Advertisement

ಹೈನುಗಾರಿಕೆ ಪ್ರೋತ್ಸಾಹಿಸಲು ಬದ್ಧ: ಬಚ್ಚೇಗೌಡ

09:37 PM Sep 15, 2019 | Team Udayavani |

ಹೊಸಕೋಟೆ: ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಸುಗಳ ಖರೀದಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಹಾಯಧನ ಒದಗಿಸುವ ಬಗ್ಗೆ ನಬಾರ್ಡ್‌ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಂಸದ ಬಿ.ಎನ್‌.ಬಚ್ಚೇಗೌಡ ಹೇಳಿದರು.

Advertisement

ನಗರದ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾಲೂಕಿನ ಜನತೆ ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಪ್ರತಿದಿನ 1.36 ಲಕ್ಷ ಲೀಟರ್‌ ಹಾಲು ಸಂಗ್ರಹಣೆಗೊಳ್ಳುತ್ತಿದೆ. 1997ರಲ್ಲಿ ಶೀಥಲೀಕರಣ ಕೇಂದ್ರ ಸ್ಥಾಪಿಸಿದ ನಂತರ ಹಾಲು ಹಾಳಾಗಿ ರೈತರು ಅನುಭವಿಸುತ್ತಿದ್ದ ನಷ್ಟ ಈಗ ನಿವಾರಣೆಗೊಂಡಿದೆ ಎಂದರು.

ಹಸಿರು ಮೇವಿನ ಕೊರತೆ: ತಾಲೂಕಿನಲ್ಲಿ ಬರ ಪರಿಸ್ಥಿತಿಯಿಂದಾಗಿ ಹಸಿರು ಮೇವಿನ ತೀವ್ರ ಕೊರತೆಯಿದ್ದು, ರಾಸುಗಳ ಪೋಷಣೆಗೆ ಪಶು ಆಹಾರವನ್ನೆ ಅವಲಂಬಿಸಬೇಕಾಗಿದೆ. ಪ್ರತಿ ತಿಂಗಳೂ 65 ಸಾವಿರ ಮೆಟ್ರಿಕ್‌ ಟನ್‌ಗಳಷ್ಟು ಬೇಡಿಕೆಯಿದ್ದು ಉತ್ಪಾದನಾ ಘಟಕಗಳು ಕಡಿಮೆಯಿರುವ ಕಾರಣ ಒಕ್ಕೂಟಕ್ಕೆ 45 ಸಾವಿರ ಮೆಟ್ರಿಕ್‌ ಟನ್‌ಗಳನ್ನಷ್ಟೇ ಪೂರೈಸಲು ಸಾಧ್ಯವಾಗುತ್ತಿದೆ. ಇದರಿಂದಾಗಿ ರೈತರು ಅಧಿಕ ಹಣ ನೀಡಿ ಖಾಸಗಿಯಾಗಿ ಪಶು ಆಹಾರ ಖರೀದಿಸಬೇಕಾದ್ದು ಅನಿವಾರ್ಯವಾಗಿದ್ದು ರಾಸುಗಳ ನಿರ್ವಹಣಾ ವೆಚ್ಚ ಹೆಚ್ಚಾಗಿದೆ ಎಂದು ತಿಳಿಸಿದರು.

ಜಾಗ ಮಂಜೂರು: ರೈತರ ಬೇಡಿಕೆಗೆ ಅನುಗುಣವಾಗಿ ಸಕಾಲದಲ್ಲಿ ಪಶು ಆಹಾರ ಪಡೆಯುವುದೇ ಅಲ್ಲದೆ ಸ್ಥಳೀಯರಿಗೂ ಉದ್ಯೋಗವಕಾಶಗಳು ದೊರಕಲು ಒಕ್ಕೂಟ ನೀಡಿರುವ ಪ್ರಸ್ತಾವನೆ ಅನ್ವಯ ತಾಲೂಕಿನ ಜಡಿಗೇನಹಳ್ಳಿ ಹೋಬಳಿಯಲ್ಲಿ ಕನಿಷ್ಠ 25 ಎಕರೆಯಷ್ಟು ಸರಕಾರಿ ಜಾಗ ಮಂಜೂರಾತಿಗೆ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು.

ತಪಾಸಣಾ ಶಿಬಿರ: ಜಾನುವಾರುಗಳಿಗೆ ಸೋಂಕು ರೋಗ ಹರಡುವುದನ್ನು ತಡೆಗಟ್ಟಲು ಪಶುಪಾಲನಾ ಇಲಾಖೆಯ ಸಹಯೋಗದಲ್ಲಿ ಗ್ರಾಮಗಳಲ್ಲಿ ತಪಾಸಣಾ ಶಿಬಿರಗಳನ್ನು ಆಯೋಜಿಸಿ ರೈತರಿಗೆ ಸೂಕ್ತ ತಿಳಿವಳಿಕೆ ನೀಡುವ ಬಗ್ಗೆ ಒಕ್ಕೂಟ ಗಮನಹರಿಸಬೇಕು. ರಾಸುಗಳ ಪೋಷಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆ್ಯಂಟಿಬಯೊಟಿಕ್ಸ್‌ಗೆ ಬಳಸುವ ಬದಲು ಸಾವಯವ ಉತ್ಪನ್ನಗಳನ್ನು ಬಳಸುವುದರಿಂದ ಗ್ರಾಹಕರು ಸಹ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

Advertisement

ಆಮದು ನಿಷೇಧ: ವಿದೇಶದ ಹಾಲಿನ ಉತ್ಪನ್ನಗಳ ಆಮದು ನಿಷೇಧಿಸುವ ಬಗ್ಗೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗುವುದು. ತಾಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಂಸದರ ಸ್ಥಳೀಯ ಅಭಿವೃದ್ಧಿ ನಿಧಿಯಿಂದ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದರು. ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ, ನಿರ್ದೇಶಕರಾದ ಸಿ.ಮಂಜುನಾಥ್‌, ಕೆ.ಎಂ.ಮಂಜುನಾಥ್‌, ತಾಲೂಕು ಹಾಲು ಉತ್ಪಾದಕ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್‌. ಕಾಮಯ್ಯ, ಪದಾಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next