ಸೋಲುವ ಮೂಲಕ ಕಂಚಿಗೆ ತೃಪ್ತಿ ಪಟ್ಟುಕೊಂಡಿದೆ.