Advertisement

ಕೊಳಚೆ ಪ್ರದೇಶ ನಿವಾಸಿಗಳಿಗೆ ಮನೆ ಕಲ್ಪಿಸಲು ಬದ್ಧ

10:02 AM Aug 06, 2019 | Suhan S |

ಹುಬ್ಬಳ್ಳಿ: ಹೆಗ್ಗೇರಿ ಜಗದೀಶ ನಗರದಲ್ಲಿನ ಕೊಳಚೆ ಪ್ರದೇಶ ನಿವಾಸಿಗಳಿಗೆ ಅವಶ್ಯವಾದ ಮನೆಗಳನ್ನು ಪ್ರಧಾನಿ ಅವಾಸ್‌ ಯೋಜನೆಯಡಿ ಕಲ್ಪಿಸಲು ಬದ್ಧನಾಗಿದ್ದು, ಹಾಳಾದ, ಬಿದ್ದಿರುವ ಮನೆಗಳ ಪಟ್ಟಿ ಸಿದ್ಧಪಡಿಸಿ ಅಂತಿಮ ವರದಿ ಕೊಡಿ ಎಂದು ಶಾಸಕ ಜಗದೀಶ ಶೆಟ್ಟರ ಹೇಳಿದರು.

Advertisement

ಜಗದೀಶ ನಗರ ಶಿಕ್ಕಲಗಾರ ಬಡಾವಣೆಯ ಕೊಳಗೇರಿಗೆ ಸೋಮವಾರ ಭೇಟಿ ಕೊಟ್ಟು ವೀಕ್ಷಿಸಿದ ನಂತರ ಶ್ರೀ ಯಲ್ಲಮ್ಮಾದೇವಿ ದೇವಸ್ಥಾನದಲ್ಲಿ ಮಾತನಾಡಿದ ಅವರು, 1984ರಲ್ಲಿ ವಾಂಬೆ ಯೋಜನೆಯಡಿ ನಿರ್ಮಿಸಲಾಗಿತ್ತು. ಈಗ ಇಲ್ಲಿ ಕುಟುಂಬಗಳ ಸಂಖ್ಯೆ ಹೆಚ್ಚಾಗಿವೆ. ಕೆಲವು ಮನೆಗಳು ಬಿದ್ದಿವೆ ಹಾಗೂ ದುರಸ್ತಿಗೆ ಬಂದಿವೆ. ಕೆಲ ಕುಟುಂಬಗಳು ಜೋಪಡಿಯಲ್ಲಿ ವಾಸಿಸುತ್ತಿರುವುದಾಗಿ ತಿಳಿದು ಬಂದಿದೆ. ಈಗ ಸುಮಾರು 240 ಮನೆಗಳ ಅವಶ್ಯವಿದೆ ಎಂದು ಹೇಳಲಾಗುತ್ತಿದೆ. ಕಾರಣ ಪಟ್ಟಿ ಸಿದ್ಧಪಡಿಸಿಕೊಟ್ಟರೆ ಅವಶ್ಯವುಳ್ಳವರಿಗೆ ಪ್ರಧಾನಿ ಆವಾಸ್‌ ಯೋಜನೆಯಡಿ ಅಂದಾಜು 5ಲಕ್ಷ ರೂ. ವೆಚ್ಚದಲ್ಲಿ ಆರ್‌ಸಿಸಿ ಮನೆ ನಿರ್ಮಿಸಿ ಕೊಡಲಾಗುವುದು. ಅದಕ್ಕಾಗಿ ಶೀಘ್ರವೇ ಭೂಮಿಪೂಜೆ ಮಾಡಲಾಗುವುದು ಎಂದರು.

ವಾರ್ಡ್‌ 40 ಮತ್ತು 41ರಲ್ಲಿ ಹಾದು ಹೋಗಿರುವ ನಾಲಾವನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಸ್ವಚ್ಛಗೊಳಿಸಿ ಅದರ ಸುತ್ತ ತಡೆಗೋಡೆ ನಿರ್ಮಿಸಲಾಗುವುದು. ಇದರಿಂದ ಮಳೆಗಾಲದಲ್ಲಿ ಮನೆಗಳಿಗೆ ವಿಷಜಂತುಗಳು ಬರುವುದು ಹಾಗೂ ಗೋಡೆ ಕುಸಿತ ತಡೆಗಟ್ಟಬಹುದು. ಕೆಲವರು ನಾಲಾ ಅತಿಕ್ರಮಣ ಮಾಡಿ ಮನೆಗಳನ್ನು ನಿರ್ಮಿಸಿದ್ದಾರೆ. ಅದನ್ನು ತೆರವುಗೊಳಿಸಲು ಸ್ಥಳೀಯರು ಸಹಕಾರ ನೀಡಬೇಕು ಎಂದರು.

ಜಗದೀಶ ನಗರದ ಕೊಳಚೆ ಪ್ರದೇಶ ಬಡಾವಣೆಯಲ್ಲಿ ಬಾಕಿ ಉಳಿದಿರುವ ರಸ್ತೆ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಶಾಸಕರ ನಿಧಿಯಡಿ 25ಲಕ್ಷ ರೂ. ನೀಡಿದ್ದೆ. ಈ ಕುರಿತು ಕೊಳಚೆ ನಿರ್ಮೂಲನಾ ಮಂಡಳಿಗೂ ತಿಳಿಸಿದ್ದೆ. ಆದರೆ ಅಧಿಕಾರಿಗಳಿಂದ ನಿರೀಕ್ಷಿತ ಕೆಲಸ ಆಗಿಲ್ಲ. ಹಿಂದಿನ ಅಭಿಯಂತರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಈಗ ಅಂದಾಜು ಪಟ್ಟಿ ತಯಾರಾಗಿ ಮಂಜೂರಾತಿ ದೊರೆತ ಕೂಡಲೇ ರಸ್ತೆ ನಿರ್ಮಿಸಲಾಗುವುದು. ಈ ಕುರಿತು ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸುವೆ ಎಂದರು.

ಇದೇ ಸಂದರ್ಭದಲ್ಲಿ ಕೆಲ ಮಹಿಳೆಯರು ನಮ್ಮ ಮನೆಗೆ ಹಾವು ಬರುತ್ತಿವೆ. ನಮಗೆ ಮನೆ ನಿರ್ಮಿಸಿಕೊಡಿ ಎಂದು ಆಗ್ರಹಿಸಿದರು.

Advertisement

ಶಿಕ್ಕಲಗಾರ ಸಮಾಜ ಸೇವಾ ಸಂಘದ ಅಧ್ಯಕ್ಷ ನಾಗೇಶ ಕಟ್ಟಿಮನಿ ಮಾತನಾಡಿ, ವಾಂಬೆ ಯೋಜನೆಯಡಿ 1984ರಲ್ಲಿ ಬಡಾವಣೆಯಲ್ಲಿ 80 ಮನೆ ನಿರ್ಮಿಸಿ ಕೊಡಲಾಗಿತ್ತು. ಈಗ ಕುಟುಂಬಗಳ ಸಂಖ್ಯೆ ಹೆಚ್ಚಾಗಿದ್ದು, 240 ಮನೆಗಳ ಅವಶ್ಯವಿದೆ. ನಿವಾಸಿಗಳ ಬೇಡಿಕೆ ಅನುಸಾರ ಎನ್‌ಜಿಒದಿಂದ ಸರ್ವೇ ಕೂಡ ಮಾಡಲಾಗಿದೆ. ವಾರ್ಡ್‌ 40 ಮತ್ತು 41ರಲ್ಲಿ ಹಾದು ಹೋಗಿರುವ ನಾಲಾಗೆ ತಡೆಗೋಡೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಪಾಲಿಕೆ ಮಾಜಿ ಸದಸ್ಯರಾದ ರಾಘವೇಂದ್ರ ರಾಮದುರ್ಗ, ಲಕ್ಷ್ಮಣ ಗಂಡಗಾಳೇಕರ ಮಾತನಾಡಿದರು. ಕೃಷ್ಣಾ ಗಂಡಗಾಳೇಕರ, ಯಲ್ಲಪ್ಪ ಬಾಗಲಕೋಟ, ಬಸವರಾಜ ಕಟ್ಟಿಮನಿ, ಮಂಜುನಾಥ ಮುದ್ದಿ, ಶಂಕರ ಜಿಂಗ್ಲಿ, ರಾಮಚಂದ್ರ ದೊಡಮನಿ, ಪರಶುರಾಮ ಅಮ್ಮಿನಭಾವಿ, ಮಂಜುನಾಥ ಬ್ಯಾಡಗಿ, ಪ್ರಕಾಶ ಬಿಲಾನಾ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next