Advertisement

ಶೋಷಿತರಿಗೆ ಸಮಾನ ಅವಕಾಶಕ್ಕೆ ಬದ್ಧ -“ಭೀಮ ಸಂಕಲ್ಪ” ಸಮಾವೇಶಕ್ಕೆ ಸಿದ್ದರಾಮಯ್ಯ ಚಾಲನೆ

08:57 PM Jun 09, 2023 | Team Udayavani |

ಬೆಂಗಳೂರು: ಸಮಾಜದಲ್ಲಿನ ಸಾಮಾಜಿಕ, ಆರ್ಥಿಕ ಅಸಮಾನತೆ ತೊಡೆದು ಹಾಕದಿದ್ದರೆ, ಅನ್ಯಾಯಕ್ಕೊಳಗಾದವರು ಈ ಸ್ವಾತಂತ್ರ್ಯ ಸೌಧ (ಸಮಾಜ)ವನ್ನು ಧ್ವಂಸ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

Advertisement

ರಾಜ್ಯದ ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದ ಟೌನ್‌ಹಾಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2024ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ-ಆರ್‌ಎಸ್‌ಎಸ್‌ ಅನ್ನು ನೆಲ ಕಚ್ಚಿಸುವ “ಭೀಮ ಸಂಕಲ್ಪ’ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಜಾತಿ ವ್ಯವಸ್ಥೆಗೆ ಚಲನೆ ಇರುವುದಿಲ್ಲ. ಚಲನೆ ಬರಬೇಕಾದರೆ ಸಂವಿಧಾನಬದ್ಧವಾದ ಜಾತ್ಯತೀತ ಮೌಲ್ಯಗಳು ಜಾರಿಯಾಗುವುದರೊಂದಿಗೆ ಶೋಷಿತ ಸಮುದಾಯಗಳಿಗೆ ಸಾಮಾಜಿಕ, ಆರ್ಥಿಕವಾಗಿ ಸಮಾನ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಈ ಅವಕಾಶಗಳನ್ನು ಕಲ್ಪಿಸುವುದೇ ತಮ್ಮ ರಾಜಕೀಯ ಬದ್ಧತೆ ಎಂದು ಸಿದ್ದರಾಮಯ್ಯ ಹೇಳಿದರು.
ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವರಾಗಿದ್ದ ಅನಂತ್‌ ಕುಮಾರ್‌ ಹೆಗಡೆ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಪ್ರಧಾನಿ ಮೋದಿ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತರು. ಆದರೆ, ನಾವು-ನೀವು ಸುಮ್ಮನೆ ಕೂರಲಿಲ್ಲ. ಸಂವಿಧಾನ ಬದಲಾಯಿಸಲು ಬಂದವರನ್ನೇ ನಾವು-ನೀವು ಬದಲಾಯಿಸಿದ್ದೀವಿ. ಇದು 2024ರ ಲೋಕಸಭಾ ಚುನಾವಣೆಯಲ್ಲಿಯೂ ಪ್ರತಿಧ್ವನಿಸಬೇಕು, ಮರುಕಳಿಸಬೇಕು ಎಂದು ಹೇಳಿದರು.

ಐಕ್ಯ ಹೋರಾಟ ಚಾಲನಾ ಸಮಿತಿ ಸಲ್ಲಿಸಿದ 13 ಬೇಡಿಕೆಗಳ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, ಇವುಗಳಲ್ಲಿ ಹಲವು ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದ್ದೇವೆ. ಉಳಿದವುಗಳನ್ನು ಸಂಬಂಧಿಸಿದ ಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.
ಇದೇ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಂವಿಧಾನವೇ ಕುರಾನ್‌, ಬೈಬಲ್‌ ಹಾಗೂ ಭಗವದ್ಗೀತೆ. ಅದನ್ನು ಸಂರಕ್ಷಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಕೋಮುವಾದಿ ಪಕ್ಷಕ್ಕೆ ನೆಲಕಚ್ಚಿಸುವುದರೊಂದಿಗೆ ರಾಜ್ಯಕ್ಕೆ ಭದ್ರ ಬುನಾದಿ ಹಾಕಲಾಗಿದೆ. ಇದೇ ರೀತಿ, ಲೋಕಸಭಾ ಚುನಾವಣೆಯಲ್ಲೂ ದೇಶಕ್ಕೆ ಬುನಾದಿ ಹಾಕಲು ಸಿದ್ಧರಾಗುವಂತೆ ಕರೆ ನೀಡಿದರು.

ಅಂಬೇಡ್ಕರ್‌ ಅವರ ಕನಸು ಹಾಗೂ ಸಂವಿಧಾನದ ಆಶಯವೇ ಸಮೃದ್ಧ ಭಾರತ. ಇದಕ್ಕೆ ಕಾಂಗ್ರೆಸ್‌ ಪಕ್ಷ ಪ್ರೇರಣೆಯಾಗಿ ನಿಂತಿದೆ. ಇದೀಗ ಕಾಂಗ್ರೆಸ್‌ ಘೋಷಿಸಿರುವ ಗ್ಯಾರಂಟಿಗಳು ಯಾವುದೇ ಒಂದು ಧರ್ಮ ಅಥವಾ ಜಾತಿಗೆ ಸೀಮಿತವಾಗಿದೆಯಾ ಎಂದು ಪ್ರಶ್ನಿಸಿದರು.

Advertisement

ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಎಸ್‌.ಮರಿಸ್ವಾಮಿ, ಮಾವಳ್ಳಿ ಶಂಕರ್‌, ಗುರುಪ್ರಸಾದ್‌ ಕೆರಗೋಡು, ಇಂದೂಧರ ಹೊನ್ನಾಪುರ, ಜಿಗಣಿ ಶಂಕರ್‌, ವಿ.ನಾಗರಾಜ್‌, ಎನ್‌.ವೆಂಕಟೇಶ್‌ ಸೇರಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next