ಲಿಂಗಸುಗೂರು: ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿಯಾದರೂ ಅನುದಾನ ತರುವೆ ಎಂದು ಶಾಸಕ ಡಿ.ಎಸ್.ಹೂಲಗೇರಿ ಹೇಳಿದರು.
ಮುಖ್ಯಮಂತ್ರಿ ಮಾದರಿ ಗ್ರಾಮ ಯೋಜನೆಯಡಿ ತಾಲೂಕಿನ ರಾಂಪುರ (ಭೂ) ಗ್ರಾಮ ಆಯ್ಕೆಯಾದ ಹಿನ್ನೆಲೆಯಲ್ಲಿ ರವಿವಾರ ನಡೆದ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಮಾದರಿ ಗ್ರಾಮ ಯೋಜನೆಯಡಿ ನಮ್ಮ ಕ್ಷೇತ್ರದ ಐದು ಗ್ರಾಮಗಳು ಆಯ್ಕೆಯಾಗಿವೆ. ಅದರಲ್ಲಿ ರಾಂಪುರ (ಭೂ), ಮೇದಿನಾಪುರ, ಕೋಠಾ, ಬನ್ನಿಗೋಳ, ಮಾಕಾಪುರ ಗ್ರಾಮಗಳು ಆಯ್ಕೆಯಾಗಿವೆ. ಪ್ರತಿ ಗ್ರಾಮಕ್ಕೆ ಒಂದು ಕೋಟಿ ರೂ. ಅನುದಾನ ನೀಡಲಾಗಿದೆ. ಅದರಲ್ಲಿ ಶೇ.50 ರಷ್ಟು ಅನುದಾನ ಸ್ವಚ್ಛತೆ, ಚರಂಡಿ, ಸಿಸಿ ರಸ್ತೆಗೆ, ಉಳಿದ 50ರಷ್ಟು ಅನುದಾನದಲ್ಲಿ ಗ್ರಂಥಾಲಯ, ಸಾಂಸ್ಕೃತಿಕ ಭವನ, ಕ್ರೀಡಾ ಸಾಮಾಗ್ರಿ, ಸೌರ ಶಕ್ತಿ, ತಿಪ್ಪೆಗುಂಡಿ ಸ್ಥಳಾಂತರ ಇತರೆ ಗ್ರಾಮಾಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದೆಂದು ಹೇಳಿದರು.
ತಾಲೂಕಿನ ಪ್ರತಿ ಗ್ರಾಮದಲ್ಲೂ ಒಂದಲ್ಲ ಒಂದು ಕೆಲಸಗಳು ನಡೆಯುತ್ತಲೇ ಇವೆ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಗಳಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಗ್ರಾಮಸ್ಥರು ಕೂಡಾ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಬೇಕು. ಗ್ರಾಮದ ಶಾಲಾ ಕೊಠಡಿಗೆ ಅನುದಾನ ಬಿಡುಗಡೆಯಾಗಿದೆ. ಆದರೆ ಜಾಗೆ ಕೊರತೆ ಎದುರಾಗಿದ್ದು, ಗ್ರಾಮಸ್ಥರು ಜಾಗ ನೀಡಲು ಮುಂದಾಗಬೇಕು. ಇಲ್ಲದಿದ್ದರೆ ಅನುದಾನ ವಾಪಸ್ ಹೋಗುತ್ತದೆ. ಮಾರ್ಚ್ ಅಂತ್ಯದೊಳಗೆ ಅನುದಾನ ಸದ್ಬಳಕೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು. ರಾಂಪುರ ನೀರಾವರಿ ಯೋಜನೆ ನಾಲೆಗಳ ಮುಖಾಂತರ ಕೆರೆ ತುಂಬಿಸುವ ಕಾರ್ಯ ಮಾಡುವೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್ ಮಾತನಾಡಿ, ರಾಂಪುರ ಬಿ ಸ್ಕೀಮ್‌ನಡಿ ನಡೆದ ಕಾಮಗಾರಿಗಳು ಕಳಪೆ ಆಗಿದ್ದು, ಶಾಸಕರು ಪರಿಶೀಲಿಸಿದ್ದಾರೆ. ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಲಿದ್ದಾರೆ ಎಂದರು.
ಜಿಪಂ ಸದಸ್ಯ ಸಂಗಣ್ಣ ದೇಸಾಯಿ, ಮುಖಂಡರಾದ ಪರಸಪ್ಪ ಹುನುಕುಂಟಿ, ಆದಪ್ಪ ಸಾಹುಕಾರ, ಬೀರಪ್ಪ, ಪಿಡಿಒ ಗಂಗಮ್ಮ, ಗುತ್ತೇದಾರ ವೆಂಕಟೇಶ ರಾಠೊಡ, ಶಂಕರ ಜೆಇ, ಪರಶುರಾಮ ನಗನೂರು, ಇಲಿಯಾಸ್, ಸಂಜೀವಪ್ಪ ಹುನಕುಂಟಿ, ವೆಂಕಟೇಶ ಇತರರು ಇದ್ದರು.