ಕಲಬುರಗಿ: ಇಲ್ಲಿ ನಡೆಸಲು ಉದ್ದೇಶಿಸಿರುವ ಅಖೀಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಬದ್ಧವಿರುವುದಾಗಿ ಡಿಸಿಎಂ, ಲೋಕೋಪಯೋಗಿ, ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಕಸಾಪಕೇಂದ್ರ ಸಮಿತಿ ಅಧ್ಯಕ್ಷರು ದಿನಾಂಕ ಅಂತಿಮಗೊಳಿಸಿದ ನಂತರ ಮುಂದಿನ ಕಾರ್ಯ ಚಟುವಟಿಕೆಗಳು ಆರಂಭವಾಗಲಿವೆ. ಒಟ್ಟಾರೆ ಸಮ್ಮೇಳನ ಸಿದ್ಧತೆ ಕೈಗೊಳ್ಳಲು ಹಿಂದೇಟು ಹಾಕಲಾಗದು. ಸಮ್ಮೇಳನ ದಿನಾಂಕ ನಂತರ ಸ್ವಾಗತ ಸಮಿತಿ ರಚಿಸಲಾಗುವುದು ಎಂದರು.
ಕೆಲವು ಕಾರಣಗಳ ಹಿನ್ನೆಲೆಯಲ್ಲಿ ಸಮ್ಮೇಳನ ಕಾರ್ಯ ಚಟುವಟಿಕೆಗಳು ಆರಂಭವಾಗಲು ತಡವಾಗಿರಬಹುದು. ಆದರೆ ಇನ್ಮುಂದೆ ಚುರುಕುಗೊಳ್ಳಲಿದೆ ಎಂದು ವಿವರಿಸಿದರು.
ಹೆಚ್ಚುವರಿ ಕೊಠಡಿಗೆ 140 ಕೋಟಿ: ರಾಜ್ಯಾದ್ಯಂತ ಇರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಹೆಚ್ಚುವರಿ ಕೊಠಡಿ, ಬಚ್ಚಲು ಮನೆ ಹಾಗೂ ಶೌಚಾಲಯಗಳ ನಿರ್ಮಾಣಕ್ಕೆ 140 ಕೋಟಿ ರೂ. ಮೊತ್ತದ ಕ್ರಿಯಾಯೋಜನೆ ತಯಾರಿಸಲಾಗಿದೆ. ವಸತಿ ನಿಲಯಗಳಲ್ಲಿ ಇದ್ದುಕೊಂಡು ಅಧ್ಯಯನಮಾಡುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅವರಿಗೆ ಉತ್ತಮ ಓದುವ ವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಕಾರಜೋಳ ತಿಳಿಸಿದರು.
ನವೆಂಬರ್‌ನಲ್ಲೇ ವಿಮಾನ ನಿಲ್ದಾಣ ಶುರು: ಕಲಬುರ್ಗಿಯಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣ ಉದ್ಘಾಟನೆ ಇದೇ ತಿಂಗಳೊಳಗೆ ನೆರವೇರಲಿದೆ. ಪ್ರಧಾನಿ ಅವರನ್ನು ಆಹ್ವಾನಿಸಲಾಗಿದ್ದು, ದಿನಾಂಕ ಸಿಕ್ಕ ಕೂಡಲೇ ಉದ್ಘಾಟನೆ ನಡೆಯಲಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು. ಸರ್ಕಾರ ಸತ್ತಿದ್ದರೆ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಸಾಧ್ಯವಿತ್ತೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಉತ್ತರಿಸಿದ ಕಾರಜೋಳ, ಮೊದಲ ಬಾರಿಗೆ ಯಡಿಯೂರಪ್ಪ ಸರ್ಕಾರ ಎನ್ ಡಿಆರ್‌ಎಫ್‌ನ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚು ಪರಿಹಾರ ನೀಡಿದೆ. ಸಿದ್ದರಾಮಯ್ಯ ಅವರು ಈ ರೀತಿ ಎಂದಾದರೂ ನಯಾಪೈಸೆ ಹೆಚ್ಚಿಗೆ ನೀಡಿದ್ದರೇ ಎಂದು ಕಾರಜೋಳ ಪ್ರಶ್ನಿಸಿದರು.
ಶೀಘ್ರ ಸಭೆ: ಕಲಬುರಗಿ ನಗರದಲ್ಲಿನ ಐತಿಹಾಸಿಕ ಬಹಮನಿ ಕೋಟೆಯ ಒತ್ತುವರಿ ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿದ್ದರ ಹಿನ್ನೆಲೆಯಲ್ಲಿ ಶೀಘ್ರವೇ ಸಭೆ ಕರೆದು ಮುಂದಿನ ಹೆಜ್ಜೆ ಇಡಲಾಗುವುದು ಎಂದು ಡಿಸಿಎಂ ತಿಳಿಸಿದರು. ಸಂಸದ ಡಾ| ಉಮೇಶ ಜಾಧವ್, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ರಾಜಕುಮಾರ ಪಾಟೀಲ್ ತೇಲ್ಕೂರ, ಬಸವರಾಜ ಮತ್ತಿಮಡು, ಬಿ.ಜಿ. ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಇದ್ದರು.