Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ರಿ ಡೂ ಹೆಸರಿನಲ್ಲಿ ಡಿ ನೋಟಿಫಿಕೇಶನ್ ಮಾಡಿದ್ದಾರೆಂದು ನೇರವಾಗಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನ್ಯಾ.ಕೆಂಪಣ್ಣ ಆಯೋಗವನ್ನು ರಚಿಸಲಾಗಿತ್ತು. ಎರಡು ವರ್ಷ ವಿಚಾರಣೆ ನಡೆಸಿ ಆಗಸ್ಟ್‌ನಲ್ಲಿ ವರದಿ ನೀಡಿದ್ದು, ವರದಿಯಲ್ಲಿ ಬಿಡಿಎ ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿದ್ದಾರೆಂಬ ಅಂಶ ಸೇರಿಸಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಅಲ್ಲದೇ ಸಿಎಂ ಸಿದ್ದರಾಮಯ್ಯ ವಿರುದ್ಧ ಕ್ಲೀನ್‌ಚಿಟ್ ಕೊಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ವರದಿಯನ್ನು ಸರ್ಕಾರ ಸದನದಲ್ಲಿಯೂ ಮಂಡಿಸದೇ, ಅದರ ಮೇಲೆ ಕ್ರಮ ಕೈಗೊಳ್ಳುವ ಬದಲು ಅಭಿವೃದ್ಧಿಆಯುಕ್ತರ ಅಧ್ಯಕ್ಷತೆ ಯಲ್ಲಿ ಅಧಿಕಾರಿಗಳ ಸಮಿತಿ ರಚನೆ ಮಾಡಿದ್ದು, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ಸಮಿತಿಗೆ ಸಲಹೆ ನೀಡಲು ಕೆಂಪಣ್ಣ ಆಯೋಗದ ಕಾರ್ಯದರ್ಶಿಯಾಗಿದ್ದ ಜಿಲ್ಲಾ ನಿವೃತ್ತ ನ್ಯಾಯಾಧೀಶ ಶ್ರೀವತ್ಸ ಕೆದಿಲಾಯ್ ಅವರನ್ನು ಸರ್ಕಾರ ನೇಮಿಸಿದೆ. ಕೆಂಪಣ್ಣ
ಆಯೋಗದ ವರದಿಯಲ್ಲಿ ಸಾಧಕ ಬಾಧಕಗಳ ಪರಿಶೀಲನೆ ನಡೆಸಿ, ಸರ್ಕಾರ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ. ಸಮಿತಿ ವರದಿ ಸಲ್ಲಿಸಲು ಯಾವುದೇ ಸಮಯ ನಿಗದಿ ಪಡಿಸಿಲ್ಲ. ಹೀಗಾಗಿ ಸರ್ಕಾರ ಈ ಸಮಿತಿಯನ್ನು ಮುಂದಿಟ್ಟು ಕೊಂಡು ಕೆಂಪಣ್ಣ ಆಯೋಗದ ವರದಿಯನ್ನು ಮುಚ್ಚಿ ಹಾಕುವ ಪ್ರಯತ್ನಕ್ಕೆ ಮುಂದಾಗಿದೆಯಾ ಎಂಬ ಅನುಮಾನಗಳು ಬಲಗೊಳ್ಳುವಂತೆ ಮಾಡಿದೆ.
ಒಟ್ಟು 9,449 ಪುಟಗಳ ವರದಿ ಸರ್ಕಾರಕ್ಕೆ ಸಲ್ಲಿಕೆ
ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಡಿಸಿಕೊಳ್ಳಲಾ ಗಿದ್ದ ಬೆಂಗಳೂರು ಸುತ್ತಮುತ್ತಲಿನ 16 ಗ್ರಾಮಗಳ ವಿವಿಧ ಸರ್ವೇ ನಂಬರ್‌ಗಳಲ್ಲಿನ ಒಟ್ಟು ಜಮೀನಿನ ಪೈಕಿ 2004ರ ಫೆ.23ರಿಂದ 2014ರ ಜು.18ರವರೆಗೆ ನಡೆದಿದೆ ಎನ್ನಲಾದ 981.31 ಎಕರೆ ಜಮೀನು ಡಿನೋಟಿಫಿಕೇಷನ್ ಪ್ರಕರಣಗಳ ವಿಚಾರಣೆಗೆ 2014ರ ಆಗಸ್ಟ್ 16ಕ್ಕೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ನೇತೃತ್ವದಲ್ಲಿ ಆಯೋಗ ರಚಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ, 2014ರ ನವೆಂಬರ್ 1ರಿಂದ ಆಯೋಗದ ಅಧ್ಯಕ್ಷರು ಅಧಿಕಾರ ವಹಿಸಿಕೊಂಡರು. ವರದಿ ನೀಡಲು ಮೊದಲು 6 ತಿಂಗಳು ಕಾಲಾವಕಾಶ ನೀಡಲಾಗಿತ್ತು. ಆದರೆ,
ಒಟ್ಟು 6 ಬಾರಿ ಆಯೋಗದ ಅವಧಿಯನ್ನು ವಿಸ್ತರಿಸಲಾಗಿತ್ತು. ಕೊನೆಗೆ ಮೂರು ವರ್ಷಗಳ ಬಳಿಕ 2017ರ ಆ.23ಕ್ಕೆ ಒಟ್ಟು 9,449 ಪುಟಗಳ ವರದಿಯನ್ನು ಆಯೋಗ ಸರ್ಕಾರಕ್ಕೆ ಸಲ್ಲಿಸಿತು. ಆಯೋಗವು ಮೂರು ವರ್ಷಗಳ ಅವಧಿಯಲ್ಲಿ ಬಿಡಿಎ ಸಲ್ಲಿಸಿದ 1,129 ಹಾಗೂ ನಗರಾಭಿವೃದ್ದಿ ಇಲಾಖೆ ಸಲ್ಲಿಸಿದ್ದ 44 ಕಡತಗಳ ಪರಿಶೀಲನೆ ನಡೆಸಿ, 168 ದಿನ ಸಾಕ್ಷಿಗಳ ವಿಚಾರಣೆ, 38 ದಿನ ವಕೀಲರ ವಾದ-ಪ್ರತಿವಾದ ನಡೆಯಿತು. ಆದರೆ, ಆಯೋಗದಿಂದ ಸಾಕಷ್ಟು ಕಾಲಾವಕಾಶ ಕೊಟ್ಟರೂ 44 ದೂರುದಾರರ ಪೈಕಿ ಯಾರೊಬ್ಬರು ಖುದ್ದಾಗಿ ಆಯೋಗದ ಮುಂದೆ ಹಾಜರಾಗಿ ಮೌಖೀಕ ಸಾಕ್ಷಿ ಹೇಳಿಲ್ಲ. ದೂರುದಾರರ ವಕೀಲರು ಮಾತ್ರ ವಿಚಾರಣೆ ಹಾಜರಾಗಿದ್ದರು. ಆಯೋಗಕ್ಕೆ ಮೂರು ವರ್ಷಗಳಲ್ಲಿ ಸರ್ಕಾರ 2.70 ಕೋಟಿ ರೂ. ನೀಡಿತ್ತು.