Advertisement

ನಗರ-ಪಟ್ಟಣಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಬದ್ಧ

09:31 AM Sep 01, 2017 | Team Udayavani |

ಬೆಂಗಳೂರು: ನಗರೋತ್ಥಾನ ಯೋಜನೆಯಡಿ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗುವ ಅನುದಾನ, ಕಾಲಮಿತಿಯಲ್ಲಿ ಸಮರ್ಪಕವಾಗಿ ಬಳಕೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.

Advertisement

ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯದಿಂದ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಗುರುವಾರ ನಡೆದ ನಗರೋತ್ಥಾನ
3ನೇ ಹಂತದ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಮೂಲಸೌಕರ್ಯ ಒದಗಿಸಲು ಅಗತ್ಯವಿರುವಷ್ಟು ಅನುದಾನ ನೀಡಲು ಬದ್ಧ. ಆದರೆ, ಅದರ ಸಮರ್ಪಕ ಬಳಕೆಯಾಗುವುದು ಮುಖ್ಯ ಎಂದರು.

ಸದ್ಯ ಶೇ.60ರಷ್ಟು ಜನ ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದ್ದರೆ, ಶೇ.40ರಷ್ಟು ಜನ ನಗರಗಳಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಒಂದು ಕೋಟಿಗಿಂತ ಹೆಚ್ಚು ಜನ ನೆಲೆಸಿದ್ದಾರೆ. ಸರ್ಕಾರವು ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಭಿವೃದ್ದಿ ವಿಚಾರದಲ್ಲಿ ಸಮಾನ ಆದ್ಯತೆ ನೀಡಿದೆ ಎಂದು ತಿಳಿಸಿದರು. ನಗರೋತ್ಥಾನ ಮೂರನೇ ಹಂತದ ಯೋಜನೆಯಡಿ 2,847 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕಾಮಗಾರಿ ವಿಳಂಬವಾಗಿ ಕೈಗೊಳ್ಳದೆ ಕಾಲಮಿತಿ ಯೊಳಗೆ ಪೂರ್ಣಗೊಳಿಸಲು ಗಮನ ಹರಿಸಬೇಕು. ವಿಳಂಬದಿಂದ ಸರ್ಕಾರಕ್ಕೂ ಹೊರೆಯಾಗಲಿದ್ದು, ಪರೋಕ್ಷವಾಗಿ ಜನತೆಯ ಮೇಲೆ ಹೊರೆ ಬೀಳಲಿದೆ. 3ನೇ ಹಂತದ ಯೋಜನೆಗೆ ಕ್ರಿಯಾಯೋಜನೆ ಸಿದ್ಧವಿದ್ದು, ತ್ವರಿತವಾಗಿ ಕಾಮಗಾರಿ ಆರಂಭಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಕಿವಿಮಾತು ಹೇಳಿದರು.

ಬಯಲು ಬಹಿರ್ದೆಸೆ ಮುಕ್ತ ಪ್ರದೇಶಗಳನ್ನು ರೂಪಿಸುವತ್ತ ಗಮನ ಹರಿಸಲಾಗಿದೆ. ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು 2019ರ ಅಕ್ಟೋಬರ್‌  2ರ ಹೊತ್ತಿಗೆ ಬಯಲು ಬಹಿರ್ದೆಸೆ ಮುಕ್ತವಾಗಬೇಕು ಎಂಬುದು ಸರ್ಕಾರದ ಉದ್ದೇಶ. ಇದಕ್ಕಾಗಿ ಕಾರ್ಯಕ್ರಮ ರೂಪಿಸಿ ಹಣ ಒದಗಿಸಿದರೆ ಸಾಲದು. ಅಧಿಕಾರಿಗಳು ತ್ವರಿತವಾಗಿ ಕಾರ್ಯ ನಿರ್ವಹಿಸಿ, ಜನಪ್ರತಿನಿಧಿಗಳು ಮೇಲ್ವಿಚಾರಣೆ ನಡೆಸಿದರೆ ಬಹುಬೇಗ ಗುರಿ ತಲುಪಬಹುದು ಎಂದು ಹೇಳಿದರು.

ಹೊಸ ಆಸ್ತಿಗಳ ಸಮೀಕ್ಷೆ: ಸಚಿವ ಈಶ್ವರ ಖಂಡ್ರೆ ಮಾತನಾಡಿ, ನಗರೋತ್ಥಾನ 3ನೇ ಹಂತದ ಯೋಜನೆಯಡಿ 260 ನಗರ ಸ್ಥಳೀಯ ಸಂಸ್ಥೆಗಳಲ್ಲಿ 2,847 ಕೋಟಿ ರೂ.ವೆಚ್ಚದಲ್ಲಿ ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಮಳೆ ನೀರು ಚರಂಡಿ, ಇತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೊಸ ಆಸ್ತಿಗಳ ಸಮೀಕ್ಷೆ ನಡೆಸಿ ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು, ಆಸ್ತಿ ತೆರಿಗೆ, ನೀರಿನ ಶುಲ್ಕ ಪರಿಷ್ಕರಣೆಗೂ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

ಇದೇ ವೇಳೆ, ಬಯಲು ಬಹಿರ್ದೆಸೆ ಮುಕ್ತಗೊಂಡ ನಗರ ಸ್ಥಳೀಯ ಸಂಸ್ಥೆಗಳಿಗೆ ಬಯಲು ಬಹಿರ್ದೆಸೆ ಮುಕ್ತ ಪ್ರದೇಶವೆಂಬ ಪ್ರಮಾಣ ಪತ್ರ ನೀಡಲಾಯಿತು. ಮಂಗಳೂರು, ಮೈಸೂರು ಮಹಾನಗರ ಪಾಲಿಕೆ, ಅರಸೀಕೆರೆ ನಗರಸಭೆ, ಜಿಗಣಿ, ಚನ್ನರಾಯಪಟ್ಟಣ, ಆನೇಕಲ್‌, ಕುಡಚಿ,
ಮುಳಗುಂದ ಪುರಸಭೆಗೆ ಮುಖ್ಯ ಮಂತ್ರಿಯವರು ಪ್ರಮಾಣ ಪತ್ರ ವಿತರಿಸಿದರು. ಸಚಿವರಾದ ಆರ್‌. ರೋಷನ್‌ ಬೇಗ್‌, ಕೆ.ಜೆ.ಜಾರ್ಜ್‌, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಶಿವಾನಂದ ಎಸ್‌.ಪಾಟೀಲ್‌, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ ಸೇರಿದಂತೆ ಹಲವು ಶಾಸಕರು, ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಹೆಸರು ಇರಬೇಡವೆ?
ಸ್ವಚ್ಛ ಭಾರತ್‌ ಯೋಜನೆ ಹೊಸದೇನೂ ಅಲ್ಲ. ಈ ಹಿಂದೆ ಜಾರಿಯಲ್ಲಿದ್ದ ನಿರ್ಮಲ ಭಾರತ ಯೋಜನೆ ಹೆಸರನ್ನೇ ಬದಲಾಯಿಸಲಾಗಿದೆ. ಅದೇ ರೀತಿ “ಅಮೃತ್‌’ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ ಅನುದಾನದಷ್ಟೇ ಮೊತ್ತವನ್ನು ರಾಜ್ಯ ಸರ್ಕಾರವೂ ನೀಡಲಿದೆ. ಸ್ಮಾರ್ಟ್‌ಸಿಟಿ ಬಗ್ಗೆ ಕೆಲವರು ಭಾಷಣ ಹೊಡೆಯುತ್ತಾರೆ. ಆದರೆ ಹಣವನ್ನು ನಾವು ನೀಡುತ್ತಿದ್ದೇವೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಕೇಂದ್ರದಷ್ಟೇ ರಾಜ್ಯ ಸರ್ಕಾರವೂ ಅನುದಾನ ನೀಡಲಿದ್ದು, ಅಗತ್ಯ ಭೂಮಿ, ಇತರ ಸೌಲಭ್ಯ ಕಲ್ಪಿಸುತ್ತದೆ. ಇಷ್ಟೆಲ್ಲಾ ಮಾಡಿದ ಮೇಲೆ ನಮ್ಮ ಹೆಸರು ಇರಬೇಡವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಮಿಕವಾಗಿ ಪ್ರಶ್ನಿಸಿದರು.

ಅನಧಿಕೃತ ಬಡಾವಣೆ, ಕಟ್ಟಡ ನಿರ್ಮಾಣಗಳ ನಿಯಂತ್ರಣಕ್ಕೆ ಕಾನೂನು ತಿದ್ದುಪಡಿ ತರಲಾಗುತ್ತಿದೆ. ತಿದ್ದುಪಡಿ ಮೂಲಕ ಪೌರಾಡಳಿತ ನ್ಯಾಯಾಲಯ ಸ್ಥಾಪನೆ, ಅನಧಿಕೃತ ಬಡಾವಣೆ, ಕಟ್ಟಡ ನಿರ್ಮಾಣಕ್ಕೆ ದಂಡ, ವಾರ್ಡ್‌ ಸಮಿತಿ ರಚನೆ ಸೇರಿದಂತೆ ಇತರ ಕ್ರಮ ಕೈಗೊಳ್ಳಲಾಗುತ್ತಿದೆ. ಆನ್‌ಲೈನ್‌ನಲ್ಲಿ ಪೌರಸೇವೆ ನೀಡಿಕೆ, ಕುಂದುಕೊರತೆ ನಿವಾರಣೆಗೆ ಜನಹಿತ ಮೊಬೈಲ್‌ ಆ್ಯಪ್‌ ಆರಂಭಿಸಲು ಚಿಂತನೆ ನಡೆಸಲಾಗಿದೆ.
ಈಶ್ವರ್‌ ಖಂಡ್ರೆ, ಪೌರಾಡಳಿತ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next