Advertisement
ಈ ಹಿಂದೆಯೇ “ಮೇಯರ್ ಇನ್ ಕೌನ್ಸಿಲ್ ವ್ಯವಸ್ಥೆ’ ಬಗ್ಗೆ ರಾಜಕೀಯ ವಲಯದಲ್ಲಿ ಪ್ರಸ್ತಾವಾಗಿತ್ತು. ಬಿಬಿಎಂಪಿ ವಿಭಜನೆ ಹೊರತಾದ ಸರ್ಕಾರಕ್ಕೆ ಇರುವುದು ಬೇರೆ ಆಯ್ಕೆ ಎಂದಾದರೆ ಅದು “ಮೇಯರ್ ಇನ್ ಕೌನ್ಸಿಲ್ ವ್ಯವಸ್ಥೆ’ ಎಂದು ಕಸ್ತೂರಿ ರಂಗನ್ ಸಮಿತಿ ಈ ಹಿಂದೆಯೇ ಹೇಳಿತ್ತು. ಬಿಜೆಪಿ ಕೂಡ ಈ ಹಿಂದೆ ಬಿಬಿಎಂಪಿ ವಿಭಜನೆಗೆ ತೀವ್ರ ವಿರೋಧ ಮಾಡಿತ್ತು. ಮೇಯರ್ ಇನ್ ಕೌನ್ಸಿಲ್‌ಗೆ ವ್ಯವಸ್ಥೆ ಜಾರಿಗೆ ಒತ್ತಾಯ ಮಾಡಿತ್ತು. ಇದೀಗ ತಮ್ಮ ಆ ಹಿಂದಿನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪಾಲಿಕೆ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಹೇಳುತ್ತಾರೆ.
Related Articles
Advertisement
ಏನಿದು ಮೇಯರ್ ಇನ್ ಕೌನ್ಸಿಲ್ ವ್ಯವಸ್ಥೆ?: ದೊಡ್ಡ ದೊಡ್ಡ ನಗರದಲ್ಲಿ ಈಗಾಗಲೇ ಮೇಯರ್ ಇನ್ ಕೌನ್ಸಿಲ್ ವ್ಯವಸ್ಥೆ ಇದೆ. ಮೇಯರ್ ಇನ್ ಕೌನ್ಸಿಲ್ ಎಂಬುವುದು ಸ್ಥಳೀಯ ಆಡಳಿತವಾಗಿರುತ್ತದೆ. ಪಾಲಿಕೆ ಸದಸ್ಯರ ಜತೆಗೆ ಮೇಯರ್‌ಗಳನ್ನು ಜನರು ನೇರವಾಗಿ ಆಯ್ಕೆ ಮಾಡುತ್ತಾರೆ. ಆಡಳಿತದಲ್ಲಿ ಸುಪ್ರೀಂ ನಿರ್ಧಾರಗಳನ್ನು ಮೇಯರ್ ತೆಗೆದುಕೊಳ್ಳುವ ಅಧಿಕಾರವಿದೆ. ಮೇಯರ್ ಮುಖ್ಯಮಂತ್ರಿ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ರಾಜ್ಯದ ಮುಖ್ಯಮಂತ್ರಿಗಳು ಈ ಕಮಿಟಿಯಲ್ಲಿ ಇರುತ್ತಾರೆ. ಮೇಯರ್‌ಗೆ ಐದು ವರ್ಷಗಳ ಅಧಿಕಾರವಧಿಯಿದ್ದು ದಕ್ಷತೆಯಿಂದ ಕೆಲಸ ಮಾಡಲು ಇದು ಸಹಾಯವಾಗಲಿದೆ. ಈ ವ್ಯವಸ್ಥೆ ಅಲಹಬಾದ್, ಬೃಹನ್ ಮುಂಬೈ, ಕೋಲ್ಕತಾ, ಚೆನ್ನೈ ಸೇರಿದಂತೆ ದೇಶ ಹಲವು ಮಹಾನಗರಗಳಲ್ಲಿ ಇದೆ.
800 ಚದರ ಕಿ.ಮೀ. ವ್ಯಾಪ್ತಿ ಜತೆಗೆ 110 ಹಳ್ಳಿಗಳು ಸೇರ್ಪಡೆ : 2007ರಲ್ಲಿ ಬೆಂಗಳೂರು 200 ಚದರ ಕಿಲೋಮಿಟರ್ ವ್ಯಾಪ್ತಿ ಹೊಂದಿತ್ತು. ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ವಿಸ್ತಾರ ಪಡೆದುಕೊಂಡಿದೆ. ಸುಮಾರು 800 ಚದರ ಕಿಲೋಮೀಟರ್ ನಷ್ಟು ಹರಡಿಕೊಂಡಿದೆ. ಜತೆಗೆ 110 ಹಳ್ಳಿಗಳು ಕೂಡ ಬಿಬಿಎಂಪಿ ವ್ಯಾಪ್ತಿಗೆ ಸೇರಿವೆ. ಪಾಲಿಕೆ ಆಡಳಿತ ಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸುವ ಹಿತದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ಸೂಕ್ತವೆಂದು ಸರ್ಕಾರ ಪರಿಗಣಿಸಿದೆ. ಆ ಹಿನ್ನೆಲೆಯಲ್ಲಿ ಈ ಹಿಂದೆ ಪಾಲಿಕೆ ವಿಭಜನೆ ಸಂಬಂಧ ರಚಿಸಲಾಗಿದ್ದು ಸಮಿತಿಯನ್ನು ಪುನರ್ ರಚನೆ ಮಾಡಿದೆ. ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರನ್ನು ಒಳಗೊಂಡಂತೆ ಸಮಿತಿಯನ್ನು ಸರ್ಕಾರ ರಚಿಸಿದೆ.ಬಿ.ಎಸ್. ಪಾಟೀಲ ನೇತೃತ್ವದ ಸಮಿತಿಯಲ್ಲಿ ಮಾಜಿ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಹಾಗೂ ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ ಸದಸ್ಯ ರವಿಚಂದರ್ ಇದ್ದಾರೆ.
ಅಖಂಡ ಬೆಂಗಳೂರು ಹಾಗೆಯೇ ಉಳಿಯಬೇಕು ಎಂಬ ಭಾವನೆ ಮಾಜಿ ಸದಸ್ಯರದ್ದಾಗಿದೆ. ಪಾಲಿಕೆ ವಿಭಜನೆ ಮಾಡದೆ ಮೇಯರ್ ಇನ್ ಕೌನ್ಸಿಲ್ ವ್ಯವಸ್ಥೆ ಜಾರಿಯಾಗಬೇಕು ಎಂಬುವುದು ನನ್ನ ವಯಕ್ತಿಕ ಅಭಿಪ್ರಾಯ. – ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್‌ನ ಮಾಜಿ ಮೇಯರ್
– ದೇವೇಶ ಸೂರಗುಪ್ಪ