Advertisement

ಸಮಿತಿ ಕಾರ್ಯಕ್ರಮಗಳಿಗೆ ನನ್ನ ಸಹಕಾರ: ಡಾ|ರೇಣುಕಾ ಬಿ. ಅಮೀನ್‌

06:33 PM Feb 23, 2020 | Suhan S |

ಮುಂಬಯಿ, ಫೆ. 22: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಂಧೇರಿ ಸ್ಥಳೀಯ ಕಚೇರಿಯಲ್ಲಿ ಮಹಿಳಾ ವಿಭಾಗದವರಿಂದ ಅರಸಿನ ಕುಂಕುಮ ಕಾರ್ಯಕ್ರಮವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ| ರೇಣುಕಾ ಬಿಸ್ವಜಿತ್‌ ಅಮೀನ್‌ ಹಾಗೂ ಮಹಿಳಾ ಸದಸ್ಯೆಯರು ಗುರುದೇವರಿಗೆ ಆರತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಸಮಿತಿ ಸದಸ್ಯರಿಂದ ಹಾಗೂ ಪ್ರಸಿದ್ಧ ಗಾಯಕ ಸತೀಶ್‌ ಪೂಜಾರಿ ಚೆಂಬೂರು ಇವರಿಂದ ಭಕ್ತಿಪೂರ್ವಕ ಭಜನೆ ನಡೆಯಿತು. ನಂತರ ಜರಗಿದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕೇಂದ್ರ ಸಮಿತಿಯ ಮಹಿಳಾ ವಿಭಾಗದ ಉಪಾಧ್ಯಕ್ಷೆ ಗಿರಿಜಾ ಚಂದ್ರಶೇಖರ್‌ ಇವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಡಾ| ರೇಣುಕಾ ಬಿಸ್ವಜಿತ್‌ ಅಮೀನ್‌, ಅತಿಥಿಗಳಾಗಿ ಅಂಧೇರಿ ಸಮಿತಿಯ ಗೌರವಾಧ್ಯಕ್ಷ ಬಾಬು ಕೆ. ಪೂಜಾರಿ ಅವರ ಪುತ್ರಿ ವಿದ್ಯಾ ಜಿ. ಪೂಜಾರಿ, ಕೇಂದ್ರ ಸಮಿತಿ ಸದಸ್ಯೆ ರೇಖಾ ಸದಾನಂದ್‌, ಕೇಂದ್ರ ಸಮಿತಿಯಲ್ಲಿ ಅಂಧೇರಿಯ ಪ್ರತಿನಿಧಿಯಾದ ಸುಜಾತಾ ದಿನೇಶ್‌ ಪೂಜಾರಿ, ಲತಾ ಸುರೇಶ್‌ ಸುವರ್ಣ ಹಾಗೂ ಸರಿತಾ ಎಂ. ಶೆಟ್ಟಿ ಉಪಸ್ಥಿತರಿದ್ದರು.

ಡಾ| ರೇಣುಕಾ ಬಿಸ್ವಜಿತ್‌ ಅಮೀನ್‌ ಮಾತನಾಡಿ, ನನ್ನ ತಂದೆಯವರು ಹಲವು ವರುಷಗಳಿಂದ ಬಿಲ್ಲವರ ಅಸೋಸಿಯೇಶನ್‌ ನಲ್ಲಿ ಸೇವೆ ಮಾಡುತ್ತಿದ್ದಾರೆ. ಅವರ ನೆರಳಲ್ಲಿ ನನಗೂ ಸಮಾಜ ಸೇವೆ ಮಾಡುವಂತಹ ಭಾಗ್ಯ ಒದಗಿದೆ. ವೈದ್ಯಕೀಯ ಹಾಗೂ ಸಮಾಜ ಸೇವೆ ಮಾಡಲು ಬಹಳ ಸಂತೋಷವಾಗುತ್ತಿದೆ. ಅಂಧೇರಿ ಸಮಿತಿಗೆ ನನ್ನಿಂದಾಗಬಹುದಾದ ಸಹಾಯವನ್ನು ಖಂಡಿತ ಮಾಡುವುದಾಗಿ ತಿಳಿಸಿದರು. ವೇದಿಕೆಯಲ್ಲಿದ್ದ ಅತಿಥಿ-ಗಣ್ಯರು ಮಾತನಾಡಿ ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಗಿರಿಜಾ ಚಂದ್ರಶೇಖರ್‌ ಅವರು ಮಾತನಾಡಿ, ನಾವು ಸುಮಂಗಲೆಯರೆಲ್ಲರೂ ಅರಸಿನ ಕುಂಕುಮ ಕಾರ್ಯಕ್ರಮಕ್ಕೆ ಬರುವಾಗ ಹಣೆಯಲ್ಲಿ ಕುಂಕುಮವನ್ನು ಧರಿಸಬೇಕು, ಪ್ಲಾಸ್ಟಿಕ್‌ ಕುಂಕುಮಗಳನ್ನು ತ್ಯಜಿಸಬೇಕು ಹಾಗೂ ನಮ್ಮ ಮಕ್ಕಳನ್ನು ಸಂಸ್ಕಾರಯುತರಾಗಿ ಬೆಳೆಸಲು ಪ್ರಯತ್ನಿಸಿ ಅವರಿಗೆ ಒಳ್ಳೆಯ ಆಹಾರವನ್ನು ನೀಡುವತ್ತ ಕಾಳಜಿ ವಹಿಸಬೇಕು ಎಂದು ತಿಳಿಸಿ ಶುಭ ಹಾರೈಸಿದರು.

Advertisement

ಅಂಧೇರಿ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಎಸ್‌. ಕೋಟ್ಯಾನ್‌ ಅವರು ಮಾತನಾಡಿ, ಈ ಕಾರ್ಯಕ್ರಮವನ್ನು ಮತ್ತು ಇಲ್ಲಿ ಭಾಗವಹಿಸಿರುವ ಮಹಿಳೆಯರ ಸಂಖ್ಯೆಯನ್ನು ನೋಡಿ ತುಂಬಾ ಸಂತೋಷವಾಗುತ್ತಿದೆ, ಇಲ್ಲಿ ನಡೆಯುವಂತಹ ಪ್ರತಿಯೊಂದು ಕಾರ್ಯಕ್ರಮದಲ್ಲೂ ತಾವೆಲ್ಲರೂ ಇದೇ ರೀತಿಯಲ್ಲಿ ಸಹಭಾಗಿಗಳಾಗಬೇಕು ಎಂದು ನುಡಿದು ಗುರುದೇವರ ಆಶೀರ್ವಾದ ಸದಾ ನಿಮ್ಮೆಲ್ಲರ ಮೇಲಿರಲಿ ಎಂದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶಾರದಾ ಅಂಚನ್‌ ಅವರು ಅರಸಿನ ಕುಂಕುಮದ ಮಹತ್ವವನ್ನು ತಿಳಿಸಿದರು. ಲಘು ಉಪಹಾರದ ವ್ಯವಸ್ಥೆಯನ್ನು ಮಾಧವ ಪೂಜಾರಿಯವರು ಮಾಡಿದ್ದರು. ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಗೌರವಾಧ್ಯಕ್ಷರಾದ ಬಾಬು ಕೆ. ಪೂಜಾರಿ, ಉಪಾಧ್ಯಕ್ಷರಾದ ಸುರೇಶ್‌ ಬಿ. ಸುವರ್ಣ, ಜಗನ್ನಾಥ್‌ ಕರ್ಕೇರ, ಗೌರವ ಕೋಶಾಧಿಕಾರಿಗಳಾದ ಸುಧಾಕರ್‌ ಜತ್ತನ್‌ ಹಾಗೂ ಸದಸ್ಯರು, ಮಹಿಳಾ ವಿಭಾಗದ ಮತ್ತು ಯುವ ವಿಭಾಗದ ಸದಸ್ಯರು ಸಹಕರಿಸಿದರು. ಗೌರವ ಕಾರ್ಯದರ್ಶಿ ಹರೀಶ್‌ ಶಾಂತಿ ಹೆಜ್ಜಾಡಿ ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next