Advertisement

ಮಂಗಳಮುಖೀಯರ ಉನ್ನತಿಗೆ ಸಮಿತಿ

04:14 PM Jul 24, 2019 | Suhan S |

ಬಾಗಲಕೋಟೆ: ಜಿಲ್ಲೆಯಲ್ಲಿರುವ ಮಂಗಳ ಮುಖೀಯರ ಶ್ರೇಯೋಭಿವೃದ್ಧಿಗಾಗಿ, ಸಮಾಜ ದಲ್ಲಿ ಗೌರವಯುತವಾದ ಅಸ್ತಿತ್ವ ಹಾಗೂ ಜನಸಮುದಾಯದಲ್ಲಿ ಒಗ್ಗೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಹೇಳಿದರು.

Advertisement

ನವನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ದಮನಿತ ಮಹಿಳೆಯರ ಮತ್ತು ಟ್ರಾನ್ಸ್‌ಜೆಂಡರ್ಗಳ ಜೀವನ ಮಟ್ಟ ಸುಧಾರಣೆ, ಸಬಲೀಕರಣ ಮತ್ತು ಪುನರ್ವಸತಿ ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಜಿಲ್ಲಾಮಟ್ಟದ ಸಮಿತಿ ರಚಿಸುವ ಕುರಿತು ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು.

ಟ್ರಾನ್ಸ್‌ಜೆಂಡರ್ಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಈ ಸಮಿತಿ ರಚಿಸಲಾಗಿದೆ. ಜಿಲ್ಲೆಯಲ್ಲಿ 884 ಟ್ರಾನ್ಸ್‌ಜೆಂಡರ್ಗಳಿದ್ದು, ಅವರಿಗೆ ಮೊದಲು ಗುರುತಿನ ಚೀಟಿ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ತಾಲೂಕಾ ಹಂತದಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ ಅರ್ಹ ಟ್ರಾನ್ಸ್‌ಜೆಂಡರ್ಗಳಿಂದ ಅರ್ಜಿ ಸ್ವೀಕಾರ, ದಾಖಲಾತಿ ಪರಿಶೀಲನೆಗಳೊಂದಿಗೆ ಮಿಲನ ಸಂಸ್ಥೆಯೊಂದಿಗೆ ಸಭೆ ನಡೆಸಿ ಜಿಲ್ಲಾ ಮಟ್ಟದಲ್ಲಿ ಅನುಮೋದನೆ ಪಡೆದು ಗುರುತಿನ ಚೀಟಿ ನೀಡಲು ಕ್ರಮ ಕೈಗೊಳ್ಳಬೇಕು. ತೃತೀಯ ಲಿಂಗಗಳನ್ನು ಗೌರವದಿಂದ ಕಾಣುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಟ್ರಾನ್ಸ್‌ಜೆಂಡರ್ಗಳ ಬಗ್ಗೆ ಶಾಲೆಗಳ ಮತ್ತು ಮಕ್ಕಳ ಹಕ್ಕುಗಳ ಸಂಸ್ಥೆಗಳ ಮತ್ತು ನೆಟ್ವರ್ಕ್‌ಗಳ ಸಹಭಾಗಿತ್ವದಲ್ಲಿ ಶಿಕ್ಷಕರಿಗೆ ಹಾಗೂ ಕುಟುಂಬದವರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ಟ್ರಾನ್ಸ್‌ ಜೆಂಡರ್ಗಳ ಮಕ್ಕಳಿಗೆ ಸರ್ಕಾರದ ವಿವಿಧ ವಸತಿ ನಿಲಯಗಳಡಿ ಉಚಿತ ಪ್ರವೇಶ ಒದಗಿಸಬೇಕು. ಪೋಷಕರು ಮತ್ತು ಟ್ರಾನ್ಸ್‌ಜೆಂಡರ್ ಮಕ್ಕಳನ್ನು ಪರಿತ್ಯಜಿಸದೆ ಅವರಿಗೆ ಕುಟುಂಬದಲ್ಲಿ ಸಮಾನ ಅವಕಾಶ ನೀಡುವಂತೆ ಅರಿವು ಮೂಡಿಸುವ ಕೆಲಸವಾಗಬೇಕು. ಟ್ರಾನ್ಸ್‌ಜೆಂಡರ್ಗಳ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಪೊಲೀಸ್‌ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾ ಮಟ್ಟದ ವಿವಿಧ ಇಲಾಖಾ ಸೌಲಭ್ಯ ಟ್ರಾನ್ಸ್‌ಜೆಂಡರ್ಗಳಿಗೆ ಒದಗಿಸಲು ನಿಟ್ಟಿನಲ್ಲಿ ಸೌಲಭ್ಯ ನೀಡಲು ಬೆಂಬಲ ಘಟಕದಿಂದ ಪ್ರತ್ಯೇಕ ಕ್ರಿಯಾಯೋಜನೆ ಸಿದ್ಧಪಡಿಸಿ ರಾಜ್ಯದ ಮಟ್ಟದ ಕೋಶಕ್ಕೆ ತಕ್ಷಣವೇ ಪತ್ರ ಬರೆಯುವಂತೆ ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಟ್ರಾನ್ಸ್‌ಜೆಂಡರ್ಗಳ ಮಕ್ಕಳಿಗೆ ಸುರಕ್ಷಿತ ನಿವಾಸ, ಅಲ್ಪಾವಧಿ ವಸತಿ ಗೃಹಗಳ, ಅನಾಥಾಶ್ರಮಮಗಳ, ದತ್ತು ಮತ್ತು ಪೋಷಣಾ ಸೇವೆಗಳ ಸೌಕರ್ಯ ಒದಗಿಸಬೇಕು. ವಯಸ್ಸಾದವರಿಗೆ ವೃದ್ಧ್ದಾಶ್ರಮಗಳ ವ್ಯವಸ್ಥೆ ಮತ್ತು ಪಿಂಚಣಿ ಒದಗಿಸಿಕೊಡುವ ಬಗ್ಗೆ ಕ್ರಮವಹಿಸಬೇಕು. ಟ್ರಾನ್ಸ್‌ಜೆಂಡರ್ಗಳ ನೀತಿಯ ಬಗ್ಗೆ ಮೂಲ ಮಾಹಿತಿ ರೇಡಿಯೋ, ಟಿವಿ ಮೂಲಕ ಬಿತ್ತರಿಸಿ ಅವರನ್ನು ಮುಖ್ಯವಾಹಿನಿಯಲ್ಲಿ ವಿಲೀನಗೊಳಿಸುವ ಬಗ್ಗೆ ಧನಾತ್ಮಕ ಚಿಂತನೆ ಮೂಡಿಸಬೇಕು. ವಿದ್ಯಾರ್ಥಿ ವೇತನ, ಆರೋಗ್ಯ ಸೇವೆ, ಸಾಮಾಜಿಕ ಭದ್ರತೆ ಒದಗಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ಹೇಳಿದರು.

ಜಿಪಂ ಸಿಇಒ ಗಂಗೂಬಾಯಿ ಮಾನಕರ ಮಾತನಾಡಿ, ಬೇರೆ ಇಲಾಖೆಗಳಡಿ ಬಾಹ್ಯ ಗುತ್ತಿಗೆಯಲ್ಲು ಗ್ರುಫ್‌ ಡಿ ಹುದ್ದೆಗಳಲ್ಲಿ ಆಯ್ಕೆಗೊಳಿಸಲು ಕ್ರಮ ಕೈಗೊಳ್ಳಲು ತಿಳಿಸಿದರು. ಬಾಲಕರ ಬಾಲಭವನದಲ್ಲಿ ಕಚೇರಿ ಸ್ಥಾಪಿಸಲು ಸೂಚಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಪ್ರೊಬೇಷನರಿ ಐಎಎಸ್‌ ಅಧಿಕಾರಿ ಗರಿಮಾ ಪೋವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಅನಂತ ದೇಸಾಯಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next