Advertisement

ಥರ್ಡ್‌ ಪಾರ್ಟಿ ಸಮೀಕ್ಷೆಗೆ ಸಮಿತಿ ಸೂಚನೆ

10:15 AM May 05, 2022 | Team Udayavani |

ಮಹಾನಗರ: ಇಲ್ಲಿನ ಕುಡುಂಬೂರು ಹೊಳೆಗೆ ತ್ಯಾಜ್ಯ ಮಿಶ್ರಿತ ನೀರು ಬಿಡಲಾಗುತ್ತಿರುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸುವ ಸಮೀಕ್ಷೆ ಬಗ್ಗೆ ನಂಬಿಕೆ ಇಲ್ಲ, ಹಾಗಾಗಿ ಇದರ ಬಗ್ಗೆ ಥರ್ಡ್‌ ಪಾರ್ಟಿ ಇನ್‌ಸ್ಪೆಕ್ಷನ್‌ ಆಗುವುದು ಉತ್ತಮ ಎಂದು ವಿಧಾನ ಪರಿಷತ್‌ ಸದಸ್ಯ, ಸರಕಾರದ ಭರವಸೆಗಳ ಸಮಿತಿ ಅಧ್ಯಕ್ಷ ಬಿ.ಎಂ. ಫಾರೂಕ್‌ ಸೂಚಿಸಿದರು.

Advertisement

ಕೂಳೂರು ಬಳಿಯ ಒಡಿಸಿ ರಸ್ತೆಯ ಇಕ್ಕೆಲಗಳಲ್ಲಿನ ಮಾಲಿನ್ಯ, ಜೋಕಟ್ಟೆ ಪರಿಸರದಲ್ಲಿನ ವಿಶೇಷ ಆರ್ಥಿಕ ವಲಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬುಧವಾರ ಪರಿಶೀಲಿಸಿ ಅವರು ಮಾತನಾಡಿದರು.

ಫಲ್ಗುಣಿ ನದಿಗೆ ಸೇರುವ ಕುಡುಂಬೂರು ಹೊಳೆ ಬೈಕಂಪಾಡಿಯಿಂದ ಹರಿದು ಬರುತ್ತದೆ. ಇದಕ್ಕೆ ಜೋಕಟ್ಟೆಯಲ್ಲಿನ ಕೆಲವು ಕೈಗಾರಿಕೆಗಳಿಂದ ಮಲಿನ ನೀರು ಸೇರುತ್ತಿದೆ. ಇಡೀ ಪ್ರದೇಶದಲ್ಲಿ ಕೆಲವೊಮ್ಮೆ ದುರ್ವಾಸನೆ ಹರಡಿರುತ್ತದೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.

ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರೂ ಹಾಜರಿರದ ಬಗ್ಗೆ ಫಾರೂಕ್‌ ಹಾಗೂ ಸಮಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಮಂಡಳಿಯ ಅಧಿಕಾರಿ ಕುಡುಂಬೂರು, ಹೊಳೆಯ ಮಾಲಿನ್ಯದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿ, ಈಗಾಗಲೇ ಈ ಬಗ್ಗೆ ಹಲವು ಸಭೆಗಳಲ್ಲಿ ಚರ್ಚಿಸಲಾಗಿದೆ. ಬೈಕಂಪಾಡಿ ಕೈಗಾರಿಕೆ ಪ್ರದೇಶದಲ್ಲಿ ಕೈಗಾರಿಕಾ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪಿಸಲು ಸೂಚಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮಾತನಾಡಿ, ಇದರ ಜತೆಯಲ್ಲೇ ಲ್ಯಾಬ್‌ವೊಂದನ್ನೂ ಸ್ಥಾಪಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಗಿದ್ದರೆ ಇಲ್ಲಿನ ವಿವಿಧ ಮಾಲಿನ್ಯದ ಮಟ್ಟವನ್ನು ತಿಳಿಯಲು ಸಹಾಯಕವಾಗಬಲ್ಲದು ಎಂದರು.

Advertisement

ಕೈಗಾರಿಕೆ ಕಾರಿಡಾರ್‌ ರಸ್ತೆಯ ಬದಿಯಲ್ಲೇ ಕೆಲವು ಕೈಗಾರಿಕೆಗಳ ಪೈಪ್‌ಲೈನ್‌ ಹಾದು ಹೋಗಿರುವುದರಿಂದ ಸುರಕ್ಷತೆ ದೃಷ್ಟಿಯಲ್ಲಿ ಅಪಾಯವುಂಟಾಗುವ ಸಾಧ್ಯತೆ ಇದೆ. ವಾಹನಗಳಿಗೆ ಈ ರಸ್ತೆಯಲ್ಲಿ ಸಂಚರಿಸುವುದಕ್ಕೂ ಸಾಕಷ್ಟು ಸ್ಥಳಾವಕಾಶ ಸಾಕಾಗುತ್ತಿಲ್ಲ ಎಂದು ಸಮಿತಿ ಸದಸ್ಯರ ಬಳಿ ಸ್ಥಳೀಯರು ದೂರು ನೀಡಿದರು.

ಒಂದುವೇಳೆ ಪೈಪ್‌ಲೈನ್‌ ಸ್ಫೋಟಿಸಿದರೆ ಅದರಿಂದ ಸ್ಥಳೀಯರಿಗೆ ಅಪಾಯವಷ್ಟೇ ಅಲ್ಲ, ಫಲ್ಗುಣಿ ನದಿಯಲ್ಲೂ ಮಾಲಿನ್ಯ ಉಂಟಾಗಬಹುದು. ರಸ್ತೆಗೆ ಸಮೀಪದಲ್ಲೇ ಇಷ್ಟು ಪೈಪ್‌ಲೈನ್‌ ಹೋಗಿರುವುದು ಯಾಕಾಗಿ ಎಂದು ಫಾರೂಕ್‌ ಈ ವೇಳೆ ಆತಂಕ ವ್ಯಕ್ತಪಡಿಸಿದರು.

ಸಲ್ಫರ್‌ ಕೋಕ್‌ ಘಟಕ

ಎಂಆರ್‌ಪಿಎಲ್‌ನ ಮೂರನೇ ಹಂತದ ಯೋಜನೆಯಡಿ ನಿರ್ಮಾಣಗೊಂಡಿದ್ದ ಸಲ್ಫರ್‌ ಕೋಕ್‌ ಘಟಕವನ್ನು ಜೋಕಟ್ಟೆ ಊರಿನ ಗಡಿಯಿಂದ ಸ್ಥಳಾಂತರಗೊಳಿಸಿದ್ದರೂ ಇದುವರೆಗೆ ಆ ಭಾಗದ ಹಸುರೀಕರಣ ಇನ್ನೂ ಕಾರ್ಯಗತಗೊಂಡಿಲ್ಲ ಎಂದು ಜೋಕಟ್ಟೆ ಗ್ರಾಮಸ್ಥರು ಸಮಿತಿಯ ಗಮನ ಸೆಳೆದರು.

ಸಲ್ಫರ್‌ ಕೋಕ್‌ ಘಟಕದಿಂದ ಹಾರುಬೂದಿ ಬಂದು ಜೋಕಟ್ಟೆಯಲ್ಲಿ ಬೀಳುತ್ತಿತ್ತು. ಹಲವು ಸುತ್ತಿನ ಹೋರಾಟದ ಬಳಿಕ ಸರಕಾರ 2016ರ ಎಪ್ರಿಲ್‌ನಲ್ಲಿ ಆದೇಶ ಹೊರಡಿಸಿದ್ದು ಅದರಂತೆ ಕಂಪೆನಿ 27 ಎಕ್ರೆ ಜಾಗದಲ್ಲಿ ಹಸುರು ವಲಯವನ್ನು ಅಭಿವೃದ್ಧಿಪಡಿಸಬೇಕಿತ್ತು. ಆದರೆ ಅದನ್ನು ಮಾಡಿಲ್ಲ ಎಂದರು.

ಸಮಿತಿ ಸದಸ್ಯರಾದ ಯು.ಬಿ. ವೆಂಕಟೇಶ್‌, ಶಶೀಲ್‌ ನಮೋಶಿ, ಕೆ.ಟಿ. ಶ್ರೀಕಂಠೇಗೌಡ, ಜಿ.ಪಂ ಸಿಇಒ ಡಾ| ಕುಮಾರ, ಜಂಟಿ ಕೈಗಾರಿಕೆ ನಿರ್ದೇಶಕ ಗೋಕುಲ್‌ದಾಸ್‌ ನಾಯಕ್‌ ಮೊದಲಾದವರಿದ್ದರು.

ಸಮೀಕ್ಷೆ ವರದಿ ನೀಡಲು ಸೂಚನೆ

ವಿಶೇಷ ಆರ್ಥಿಕ ವಲಯದಲ್ಲಿರುವ ವಿವಿಧ ಘಟಕಗಳಲ್ಲಿ ಎಷ್ಟು ಮಂದಿ ಕನ್ನಡಿಗರಿಗೆ ಉದ್ಯೋಗ ನೀಡಲಾಗಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸಮಿತಿ ಅಧ್ಯಕ್ಷ ಬಿ.ಎಂ. ಫಾರೂಕ್‌ ಅವರು ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಅವರಿಗೆ ಸೂಚನೆ ನೀಡಿದರು. ಡಿ-ವರ್ಗದ ನೌಕರರನ್ನು ಹೊರತುಪಡಿಸಿ, ಇತರ ಹಂತಗಳಲ್ಲಿ ಎಷ್ಟು ಮಂದಿ ಕನ್ನಡಿಗರು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ತಿಂಗಳೊಳಗೆ ವರದಿ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next