ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಸಾರಿಗೆ ಸಂಪರ್ಕಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯ ಒದಗಿಸಲು ಇಲಾಖೆ ಬದ್ಧವಾಗಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.
ಹೊನ್ನಾವರದಲ್ಲಿ 5.20ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ್ ನಿಲ್ದಾಣ ಉದ್ಘಾಟಿಸಿ ಅವರು ಮಾತನಾಡಿದರು.
ಹಳೆಯ ಬಸ್ಸುಗಳ ಬದಲಿಗೆ ಜಿಲ್ಲೆಗೆ ಬೇಕಾದ ಹೊಸ ಬಸ್ಸುಗಳನ್ನು ಒದಗಿಸಲಾಗುವುದು. ಇಲಾಖೆಯನ್ನು ಮೇಲ್ದರ್ಜೆಗೇರಿಸಿ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮುಷ್ಕರ ಸಮಯದಲ್ಲಿ ಶಿಸ್ತುಕ್ರಮಕ್ಕೆ ಒಳಗಾದವರನ್ನು ಪುನಃ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ವೇತನ ಪರಿಷ್ಕರಣೆ, ಮೊದಲಾದ ಸಿಬ್ಬಂದಿ ಸಮಸ್ಯೆಯನ್ನು ಬಗೆಹರಿಸಲಾಗುವುದು. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಗ್ರಾಮೀಣ ಪ್ರದೇಶದಿಂದ ಕಲಿಯಲು ಬಂದು ಹೋಗಲು ಯಾವುದೇ ರೀತಿ ಬಸ್ಸಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ನಷ್ಟದಲ್ಲಿದ್ದ ಸಂಸ್ಥೆಯನ್ನು ಲಾಭಕ್ಕೆ ತರಲು ಸರ್ವ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಶೇ.75 ರಷ್ಟು ಜನ ಸರ್ಕಾರಿ ಬಸ್ಸುಗಳಲ್ಲಿ ಓಡಾಡುವುದರಿಂದ ಸಂಪರ್ಕ ಸಾಧನ ಹಾಗೂ ಪ್ರವಾಸೋದ್ಯಮಕ್ಕೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಲಾಗವುದು ಎಂದರು.
ಭಟ್ಕಳ ಬಸ್ ನಿಲ್ದಾಣದ ಎದುರಿನ ರಸ್ತೆ ಡಾಂಬರೀಕರಣಕ್ಕೆ 1ಕೋಟಿ ರೂ. ಬಿಡುಗಡೆ ಮಾಡಿದ್ದು, ಮುಂದಿನ ತಿಂಗಳ ಉದ್ಘಾಟನೆ ಮಾಡಲಾಗುವುದು. ಹೊನ್ನಾವರ ಬಸ್‌ನಿಲ್ದಾಣದ ಒಳಗೆ ನೀರು ನುಗ್ಗದಂತೆ ರಾಜಾಕಾಲುವೆ ದುರಸ್ತಿ ಮಾಡಲು 1ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದರು.
ಶಾಸಕ ಸುನೀಲ ನಾಯ್ಕ ಮಾತನಾಡಿ, ಅತಿಹೆಚ್ಚು ಜನ ಓಡಾಡುವ ಹೊನ್ನಾವರ ಬಸ್‌ನಿಲ್ದಾಣ ಹೊಸದಾಗಿ ನಿರ್ಮಾಣವಾಗಿರುವುದು ಸಚಿವ ರಾಮುಲು ಅವರ ಕೊಡುಗೆ. ಮಂಕಿಗೂ ಒಂದು ಸಣ್ಣ ಬಸ್‌ನಿಲ್ದಾಣ ಕೊಡಿ ಎಂದು ವಿನಂತಿಸಿದಾಗ ಸಚಿವರು ಒಪ್ಪಿ ತಲೆದೂಗಿದರು. ಬಿಜೆಪಿ ಸರ್ಕಾರ ಬಂದ ಮೇಲೆ ಮುಖ್ಯಮಂತ್ರಿಗಳಿಂದ ಆರಂಭಿಸಿ ಎಲ್ಲ ಮಂತ್ರಿಗಳು ಜಿಲ್ಲೆಗೆ ಬಂದು ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸುತ್ತಿದ್ದಾರೆ. ಇದರಿಂದ ಜಿಲ್ಲೆ ಅಭಿವೃದ್ಧಿ ಕಾಣುತ್ತಿದೆ. ಕಾಂಗ್ರೆಸ್ ಕಾಲದಲ್ಲಿ ಎಲ್ಲೇ ಹೋದರೂ ಒಂದೇ ಮಂತ್ರಿಗಳ ಮುಖ ಕಾಣುತ್ತಿತ್ತು ಎಂದು ಸುನೀಲ ನಾಯ್ಕ ಟೀಕಿಸಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ ರಾಮುಲು ಅವರ ಕೊಡುಗೆಯನ್ನು ಸ್ಮರಿಸಿ ಇವರ ಅಭಿಪ್ರಾಯಕ್ಕೆ ಸರ್ಕಾರದಲ್ಲಿ ತುಂಬ ಬೆಲೆ ಇದೆ. ರಾಮುಲು ಅವರು ಅಷ್ಟೊಂದು ಪ್ರಭಾವಿ ವ್ಯಕ್ತಿತ್ವದವರು. ಹೇಳಿದ ಕೆಲಸ ಮಾಡಿಕೊಡುತ್ತಾರೆ. ಕುಮಟಾಕ್ಕೆ ಡಿಪೋ ನೀಡಿದ್ದಾರೆ. ಹೊನ್ನಾವರ ಆರ್.ಟಿ.ಒ. ಆಫಿಸಿಗೆ ಭೂಮಿ ಮಂಜೂರಾಗಿದ್ದು ಕಟ್ಟಡ ಕೊಡಿ ಎಂದು ವಿನಂತಿಸಿದರು. ತಕ್ಷಣ ಸಚಿವ ಶ್ರೀರಾಮುಲು ನಾನು ಬಂದು ಅಡಿಗಲ್ಲು ಹಾಕುತ್ತೇನೆ ಎಂದು ಉತ್ತರಿಸಿದರು.
ಗುತ್ತಿಗೆದಾರ ಉದಯ ಶೆಟ್ಟಿ ಹಾಗೂ ರೋಹಿತ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಉಪಸ್ಥಿತರಿದ್ದರು. ಪಟ್ಟಣ ಪಂಚಾಯತ ವತಿಯಿಂದ ಅಧ್ಯಕ್ಷ ಶಿವರಾಜ ಮೇಸ್ತ ಸಚಿವರನ್ನು ಸನ್ಮಾನಿಸಿದರು. ನಾಗರಾಜ ನಾಯ್ಕ ತೊರ್ಕೆ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. ಶಿರ್ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ರಾಜಕುಮಾರ ಸ್ವಾಗತಿಸಿ, ವಂದಿಸಿದರು.