Advertisement

ಅಂಜೂರ ಅಂಜದೆ ಬೆಳೆಯಿರಿ

10:12 PM May 11, 2019 | Sriram |

ಕಡಿಮೆ ಖರ್ಚಿನಲ್ಲಿ, ಏನೂ ಕಿರಿಕಿರಿ ಇಲ್ಲದೇ ಬೆಳೆಯಬಹುದಾದ ತೋಟಗಾರಿಕಾ ಬೆಳೆಗಳಲ್ಲಿ ಅಂಜೂರ ಕೂಡ ಒಂದು. ನಾಟಿ ಮಾಡುವಾಗ ಬೇಕಾಗುವ ಕೊಟ್ಟಿಗೆ ಗೊಬ್ಬರ ಹಾಗೂ ಒಮ್ಮೆ ಅಂಜೂರದ ಗೂಟಿ ಖರೀದಿಸಿ ನಾಟಿ ಮಾಡಿದಿರೆಂದರೆ ಮುಗಿಯಿತು, ಬೇರೇನೂ ದೊಡ್ಡ ಖರ್ಚು ಇಲ್ಲ. ಶೇ. 45ರಿಂದ 65ರಷ್ಟು ಸಕ್ಕರೆ ಅಂಶ ಹೊಂದಿರುವ, ಕ್ಯಾಲ್ಸಿಯಂ, ಕಬ್ಬಿಣ, ಎ ವಿಟಮಿನ್‌ ಒಳಗೊಂಡಿರುವ ಅಂಜೂರ ಹಣ್ಣು, ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ. ಹಣ್ಣುಗಳಷ್ಟೇ ಅಲ್ಲದೇ, ಒಣಗಿದ ರೂಪದಲ್ಲೂ ಅಂಜೂರ ಬಳಕೆಯಲ್ಲಿದೆ. ನೀರು ಬಸಿದು ಹೋಗುವಂಥ ಯಾವುದೇ ಮಣ್ಣಿನಲ್ಲೂ ಇದು ಬೆಳೆಯುತ್ತದೆ, ಭೂಮಿಯಲ್ಲಿ ಕ್ಲೋರೈಡ್‌ ಮತ್ತು ಸಲ್ಫೆàಟ್‌ ಉಪ್ಪಿನಾಂಶವಿದ್ದರೆ ಅದನ್ನೂ ಸಹಿಸಿಕೊಂಡು ಬೆಳೆಯಬಲ್ಲದು.

Advertisement

ನಾಟಿ
ಜಮೀನನ್ನು ಸಮತಟ್ಟಾಗಿ ಉಳುಮೆ ಮಾಡಿದ ಮೇಲೆ ಗಿಡದಿಂದ ಗಿಡಕ್ಕೆ ಹತ್ತು ಅಡಿ, ಸಾಲಿನಿಂದ ಸಾಲಿಗೆ ಹನ್ನೆರಡು ಅಡಿ ಅಂತರ ಕೊಟ್ಟು ಗುರುತು ಮಾಡಿಕೊಳ್ಳಬೇಕು. ಆ ಜಾಗದಲ್ಲಿ ಎರಡು ಅಡಿ ಅಗಲ, ಎರಡು ಅಡಿ ಉದ್ದ, ಎರಡು ಅಡಿ ಆಳದ ಗುಣಿ ತೆಗೆಸಬೇಕು. ಮಣ್ಣು ಕೊಟ್ಟಿಗೆ ಗೊಬ್ಬರ ಹಾಗೂ ಮಣ್ಣನ್ನು ಸಮಪ್ರಮಾಣದಲ್ಲಿ ಬೆರೆಸಿ ಅದರಿಂದ ಈ ಗುಣಿಯನ್ನು ತುಂಬಬೇಕು.

ಅನಂತರ ಹನಿ ನೀರಾವರಿ ಅಳವಡಿಸಿ ಗೂಟಿ ನಾಟಿ ಮಾಡಬೇಕು. ಕಾಂಡ ಹಾಗೂ ಗೂಟಿ ಎರಡರಿಂದಲೂ ಸಸ್ಯಾಭಿವೃದ್ಧಿ ಸಾಧ್ಯವಿದೆ. ಹೆಚ್ಚು ರೈತರು ಗೂಟಿಯನ್ನೇ ನಾಟಿ ಮಾಡುವರು. ಅಂದಾಜು ಇಪ್ಪತ್ತು ರೂಪಾಯಿಗೆ ಒಂದು ಸಿಗುತ್ತದೆ. ಜೂನ್‌- ಜುಲೈ ನಾಟಿ ಮಾಡಲು ಪ್ರಶಸ್ತ ಸಮಯ.

ನಿರ್ವಹಣೆ
ಅಂಜೂರ ಬರಗಾಲವನ್ನು ತಡೆದುಕೊಳ್ಳುವಂಥ ಗಿಡವಾದರೂ ಬೇಸಗೆಯಲ್ಲಿ ಇದಕ್ಕೆ ವಾರಕ್ಕೆ ಒಮ್ಮೆಯಾದರೂ ಸ್ವಲ್ಪ ನೀರು ಕೊಡಬೇಕು. ಸಾವಯವ ಕೃಷಿಯಾಗಿದ್ದರೆ ತಿಂಗಳಿಗೊಮ್ಮೆ ಜೀವಾಮೃತ ಸಿಂಪರಿಸುವುದನ್ನು ತಪ್ಪಿಸಬಾರದು. ಹಾಗೆಯೇ, ಗಿಡದ ಬುಡಕ್ಕೂ ಜೀವಾಮೃತ ಉಣಿಸಬೇಕು. ಜಾಸ್ತಿ ಕಸ ಬೆಳೆಯದಂತೆ ನಿಯಂತ್ರಿಸುತ್ತಾ ಕನಿಷ್ಠ ನಾಲ್ಕು ತಿಂಗಳಿಗೊಮ್ಮೆ ಪಾತಿ ಮಾಡಿ ಮೂರ್ನಾಲ್ಕು ಕೆ.ಜಿ.ಯಷ್ಟು ಎರೆಹುಳು ಗೊಬ್ಬರ ಕೊಡುತ್ತಿರಿ.

ರಾಸಾಯನಿಕ ಕೃಷಿ ಮಾಡುವುದಾದರೆ, ಮೊದಲ ಎರಡು ವರ್ಷ ಒಂದು ಗಿಡಕ್ಕೆ ವರ್ಷಕ್ಕೊಮ್ಮೆ 75 ಗ್ರಾಂ ಯೂರಿಯಾ, 50 ಗ್ರಾಂ ಡಿ.ಎ.ಪಿ., 50 ಗ್ರಾಂ ಪೊಟ್ಯಾಷ್‌ ಕೊಡಿ. ಅನಂತರದ ವರ್ಷಗಳಲ್ಲಿ ಈ ಪ್ರಮಾಣವನ್ನು ಡಬಲ್‌ ಮಾಡಿ. ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಹೀಗೆ ಎರಡು ಸಲ ಬೆಡ್‌ ಮಾಡಿ, ಅಂದರೆ ಬುಡಗಳಿಗೆ ಕಾಂಪೋÓr… ಗೊಬ್ಬರ ಹಾಕಿ ಮಣ್ಣು ಎತ್ತರಿಸಿ, ಆರನೇ ತಿಂಗಳಲ್ಲಿ ಬೆಡ್‌ ಮಾಡುವಾಗ ಟ್ರಾÂಕ್ಟರ್‌ ಮೂಲಕ ಮಾಡಿ, ಅದೇ ಕೊನೆ, ಮತ್ತೆ ಜಮೀನಿನಲ್ಲಿ ಟ್ರಾÂಕ್ಟರ್‌ ಹಾಯಿಸಲು ಬರುವುದಿಲ್ಲ.

Advertisement

ಸವರುವಿಕೆ
ಅಂಜೂರದಲ್ಲಿ ಸವರುವಿಕೆ ಅತ್ಯಂತ ಪ್ರಮುಖ. ಹಾಗೇ ಬಿಟ್ಟರೆ ಅಂಜೂರ ಗಿಡ ತೆಳ್ಳಗೆ ಉದ್ದನಾಗಿ ಬೆಳೆದುಬಿಡುತ್ತೆ, ಹೀಗಾದರೆ ಹಣ್ಣಿನ ಇಳುವರಿ ಅರ್ಧಕ್ಕರ್ಧ ಕುಂಠಿತವಾಗುವುದರ ಜತೆಗೆ ಹಣ್ಣು ಕೀಳಲು ಸಹ ಆಗುವುದಿಲ್ಲ. ಈ ಕಾರಣಕ್ಕೆ ವರ್ಷಕ್ಕೊಮ್ಮೆ ಗಿಡಗಳನ್ನು ಸವರಿ ಒಂದು ಗಿಡಕ್ಕೆ 5- 6 ಪ್ರಮುಖ ರೆಂಬೆಗಳಿರುವಂತೆ ನೋಡಿಕೊಳ್ಳಿ. ಜತೆಗೆ ಹಣ್ಣಾದ, ನಿರ್ಜೀವ ಎಲೆ ಹಾಗೂ ರೆಂಬೆಗಳನ್ನು ಆಗಾಗ ತೆಗೆದು ಸ್ವತ್ಛಗೊಳಿಸಿ. ಇಲ್ಲವೆಂದರೆ, ಈ ಎಲೆಗಳ ಮೇಲೆ ಧೂಳು ಹಾಗೂ ಫ‌ಂಗಸ್‌ ಬೆಳೆದು ರೋಗಗಳಿಗೆ ಎಡೆಮಾಡಿಕೊಡುತ್ತದೆ.

ಇಳುವರಿ
ನೀಟಾಗಿ ನಿರ್ವಹಣೆ ಮಾಡಿದರೆ ಎಕರೆಗೆ ಒಂದು ವರ್ಷಕ್ಕೆ ಎಂಟು ಟನ್‌ ಹಣ್ಣಿನ ಇಳುವರಿ ಖಚಿತ. ಕೆಲಸ ಕಡಿಮೆಯಾದ್ದರಿಂದ ಆದಷ್ಟು ಮನೆಯವರೇ ನಿರ್ವಹಣೆ ಮಾಡುವುದು ಒಳ್ಳೆಯದು. ದರದ ವಿಷಯಕ್ಕೆ ಬಂದರೆ ಅಂಜೂರ ಪ್ರತಿ ಕ್ವಿಂಟಾಲ್‌ಗೆ ತೀರ ಕಡಿಮೆ ಅಂದರೂ 700ರಿಂದ ಹಿಡಿದು 4,000 ರೂ. ವರೆಗೆ ಮಾರಾಟ ಆಗುವುದು.

–  ಎಸ್‌.ಕೆ.ಪಾಟೀಲ್‌

Advertisement

Udayavani is now on Telegram. Click here to join our channel and stay updated with the latest news.

Next