ಬೆಂಗಳೂರು: ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ರೂಪಿಸಬಹುದಾದ ಕಾರ್ಯ ತಂತ್ರಗಳ ಕುರಿತು ವರದಿ ಸಿದ್ಧಪಡಿಸಲು ಪ್ರಗತಿಪರ ರೈತರನ್ನು ಒಳಗೊಂಡ ಸಮಿತಿ ರಚಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗೃಹ ಕಚೇರಿ “ಕೃಷ್ಣಾ’ದಲ್ಲಿ ಬುಧವಾರ ರೈತರ ಆದಾಯ ದ್ವಿಗುಣ ಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ರಚಿಸಿರುವ ಉನ್ನತಾಧಿಕಾರ ಸಮಿತಿ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಅಶೋಕ್ ದಳವಾಯಿ ಅವರ ವರದಿಯ ಮುಖ್ಯಾಂಶಗಳ ಕುರಿತು ಪ್ರಾತ್ಯಕ್ಷಿಕೆ ಹಾಗೂ ಚರ್ಚೆ ಬಳಿಕ ಸುದ್ದಿ ಗಾರರೊಂದಿಗೆ ಮಾತನಾಡಿದರು.
ಕೃಷಿಯು ಇಂದು ಉತ್ಪಾದನ ಕೇಂದ್ರಿತವಾಗಿದ್ದು, ಅದು ಆದಾಯ ಕೇಂದ್ರಿತವಾಗಬೇಕಿದೆ. ರೈತರ ಮನಸ್ಥಿತಿ ಕೂಡ ಈ ನಿಟ್ಟಿನಲ್ಲಿ ಬದಲಾಗಬೇಕಿದೆ. ಈ ಹಿನ್ನೆಲೆಯಲ್ಲಿ ಸಮಿತಿಯು ಕೇಂದ್ರ ಸರಕಾರದ ಸಮಿತಿಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಬೇಕು. ರಾಜ್ಯವು ಕೃಷಿ ಚಟುವಟಿಕೆ, ಹವಾಮಾನ, ಭೂಮಾಲಕತ್ವ ಮೊದಲಾದ ವಿಷಯಗಳಲ್ಲಿ ಅತ್ಯುತ್ತಮ ದತ್ತಾಂಶ ಹೊಂದಿದ್ದು, ಇದರ ಆಧಾರದಲ್ಲಿ ಕಾರ್ಯತಂತ್ರ ರೂಪಿಸುವ ಕುರಿತು ಸಮಿತಿ ವರದಿ ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ರೈತರ ಆದಾಯ ದುಪ್ಪಟ್ಟು ಗೊಳಿಸುವ ಕೇಂದ್ರದ ಗುರಿ ಸಾಧನೆಗೆ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳಲು ರಾಜ್ಯ ಉತ್ಸುಕವಾಗಿದೆ ಎಂದ ಮುಖ್ಯಮಂತ್ರಿಗಳು, ಕೃಷಿ ವಿಶ್ವವಿದ್ಯಾನಿಲಯಗಳ ಸಂಶೋಧನೆ ಗಳು ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತಿರಬೇಕು. ರಾಜ್ಯದ ಕೃಷಿ ವಲಯದಲ್ಲಿ ಬೀಜ, ಗೊಬ್ಬರ ಹಾಗೂ ಕೀಟಗಳ ನಿರ್ವಹಣೆಗೆ ಕೃಷಿ ವಿಶ್ವವಿದ್ಯಾಲಯಗಳ ನೆರವಿನಿಂದ ಕ್ರಮ ವಹಿಸಲು ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿ ರಚಿಸಲಾಗುವುದು ಎಂದರು.
ಸಭೆಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್, ತೋಟಗಾರಿಕಾ ಸಚಿವ ಮುನಿರತ್ನ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ :
ಕೃಷಿ, ತೋಟಗಾರಿಕೆ, ಡೇರಿ, ಪ್ರಾಣಿಜನ್ಯ ಉತ್ಪನ್ನಗಳ ಸಂಸ್ಕರಣೆ ಹಾಗೂ ಗ್ರಾಮೀಣ ಮತ್ತು ಗುಡಿ ಕೈಗಾರಿಕೆ ಮೂಲಕ ರೈತರಿಗೆ ಹೆಚ್ಚಿನ ಆದಾಯ ತರಲು ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಉದ್ಯೋಗ ಸೃಜನೆಗೆ ಪೂರಕವಾಗಿ “ಸೆಕೆಂಡರಿ ಅಗ್ರಿಕಲ್ಚರ್ ಡೈರೆಕ್ಟರೇಟ್’ ಸ್ಥಾಪಿಸಲಾಗುವುದು. ಇದರಿಂದ ಉಪ ಕೃಷಿ ಉತ್ಪನ್ನ ತಯಾರಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಆಗುತ್ತದೆ. ಒಟ್ಟಾರೆ ರೈತರ ಆದಾಯ ಹೆಚುÌತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.