Advertisement
ಕಾಡಿನ ಹಕ್ಕಿಯಾದರೂ ಇದಕ್ಕೆ ಮನುಷ್ಯರ ಒಡನಾಟ ಇದೆ. ಏಕೆಂದರೆ, ಗಿಳಿ, ಸಾರಿಕಾ ಹಕ್ಕಿಯಂತೆ ಇದನ್ನು ಪಂಜರದಲ್ಲಿ ಇಟ್ಟು ಹೆಚ್ಚಾಗಿ ಸಾಕುತ್ತಾರೆ. ಈ ಹಕ್ಕಿ ಕಾಡಿನಲ್ಲೂ ಸ್ವತ್ಛಂದವಾಗಿ ವಿಹರಿಸುತ್ತದೆ. ಈ ಹಕ್ಕಿ ಸುಮಾರು 15 ಸೆಂ.ಮೀ. ದೊಡ್ಡದಾಗಿರುತ್ತದೆ. ಗಂಡು ಹಕ್ಕಿಯ ಮೈಬಣ್ಣ ಹೆಚ್ಚು ಆಕರ್ಷಕ. ಇದರ ಕಣ್ಣಿನ ಮೇಲಿನ ಬಿಳಿ ಹುಬ್ಬಿನಿಂದ ಹೆಣ್ಣು ಗುಬ್ಬಿಯಾವುದು, ಗಂಡು ಗುಬ್ಬಿಯಾವುದು ಎಂದು ಪಚ್ಚೆ ಹಚ್ಚಲು ಸಹಾಯಕವಾಗಿದೆ.
Related Articles
Advertisement
ಕೀಟ, ಧಾನ್ಯ, ಮಕರಂದ ಗುಲಾಬಿ ಫಿಂಚ್‌ನ ಪ್ರಮುಖ ಆಹಾರ. ಧಾನ್ಯಗಳನ್ನು ತಿನ್ನಲೆಂದು ಈ ಹಕ್ಕಿಗಳು ಗುಂಪಾಗಿ ಹೊಲಗಳಿಗೆ ದಾಳಿ ಮಾಡುತ್ತವೆ. ಪ್ರಾಯಕ್ಕೆ ಬಂದಾಗ ಗಂಡು ಹಕ್ಕಿಯ ನೆತ್ತಿ, ಎದೆಯ ಮೇಲಿನ ಗುಲಾಬಿ ಬಣ್ಣ ಎದ್ದು ಕಾಣುತ್ತದೆ. ಹೊಟ್ಟೆ ಭಾಗದಲ್ಲಿ ತಿಳಿ ಹಳದಿ ಛಾಯೆಯ ಬಿಳಿಬಣ್ಣದಿಂದ ಕೂಡಿರುತ್ತದೆ. ಚುಂಚು ತಿಳಿ ಗುಲಾಬಿ ಬಣ್ಣದ್ದು. ದಟ್ಟ ಕಂದು ಗೆರೆಯ ರೆಕ್ಕೆ ಇದಕ್ಕಿದೆ. ರೆಕ್ಕೆಯ ಅಂಚಿನಲ್ಲಿ ಕಂದು ಬಣ್ಣದ ಎರಡು ರೇಖೆ ಇದೆ. ಗಂಡು 3 ಭಿನ್ನ ದನಿಯಲ್ಲಿ ಕೂಗುತ್ತದೆ. ಅದು ಏರು ಸ್ವರದಲ್ಲಿರುತ್ತದೆ. ಹೀಗೆ ಮಂದ್ರ, ಏರು ಸ್ವರದಲ್ಲಿ ಕೂಗುವ ಗಂಡು ಹಕ್ಕಿ ತನ್ನ ಟೆರಿಟರಿಯನ್ನು ಎದುರಾಳಿಗೆ ತಿಳಿಸಲು ಹೀಗೆ ಮಾಡುತ್ತದೆ. ಅಪಾಯ ಎದುರಾದಾಗ ಎಲ್ಲ ಹಕ್ಕಿಗಳೂ ಒಮ್ಮೆಲೇ ಚದುರಿ ಬೇರೆ ಬೇರೆಯಾಗುತ್ತವೆ. ಮತ್ತೆ ಸೇರಬೇಕಾದಾಗ ಭಿನ್ನ ದನಿ ಹೊರಡಿಸಿ, ಒಟ್ಟಾಗುತ್ತವೆ. ತನ್ನ ಸಂಗಾತಿಯನ್ನು ಹುಡುಕಿಕೊಳ್ಳಲೂ ಕೂಡ ಗಂಡು ಹಕ್ಕಿ ಇಂಥದೇ ಸ್ವರದಲ್ಲಿ ಕೂಗುತ್ತದೆ.
ಜೂನ್, ಆಗಸ್ಟ್ ಇದು ಮರಿಮಾಡುವ ಸಮಯ. ಕಾಡು ಗುಲಾಬಿಯಂಥ ಗಿಡಗಳ ಪೊದೆಯಲ್ಲಿ ನಾರು ಬೇರು, ಹತ್ತಿಯನ್ನು ಸೇರಿಸಿ ಬಟ್ಟಲಿನಾಕಾರದಲ್ಲಿ ಗೂಡು ಕಟ್ಟುತ್ತದೆ. ಈ ಹಕ್ಕಿ ನಾಲ್ಕರಿಂದ 5 ನೀಲಿ ಬಣ್ಣದ ಆಯತ ವರ್ತುಲಾಕಾರದ ಕಂದು ಚುಕ್ಕೆ ಇರುವ ಮೊಟ್ಟೆ ಇಡುತ್ತದೆ. ಗಂಡು-ಹೆಣ್ಣು ಎರಡೂ ಮರಿಗಳ ಪಾಲನೆ ಪೋಷಣೆ ಮಾಡುತ್ತದೆ. ಗುಟುಕು ನೀಡುವ ಸಂದರ್ಭದಲ್ಲೂ ಗಂಡು-ಹೆಣ್ಣು ಎರಡೂ ಕೆಲಸ ಹಂಚಿಕೊಳ್ಳುತ್ತವೆ.
ಪಿ.ವಿ.ಭಟ್ ಮೂರೂರು