Advertisement

ಆರೋಗ್ಯ ಟಿಪ್ಸ್: ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳು

03:40 PM Dec 12, 2022 | ಕಾವ್ಯಶ್ರೀ |

ಚಳಿಗಾಲ ಈಗಾಗಲೇ ಆರಂಭವಾಗಿದೆ. ಕಾಲ ಬದಲಾದಂತೆ ಕಾಲಕ್ಕೆ ತಕ್ಕಂತೆ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ ಸಂಗತಿ. ತಂಪು ವಾತಾವರಣ ಕಾಯಿಲೆಗಳು ಬೇಗ ಹರಡಲು ಕಾರಣವಾಗುತ್ತದೆ. ಈ ಸಮಯದಲ್ಲಿ ತಾಪಮಾನ ಕಡಿಮೆ ಆಗಿರುವುದರಿಂದ ತಂಪಾದ ಗಾಳಿ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ.

Advertisement

ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳೆಂದರೆ ನೆಗಡಿ, ಕಫ, ಕೆಮ್ಮು, ಜ್ವರ ಇತ್ಯಾದಿ. ಈ ಸಮಯದಲ್ಲಿ ಅಸ್ತಮಾ ಇದ್ದವರು ಹೆಚ್ಚಿನ ಎಚ್ಚರ ವಹಿಸಬೇಕು. ಒಣ ತ್ವಚೆ ಇರುವವರಿಗೆ ಸಮಸ್ಯೆ ಸಾಮಾನ್ಯ. ಮಕ್ಕಳು ಹಾಗೂ ಹಿರಿಯರನ್ನು ಈ ಕಾಲದಲ್ಲಿ ಜಾಗೃತೆಯಿಂದ ನೋಡಿಕೊಳ್ಳಬೇಕು. ಆರೋಗ್ಯ ಸಮಸ್ಯೆ ಇರುವವರು ಬೆಚ್ಚಗಿರುವ ಪ್ರದೇಶದಲ್ಲಿರಬೇಕು.

ಚಳಿಗಾಲದ ಕೆಲವು ಆರೋಗ್ಯ ಸಮಸ್ಯೆಗಳು:

ಒಣ ಚರ್ಮ ಸಮಸ್ಯೆ

ಇದು ಚಳಿಗಾಲದಲ್ಲಿ ಕಂಡು ಬರುವ ಅತ್ಯಂತ ಸಾಮಾನ್ಯ ಸಮಸ್ಯೆ. ಚರ್ಮ ಒಣಗುವುದು, ಚರ್ಮ ಬಿರುಕು ಬಿಡುವುದು, ತುರಿಕೆ, ರಕ್ತಸ್ರಾವ, ನೋವು ಮತ್ತು ಸೋಂಕು ಉಂಟಾಗುತ್ತದೆ. ಒಣ ತುಟಿ ಸಮಸ್ಯೆ, ತಂಪಾದ ಗಾಳಿಯಿಂದಾಗಿ ತುಟಿಗಳು ಒಣಗುತ್ತವೆ. ಹಾಗಾಗಿ ಈ ಸಮಸ್ಯೆ ತೊಡೆದು ಹಾಕಲು ಚಳಿಗಾಲದಲ್ಲಿ ಮಾಯಿಶ್ಚರೈಸರ್‌ ಹಚ್ಚಿರಿ.

Advertisement

ಕೀಲು ನೋವು, ಸಂಧಿವಾತದ ನೋವು

ಈ ಸಮಯದಲ್ಲಿ ಕೀಲು ನೋವು ಸಮಸ್ಯೆ, ಸಂಧಿವಾತ ಸಮಸ್ಯೆ ರೋಗಿಗಳನ್ನು ಕಾಡುತ್ತದೆ. ತಾಪಮಾನ ಇಳಿಕೆ ಕೀಲು ನೋವಿಗೆ ಕಾರಣವಾಗುತ್ತದೆ. ಚಳಿ ಹೆಚ್ಚಾಗುತ್ತಿದ್ದಂತೆ ಮಂಡಿಗಳಲ್ಲಿ, ಕೈಗಳಲ್ಲಿ ನೋವು ಕಾಣಿಸಲಾರಂಭಿಸುತ್ತದೆ. ಈ ಸಮಸ್ಯೆಗೆ ಉಣ್ಣೆಯ ಬೆಚ್ಚಗಿನ ಬಟ್ಟೆ ಧರಿಸಿ. ವ್ಯಾಯಾಮ ಮಾಡುವುದು ತುಂಬಾ ಒಳ್ಳೆಯದು. ದೇಹ ಬೆಚ್ಚಗಿರಲು ತಂಪಾದ ಆಹಾರಕ್ಕಿಂತ ಬಿಸಿ ಆಹಾರವನ್ನು ಹೆಚ್ಚಾಗಿ ಸೇವಿಸಿ.

ಖಿನ್ನತೆ

ಈ ವಾತಾವರಣದಲ್ಲಿ ಒಂದು ರೀತಿಯ ಉದಾಸೀನ ಮೂಡುವುದು ಸಾಮಾನ್ಯ. ಆದರೆ ಕೆಲವರಲ್ಲಿ ಖಿನ್ನತೆ ಹೆಚ್ಚಿಸುತ್ತಿದ್ದು, ಯಾವುದೇ ಕೆಲಸ ಮಾಡಲು ಆಸಕ್ತಿ ಮೂಡುವುದಿಲ್ಲ. ಈ ಉದಾಸೀನತೆಯಿಂದ ದೂರವಿರಲು ಬಿಸಿಲಿಗೆ ಮೈಯೊಡ್ಡಬೇಕು. ಇದು ಆರೋಗ್ಯ ವೃದ್ಧಿಸಲು ತುಂಬಾ ಸಹಕಾರಿ. ನಿಮ್ಮನ್ನು ನೀವು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಒಳ್ಳೆಯದು.

ಉಸಿರಾಟದ ತೊಂದರೆ

ಚಳಿಗಾಲದಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಶೀತ, ನೆಗಡಿಯಿಂದ ಕಟ್ಟಿದ ಮೂಗು, ಕೆಮ್ಮು ಕೂಡ ಆರಂಭವಾಗುತ್ತದೆ. ಚಳಿಗಾಲದಲ್ಲಿ ಶೀತ ಗಾಳಿಯು ನೇರವಾಗಿ ಉಸಿರಾಟದ ಪ್ರದೇಶವನ್ನು ಆಕ್ರಮಿಸುತ್ತದೆ. ಇದರಿಂದಾಗಿ ಮೂಗು ಕಟ್ಟುವಿಕೆ, ಸ್ರವಿಸುವ ಮೂಗು, ಕೆಮ್ಮು ಮುಂತಾದ ಸಮಸ್ಯೆಗಳು ಬರಬಹುದು.

ಅಸ್ತಮಾ

ಚಳಿಗಾಲದ ಹವಾಮಾನದಲ್ಲಿ ಅಸ್ತಮಾ ಸಮಸ್ಯೆ ಕಾಡುತ್ತದೆ. ಶ್ವಾಸಕೋಶ ಸಮಸ್ಯೆ ಉಂಟಾಗುತ್ತದೆ. ಚಳಿಗಾಲದಲ್ಲಿ ಉಸಿರಾಟ ಸಮಸ್ಯೆ ಉಂಟಾಗುತ್ತದೆ. ಗಾಳಿಯಲ್ಲಿ ಬಹಳಷ್ಟು ಅಲರ್ಜಿನ್‌ ಗಳಿವೆ. ಇದು ಅಸ್ತಮಾ ಉಂಟಾಗಲು ಮುಖ್ಯ ಕಾರಣ. ವಿಷಕಾರಿ ಅಂಶಗಳನ್ನು ಉಸಿರಾಡುವುದನ್ನು ತಪ್ಪಿಸಿ. ಮಾಸ್ಕ್ ಧರಿಸಿ.

ಒತ್ತಡ ಸಮಸ್ಯೆ

ಅನೇಕ ಜನರು ಚಳಿಗಾಲದಲ್ಲಿ ಒತ್ತಡ ಸಮಸ್ಯೆ ಅನುಭವಿಸುತ್ತಾರೆ. ಇದನ್ನು ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ ಎನ್ನಲಾಗುತ್ತದೆ. ಒತ್ತಡ ಸಂಬಂಧಿ ಕಾಯಿಲೆಗಳು ಕಡಿಮೆ ಮಾಡಲು ಕ್ರಿಯಾಶೀಲರಾಗಿರಿ. ಚಟುವಟಿಕೆಯಿಂದ ಇರಬೇಕು. ಏಕಾಗ್ರತೆ ಸಾಧಿಸಲು ಧ್ಯಾನ, ಯೋಗ ಮಾಡಿ.

ಗಂಟಲಿನ ಸಮಸ್ಯೆ

ಚಳಿಗಾಲದಲ್ಲಿ ನೆಗಡಿ, ಕೆಮ್ಮು ಉಂಟಾಗುವುದರಿಂದ ಗಂಟಲು ಸಮಸ್ಯೆ ಸಾಮಾನ್ಯ.  ಗಂಟಲು ಕಿರಿ ಕಿರಿ, ನೋವು ಉಂಟಾಗುವ ಸಾಧ್ಯತೆ ಹೆಚ್ಚು. ವೈರಲ್ ಸೋಂಕಿನಿಂದಾಗಿ ಗಂಟಲಿನ ಬಾವು ಕೂಡ ಆಗಬಹುದು. ಇದು ಗಂಟಲಿನಲ್ಲಿ ನೋವನ್ನು ಉಂಟುಮಾಡುತ್ತದೆ.  ವೈರಲ್ ಸೋಂಕು ಗಂಟಲು, ಶೀತ ಮತ್ತು ಜ್ವರಕ್ಕೆ ಕಾರಣವಾಗುತ್ತದೆ. ಇದನ್ನ ತಡೆಯಲು ಆರೋಗ್ಯಕರ ಆಹಾರ ಸೇವನೆ ಮುಖ್ಯ. ಆದಷ್ಟು ಬಿಸಿ ಆಹಾರ ಪದಾರ್ಥ ಸೇವನೆ ರೂಢಿಸಿಕೊಳ್ಳಿ. ಸಾಧ್ಯವಾದರೆ ಬೆಚ್ಚಗಿನ ನೀರು ಕುಡಿಯಿರಿ. ಗಂಟಲು ಕಿರಿ ಕಿರಿ, ನೋವು ಇದ್ದರೇ ಬೆಚ್ಚಗಿನ ನೀರಿನಲ್ಲಿ ಉಪ್ಪು ಬೆರೆಸಿ ಆ ನೀರಿನಿಂದ ಗಂಟಲು ಮುಕ್ಕಳಿಸಿ. ಸಮಸ್ಯೆ ಪರಿಹಾರ ಸಾಧ್ಯ.

ಚಳಿಗಾಲದಲ್ಲಿ ಇದನ್ನು ಪಾಲಿಸಿ, ಆರೋಗ್ಯವಂತರಾಗಿರಿ:

  • ತಂಪು ಅಥವಾ ಫ್ರಿಜ್ ನಲ್ಲಿರವ ಆಹಾರ ಬಳಸದೆ ಬಿಸಿ ಬಿಸಿ ಆಹಾರ ಸೇವಿಸಿ. ಬಿಸಿ ನೀರು ಕುಡಿಯಿರಿ.
  • ಎಣ್ಣೆ ಹೆಚ್ಚಾಗಿ ಹಾಕಿದ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಕರಿದ ತಿಂಡಿಗಳನ್ನು ಸೇವಿಸಬೇಡಿ.
  • ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ ಕರಿಮೆಣಸಿನ ಬಳಕೆ ಆಹಾರ ಪದಾರ್ಥದಲ್ಲಿ ಹೆಚ್ಚಾಗಿ ಬಳಸಿ.
  • ಬೆಚ್ಚಗಿರುವ, ಉಣ್ಣೆಯ ಬಟ್ಟೆಗಳನ್ನು ಧರಿಸಿ
  • ಒಣ ಚರ್ಮದ ಸಮಸ್ಯೆ ಹೆಚ್ಚಾಗಿರುವುದರಿಂದ ಕೊಬ್ಬರಿ ಎಣ್ಣೆಯನ್ನು ಮೈ ಕೈಗೆ ಹಚ್ಚಿ.
  • ಜ್ವರ, ಶೀತ, ನೆಗಡಿ, ಕೆಮ್ಮು ಕಾಣಿಸಿಕೊಂಡಾಗ ನಿರ್ಲಕ್ಷಿಸದೆ ಆಸ್ಪತ್ರಗೆ ಭೇಟಿ ನೀಡಿ.

– ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next