ಹುಬ್ಬಳ್ಳಿ: ರಾಜ್ಯದಲ್ಲಿ ಡಾ| ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಹೆಸರಿನಲ್ಲಿ ಸುಮಾರು 900ಕ್ಕೂ ಹೆಚ್ಚು ಭವನಗಳನ್ನು ನಿರ್ಮಿಸುವ ಮೂಲಕ ಹಿಂದುಳಿದವರ ಅಭಿವೃದ್ಧಿಗೆ ಸರಕಾರ ಕಂಕಣಬದ್ಧವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಹೇಳಿದರು.
ನ್ಯೂ ಇಂಗ್ಲಿಷ್ ಸ್ಕೂಲ್ ಬಳಿಯ ಪಡದಯ್ಯನ ಹಕ್ಕಲದಲ್ಲಿ ಬಾಬು ಜಗಜೀವನರಾಂ ಭವನ ನಿರ್ಮಾಣದ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಬಸವನಬಾಗೇವಾಡಿಯಲ್ಲಿ ಬಸವ ಭವನದಲ್ಲಿ ಅಂಬೇಡ್ಕರ ವೇದಿಕೆ, ಬಾಬು ಜಗಜೀವರಾಂ ಹೆಸರಿನ ಭೋಜನಾಲಯ ಮಾಡುವ ಮೂಲಕ ಸರ್ವಧರ್ಮ ಭವನ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ಹುಬ್ಬಳ್ಳಿಯಲ್ಲಿ ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ 9.15 ಕೋಟಿ ರೂ. ಅನುದಾನ ನೀಡಲಾಗಿದ್ದು, ಅಗತ್ಯವಿದ್ದರೆ ಇನ್ನಷ್ಟು ಹಣ ನೀಡಲಾಗುವುದು. ಎಲ್ಲ ಸಮಾಜದವರು ಇಲ್ಲಿ ಸಭೆ- ಸಮಾರಂಭಗಳನ್ನು ಮಾಡಲು ಅವಕಾಶ ನೀಡಲಾಗುವುದು. ನಗರದ ಖಾಸಗಿ ಕಲ್ಯಾಣ ಮಂಟಪಗಳನ್ನು ಮೀರಿಸುವಂತೆ ಇದು ನಿರ್ಮಾಣವಾಗಬೇಕು.
ಗುತ್ತಿಗೆದಾರರು ಕಾಲಮಿತಿಯಲ್ಲಿ ಭವನ ಪೂರ್ಣಗೊಳಿಸಬೇಕು ಎಂದು ಸಚಿವರು ಸೂಚಿಸಿದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, 1 ಎಕರೆ 30 ಗುಂಟೆ ಜಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಭವನ ಕೇವಲ ಸಭೆ-ಸಮಾರಂಭಗಳಿಗೆ ಸೀಮಿತವಾಗದೆ ಈ ಭಾಗದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವಂತಾಗಬೇಕು.
ಭವನದ ಒಂದು ಮಹಡಿಯಲ್ಲಿ ಡಿಜಿಟಲ್ ಗ್ರಂಥಾಲಯ ಮಾಡುವ ಮೂಲಕ ಮಕ್ಕಳಿಗೆ ಇಡೀ ಜಗತ್ತಿನ ಮಾಹಿತಿ ಇಲ್ಲಿ ಲಭಿಸುವಂತೆ ಮಾಡಿ ಎಂದರು. ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಪೂರ್ವ ಕ್ಷೇತ್ರದಲ್ಲಿ ಉತ್ತಮ ಭವನ ಇಲ್ಲ ಎನ್ನುವ ಕೊರಗು ಇನ್ನು ಇರದು. ಇದಲ್ಲದೇ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು ಅದಕ್ಕಾಗಿ ಸಚಿವರ ಅಭಯ ಸದಾ ಇರಲಿ ಎಂದರು.
ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಹುಡಾ ಅಧ್ಯಕ್ಷ ಅನ್ವರ್ ಮುಧೋಳ, ಪಾಲಿಕೆ ಸದಸ್ಯರಾದ ಗಣೇಶ ಟಗರಗುಂಟಿ, ಮೋಹನ ಹಿರೇಮನಿ, ಬಸೀರ ಗುಡಮಾಲ, ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ಮುಖಂಡರಾದ ಅಲ್ತಾಫ್ ಹಳ್ಳೂರ, ಪಿತಾಂಬ್ರಪ್ಪ ಬೀಳಾರ ಇತರರಿದ್ದರು.