Advertisement

JDS ಸಂಘಟನೆಗೆ ಸಮಿತಿ ರಚನೆ: ಎಚ್‌.ಡಿ. ಕುಮಾರಸ್ವಾಮಿ

12:34 AM Jul 29, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಬೆನ್ನಲ್ಲೇ ಉಪ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಪಕ್ಷ ಸಂಘಟನೆಗೆ ಮುಂದಾಗಿರುವ ಜೆಡಿಎಸ್‌, ಸಮಿತಿಯೊಂದನ್ನು ರಚಿಸಿ ರಾಜ್ಯಾದ್ಯಂತ ಪ್ರವಾಸಕ್ಕೆ ತೀರ್ಮಾನಿಸಿದೆ.

Advertisement

ನಗರದ ಪಕ್ಷದ ಕಚೇರಿಯಲ್ಲಿರುವ ಜೆಪಿ ಭವನದಲ್ಲಿ ರವಿವಾರ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಮುಂಬರುವ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ, ಪಕ್ಷ ಸಂಘಟನೆ, ಸದಸ್ಯತ್ವ ಅಭಿಯಾನ, ಪದಾಧಿಕಾರಿಗಳ ಕಾರ್ಯನಿರ್ವಹಣೆ ಸೇರಿ ವಿವಿಧ ಮಹತ್ವದ ವಿಷಯಗಳ ಬಗ್ಗೆ ಶಾಸಕರು, ಸಂಸದರು, ವಿಧಾನ ಪರಿಷತ್ತಿನ ಸದಸ್ಯರು, ಮಾಜಿ ಶಾಸಕರು ಹಾಗೂ ನಾಯಕರ ಜತೆ ಸಮಾಲೋಚನಾ ಸಭೆ ನಡೆಯಿತು. ಅಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಸಮಿತಿ ರಚನೆಯಾದ ಮೇಲೆ ಇನ್ನು 10 ದಿನಗಳ ಅನಂತರ ಆ ಸಮಿತಿಯಲ್ಲಿ ಇರುವವರು ಎಲ್ಲ ಮುಖಂಡರ ಜತೆಗೂಡಿ 31 ಜಿಲ್ಲೆ ಗಳಲ್ಲಿಯೂ ಕಾರ್ಯಕ್ರಮ ಹಾಕಿಕೊಳ್ಳಬೇಕು. ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್‌ ಬಾಬು, ಯುವ ಜನತಾದಳ ರಾಜ್ಯ ಘಟಕದ ಅಧ್ಯಕ್ಷ ನಿಖೀಲ್‌ ಕುಮಾರಸ್ವಾಮಿ ಸೇರಿ ಎಲ್ಲ ಹಿರಿಯ-ಕಿರಿಯ ನಾಯಕರೂ ರಾಜ್ಯ ಪ್ರವಾಸ ಮಾಡಬೇಕು. ತಿಂಗಳಲ್ಲಿ ಎಲ್ಲ ಜಿಲ್ಲೆ ಗಳಲ್ಲಿಯೂ ನಾಯಕರು ಪ್ರವಾಸ ಪೂರ್ಣಗೊಳಿಸಬೇಕು. ಕಾರ್ಯಕರ್ತರ ಪಡೆ ಕಟ್ಟಬೇಕು ಎಂದು ಕುಮಾರಸ್ವಾಮಿ ಸೂಚಿಸಿದರು.

ನಿರ್ಲಕ್ಷ್ಯ ಸಹಿಸಲಾಗದು
ಪಕ್ಷ ಸಂಘಟನೆ ಬಗ್ಗೆ ನಿರ್ಲಕ್ಷ್ಯ ತೋರಿದರೆ ಸಹಿಸುವ ಪ್ರಶ್ನೆಯೇ ಇಲ್ಲ. ಚುನಾವಣೆ ಬಂದಾಗ ಕಾರ್ಯಕರ್ತರ ಕೈಕಾಲು ಹಿಡಿಯುತ್ತೇವೆ. ಆಮೇಲೆ ಮತ್ತೂಂದು ಚುನಾವಣೆ ಬರುವ ತನಕ ಸಂಘಟನಾ ಕೆಲಸದ ಕಡೆ ಲಕ್ಷ್ಯ ಕೊಡುವುದಿಲ್ಲ ಎಂದರೆ ಹೇಗೆ? ಈ ಧೋರಣೆ ಸಹಿಸಲಾಗದು. ಸದಸ್ಯತ್ವ ನೋಂದಣಿ ಅಭಿಯಾನದ ಬಗ್ಗೆ ನಿರ್ಲಕ್ಷ್ಯ ಸರಿಯಲ್ಲ ಎಂದರು.

ನನ್ನ ಆರೋಗ್ಯದ ಬಗ್ಗೆ ಯಾರೂ ಆತಂಕಕ್ಕೆ ಒಳಗಾಗುವ ಆವಶ್ಯಕತೆ ಇಲ್ಲ. ನಮ್ಮ ಕಾರ್ಯಕರ್ತರು ಅಭಿಮಾನಿಗಳಿಗೆ ಮನವಿ ಮಾಡುವುದು ಇಷ್ಟೇ.. ನಿಮ್ಮ ಶುಭ ಹಾರೈಕೆ ಇರುವರೆಗೆ, ಭಗವಂತನ ಕೃಪೆ, ತಂದೆ-ತಾಯಿ ಆಶೀರ್ವಾದ ಇರುವವರೆಗೆ ಯಾವುದೇ ಅಪಾಯವಿಲ್ಲ
-ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next